ಭೀಮನ ಅಮಾವಾಸ್ಯೆಗೆ ಮ.ಬೆಟ್ಟ ಸಜ್ಜು

ಶ್ರೀ ಮಲೆಮಹದೇಶ್ವರಸ್ವಾಮಿ ಕ್ಷೇತ್ರ
ಶ್ರೀ ಮಲೆಮಹದೇಶ್ವರಸ್ವಾಮಿ ಕ್ಷೇತ್ರ
Published on

ಹನೂರು:

ಭೀಮನ ಅಮಾವಾಸ್ಯೆ ಹಿನ್ನೆಲೆಯಲ್ಲಿ ತಾಲೂಕಿನ ಮಲೆಮಹದೇಶ್ವರ ಬೆಟ್ಟದ ಮಾದಪ್ಪನ ಕ್ಷೇತ್ರ ಸಜ್ಜುಗೊಂಡಿದ್ದು, ಶ್ರೀ ಮಲೆಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದಿಂದ ಅಗತ್ಯ ಸಿದ್ಧತೆ ನಡೆದಿದೆ.

ಅಮಾವಾಸ್ಯೆ ಅಂಗವಾಗಿ ಮಾದಪ್ಪನ ಸನ್ನಿಧಿಯಲ್ಲಿ ಆ.11ರಂದು ಸಂಜೆ ಸ್ವಾಮಿಗೆ ಎಣ್ಣೆಮಜ್ಜನ ಸೇವೆ ಹಾಗೂ 12ರಂದು ಅಮಾವಾಸ್ಯೆ ವಿಶೇಷ ಪೂಜೆ ನಡೆಯಲಿವೆ. ಈಗಾಗಲೇ 2 ದಿನಗಳಿಂದ ಚಾಮರಾಜನಗರ ಸೇರಿದಂತೆ ಮಂಡ್ಯ, ಮೈಸೂರು, ಮಳವಳ್ಳಿ, ಮದ್ದೂರು, ನಂಜನಗೂಡು ಹಾಗೂ ಇನ್ನಿತರ ಕಡೆಗಳಿಂದ ಸಾವಿರಾರು ಭಕ್ತರು ಕಾಲ್ನಡಿಗೆಯಲ್ಲಿ ತೆರಳುತ್ತಿದ್ದು, ಶ್ರೀಕ್ಷೇತ್ರದಲ್ಲಿ ಬೀಡು ಬಿಡಲಿದ್ದಾರೆ.

ಹಾಗೆಯೇ ರಾಜ್ಯದ ವಿವಿಧೆಡೆಯಿಂದ ಲಕ್ಷಾಂತರ ಭಕ್ತರು ಆಗಮಿಸುವ ನಿರೀಕ್ಷೆ ಇದೆ. ಆಗಮಿಸುವ ಭಕ್ತರಿಗೆ ದೇವರ ದರ್ಶನ, ಕುಡಿಯುವ ನೀರು, ದಾಸೋಹ ಸೇರಿದಂತೆ ಸೇರಿದಂತೆ ಇನ್ನಿತರ ಅಗತ್ಯ ಮೂಲ ಸೌಕರ್ಯ ಒದಗಿಸುವುದು ಪ್ರಾಧಿಕಾರದ ಆದ್ಯ ಕರ್ತವ್ಯ. ಈ ಸಂಬಂಧ ಪ್ರಾಧಿಕಾರದ ಕಾರ್ಯದರ್ಶಿ ಜಿ. ಪುರುಷೋತ್ತಮ ಅವರು ಆ.5ರಂದು ವಿವಿಧ ಶಾಖೆಯ ನೌಕರರ ಸಭೆ ನಡೆಸಿ ಅಗತ್ಯ ನಿರ್ದೇಶನ ನೀಡಿದ್ದಾರೆ. ಅದರಂತೆಯೇ ಅಗತ್ಯ ಸಿದ್ಧತಾ ಕಾರ್ಯಗಳು ನಡೆದಿವೆ.

ದೇವರ ದರ್ಶನಕ್ಕೆ ವಿಶೇಷ ಗಮನ: ಕಳೆದ ಅಮಾವಾಸ್ಯೆಯಲ್ಲಿ ನಿರೀಕ್ಷೆಗೂ ಮೀರಿ ಲಕ್ಷಾಂತರ ಭಕ್ತರು ಆಗಮಿಸಿದ್ದ ಹಿನ್ನೆಲೆ ದೇವರ ದರ್ಶನ ಪಡೆಯಲು ಪರದಾಡುವಂತಾಯಿತು. ಹಾಗಾಗಿ ಇದಕ್ಕೆ ಆಸ್ಪದ ನೀಡದಂತೆ ಈ ಬಾರಿ ಪ್ರಾಧಿಕಾರ ಹೆಚ್ಚಿನ ಸಿಬ್ಬಂದಿ ನಿಯೋಜಿಸುವ ಮೂಲಕ ಸುಗಮವಾಗಿ ದೇವರ ದರ್ಶನ ಪಡೆಯಲು ವಿಶೇಷ ಗಮನ ಹರಿಸಿದೆ.
ಹಾಗೆಯೇ ತುರ್ತು ವಾಹನ ಹಾಗೂ ಆರೋಗ್ಯ ಸಿಬ್ಬಂದಿ ಇರುವಂತೆ ಅಗತ್ಯ ಕ್ರಮವಹಿಸಲಾಗಿದೆ. ಸ್ಕೌಟ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಹಾಗೂ ಸ್ವಯಂ ಸೇವಕರು ವಿವಿಧ ವಿಭಾಗದಲ್ಲಿ ಕಾರ್ಯನಿರ್ವಹಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಭಕ್ತರಿಗೆ ಅಗತ್ಯಕ್ಕೆ ಅನುಗುಣವಾಗಿ ಕೊರತೆಯಾಗದಂತೆ ಈಗಾಗಲೇ 3 ಲಕ್ಷ ಲಾಡು ತಯಾರಿಸಿ ದಾಸ್ತಾನಿರಿಸಲಾಗಿದ್ದು, ಬಾಣಸಿಗರಿಂದ ತಯಾರಿಕಾ ಕಾರ್ಯ ಮುಂದುವರಿದಿದೆ. ಕಾರ್ಯದರ್ಶಿ ಪುರುಷೋತ್ತಮ ಅವರು ಮಾಸ್ಟರ್ ಪ್ಲ್ಯಾನ್ ಆವರಣ ಹಾಗೂ ಕೆಲ ಸ್ಥಳಗಳಿಗೆ ಭೇಟಿ ನೀಡಿ ಕೈಗೊಂಡಿರುವ ಅಗತ್ಯ ಸಿದ್ಧತೆ ಪರಿಶೀಲಿಸಿದ್ದಾರೆ.
250 ಹೆಚ್ಚುವರಿ ಬಸ್: ಭೀಮನ ಅಮಾವಾಸ್ಯೆ ಹಿನ್ನೆಲೆಯಲ್ಲಿ ಮ.ಬೆಟ್ಟಕ್ಕೆ ರಾಜ್ಯದ ವಿವಿಧೆಡೆಯಿಂದ ಲಕ್ಷಾಂತರ ಭಕ್ತರು ಆಗಮಿಸುವ ನಿರೀಕ್ಷೆ ಇದೆ. ಹಾಗಾಗಿ ಪ್ರತಿ ನಿತ್ಯ ಸಂಚರಿಸುತ್ತಿರುವ 128 ಸಾರಿಗೆ ಬಸ್ ಜತೆಗೆ ಚಾ.ನಗರ ಸೇರಿದಂತೆ ಮಂಡ್ಯ, ಮೈಸೂರು, ಬೆಂಗಳೂರು, ಚನ್ನಪಟ್ಟಣ, ರಾಮನಗರ ಇನ್ನಿತರ ಘಟಕಗಳಿಂದ 250 ಹೆಚ್ಚುವರಿ ಬಸ್ ಸಂಚರಿಸಲಿದ್ದು, ಈಗಾಗಲೇ 60 ಬಸ್‌ಗಳ ಸಂಚಾರವನ್ನು ಆರಂಭಿಸಿವೆ.
ಝಗಮಗಿಸುತ್ತಿದೆ ಮ.ಬೆಟ್ಟ: ಈ ಅಮಾವಾಸ್ಯೆಗೆ ಲಕ್ಷಾಂತರ ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ದಾನಿಗಳ ನೆರವಿನಿಂದ ದೇಗುಲವನ್ನು ವಿವಿಧ ಪುಷ್ಪಗಳಿಂದ ಸಿಂಗರಿಸಲು ಅಗತ್ಯ ಸಿದ್ಧತೆ ನಡೆದಿದ್ದು, ಮಂಗಳವಾರ ಕಾರ್ಯರೂಪಕ್ಕೆ ಬರಲಿದೆ. ಈಗಾಗಲೇ ದೇಗುಲ ಹಾಗೂ ಮಾಸ್ಟರ್ ಪ್ಲಾನ್ ಆವರಣವನ್ನು ವಿವಿಧ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುವಂತೆ ವ್ಯವಸ್ಥೆ ಮಾಡಲಾಗಿದ್ದು, ಕಣ್ಮನ ಸೆಳೆಯುತ್ತಿದೆ.
ಭೀಮನ ಅಮಾವಾಸ್ಯೆಗೆ ಮ.ಬೆಟ್ಟಕ್ಕೆ ಲಕ್ಷಾಂತರ ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ದೇವರ ದರ್ಶನ, ನಿರಂತರ ದಾಸೋಹ, ಕುಡಿಯುವ ನೀರು ಸೇರಿದಂತೆ ಅಗತ್ಯ ಮೂಲ ಸೌಕರ್ಯ ಸಂಬಂಧ ಅಗತ್ಯ ಸಿದ್ಧತೆ ನಡೆದಿದೆ. ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಆಯಾ ವಿಭಾಗದ ಮೇಲ್ವಿಚಾರಕರಿಗೆ ಭಕ್ತರಿಗೆ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳುವಂತೆ ಸೂಚನೆ ನೀಡಲಾಗಿದ್ದು, ಅಗತ್ಯ ಕ್ರಮವಹಿಸಲಾಗಿದೆ.
ಜಿ.ಪುರುಷೋತ್ತಮ
ಕಾರ್ಯದರ್ಶಿ, ಶ್ರೀಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಮ.ಬೆಟ್ಟ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net