ಯಳಂದೂರು ತಾಲೂಕು ಕೇಂದ್ರವಾಗಿ ಆದಾಗಿನಿಂದಲೂ ಪಶು ಆಸ್ಪತ್ರೆಯ ಕಟ್ಟಡ ಇದೇ ಸ್ಥಳದಲ್ಲಿ ಇದೆ. ಇಲ್ಲಿದ್ದ ಹಳೇ ಕಟ್ಟಡಕ್ಕೆ ದಶಕಗಳ ಐತಿಹ್ಯ ಇದೆ. ಆದರೆ ಈ ಕಟ್ಟಡ ಶಿಥಿಲಗೊಂಡ ಹಿನ್ನೆಲೆಯಲ್ಲಿ ಹೊಸ ಕಟ್ಟಡ ನಿರ್ಮಾಣಕ್ಕೆ ಹಣ ಬಿಡುಗಡೆ ಮಾಡಲಾಗಿತ್ತು. ಆದರೆ ಈಗ ಕಾಮಗಾರಿ ಅಪೂರ್ಣಗೊಂಡಿರುವ ಪರಿಣಾಮ ಪಶು ಔಷಧಗಳ ಗೋದಾಮು ಮಾಡಿಕೊಂಡಿದ್ದ ಚಿಕ್ಕ ಕೊಠಡಿಗಳು, ಮತ್ತೊಂದು ಹಳೇ ಕಟ್ಟಡ ಇಲ್ಲಿನ ವೈದ್ಯರು, ಸಿಬ್ಬಂದಿಗೆ ಈಗ ಆಶ್ರಯ ತಾಣವಾಗಿದೆ. ಕಿಷ್ಕಿಂಧೆಯಂತಿರುವ ಈ ಸ್ಥಳದಲ್ಲಿ ಕುಳಿತುಕೊಳ್ಳಲೂ ಆಗದ ಪರಿಸ್ಥಿತಿ ಇದೆ. ಅಲ್ಲದೆ ಕಂಪ್ಯೂಟರ್, ವೈದ್ಯಕೀಯ ಪರಿಕರಗಳ ಶೇಖರಣೆ, ಸರ್ಕಾರದಿಂದ ಬರುವ ಸವಲತ್ತುಗಳು, ಲಸಿಕೆಗಳ ಸಂಗ್ರಹಣೆ ಮಾಡುವುದು ಇಲ್ಲಿನ ಸಿಬ್ಬಂದಿಗೆ ಸವಾಲಿನ ಕೆಲಸವಾಗಿದೆ. ತಾಲೂಕಿನ ಸುಮಾರು 10 ಸಾವಿರಕ್ಕೂ ಹೆಚ್ಚು ರಾಸುಗಳು, ಕುರಿ, ಕೋಳಿ, ನಾಯಿ ಸೇರಿದಂತೆ ಇತರ ಪ್ರಾಣಿಗಳಿಗೆ ಚಿಕಿತ್ಸೆಗಾಗಿ ಮಾಲೀಕರು ಈ ಪಶುಪಾಲನಾ ಕೇಂದ್ರವನ್ನೇ ಆಶ್ರಯಿಸಿದ್ದು, ಇದೀಗ ಮುಂದೇನು ಎಂಬ ಚಿಂತೆ ಎದುರಾಗಿದೆ.