ತಿಮ್ಮರಾಜೀಪುರದಲ್ಲಿ ಶ್ರದ್ಧಾ-ಭಕ್ತಿಯ ಹಾಲರವಿ ಉತ್ಸವ

 ತಿಮ್ಮರಾಜೀಪುರ ಗ್ರಾಮದಲ್ಲಿ ಸೋಮವಾರ ಹಾಲರವಿ ಉತ್ಸವ ವಿಜೃಂಭಣೆಯಿಂದ ನೆರವೇರಿತು.
ತಿಮ್ಮರಾಜೀಪುರ ಗ್ರಾಮದಲ್ಲಿ ಸೋಮವಾರ ಹಾಲರವಿ ಉತ್ಸವ ವಿಜೃಂಭಣೆಯಿಂದ ನೆರವೇರಿತು.
Published on
ಕೊಳ್ಳೇಗಾಲ: ಮೂರು ವರ್ಷಗಳ ಬಳಿಕ ತಾಲೂಕಿನ ತಿಮ್ಮರಾಜೀಪುರ ಗ್ರಾಮದಲ್ಲಿ ಹೊನ್ನಳ್ಳಿ ಮಾರಮ್ಮ ಹಾಗೂ ಕುರುಬನ ಕಟ್ಟೆಯ ಕಂಡಾಯಗಳ ಕೊಂಡೋತ್ಸವ ಪ್ರಯುಕ್ತ ಸೋಮವಾರ ಹಾಲರವಿ ಉತ್ಸವ ಶ್ರದ್ಧಾ-ಭಕ್ತಿಯಿಂದ ನೆರವೇರಿತು.
ಗ್ರಾಮದಲ್ಲಿರುವ ಅತ್ತಿಗೊಣೆ ಕೆರೆಯಲ್ಲಿ ಕಂಡಾಯ, ಹೊನ್ನಳ್ಳಿ ಮಾರಮ್ಮನ ಸತ್ತಿಗೆ, ಬಸವನಿಗೆ, ನಂದಿ ಕಂಬಕ್ಕೆ ಹೂ-ಹೊಂಬಾಳೆ ಧರಿಸಿ ಪೂಜೆ ಸಲ್ಲಿಸಿದ ಬಳಿಕ ವಾದ್ಯದ ಇಮ್ಮೇಳದಲ್ಲಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಇದರೊಟ್ಟಿಗೆ ಮೆರವಣಿಗೆಯಲ್ಲಿ ಗ್ರಾಮದ 122 ಬಾಲೆಯರು ಹಾಲರವಿ ಹೊತ್ತು ಸಾಗಿದ್ದು ಗಮನ ಸೆಳೆಯಿತು.
ಈ ವೇಳೆ ಮನೆ ಮುಂಭಾಗಕ್ಕೆ ಆಗಮಿಸಿದ ಕಂಡಾಯಗಳು, ಹೊನ್ನಳ್ಳಿ ಮಾರಮ್ಮನ ಸತ್ತಿಗೆ ಹಾಗೂ ಬಸವನಿಗೆ ಭಕ್ತರು ಹಣ್ಣು-ಕಾಯಿ ಸಮರ್ಪಿಸಿ ಭಕ್ತಿ ಮೆರೆದರು. ಕೊನೆಗೆ ಮೆರವಣಿಗೆ ಗ್ರಾಮದ ಬಸವನಗುಡಿಗೆ ತಲುಪಿತು.
ಹಬ್ಬದ ಹಿನ್ನೆಲೆಯಲ್ಲಿ ಗ್ರಾಮದ ಪ್ರಮುಖ ರಸ್ತೆಗಳು ಹಾಗೂ ಬೀದಿಗಳಲ್ಲಿ ಬಣ್ಣಬಣ್ಣದ ದೀಪಲಂಕಾರ ಕಂಗೊಳಿಸುತ್ತಿತ್ತು. ಮೆರವಣಿಗೆ ಬರುವ ರಸ್ತೆಯನ್ನು ರಂಗೋಲಿ, ತೋರಣಗಳಿಂದ ಶೃಂಗರಿಸಲಾಗಿತ್ತು. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ಪುಟ್ಟಣ್ಣ, ಉಪಾಧ್ಯಕ್ಷ ರಾಜು ತಿಮ್ಮರಾಜೀಪುರ, ಗೌಡ್ರು ಮಹದೇವಪ್ಪ, ಯಜ ಮಾನರಾದ ಕುರಿನಿಂಗೇಗೌಡ, ಕೆ.ಲಿಂಗಯ್ಯ, ಕೆಂಪರಾಜು ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net