ಹನೂರು: ಹಡಪದ ಅಪ್ಪಣ್ಣ ಅವರ ಕಾಯಕ ನಿಷ್ಠೆ ಉತ್ತಮ ಸಮಾಜಕ್ಕೆ ದಾರಿದೀಪ. ಇವರ ಆದರ್ಶ ಎಲ್ಲರಿಗೂ ಸ್ಫೂರ್ತಿದಾಯಕ ಎಂದು ಗ್ರೇಡ್ 2 ತಹಸೀಲ್ದಾರ್ ಪ್ರಕಾಶ್ ತಿಳಿಸಿದರು.
ಪಟ್ಟಣದ ಲೋಕೋಪಯೋಗಿ ಇಲಾಖೆಯ ಅತಿಥಿ ಗೃಹದ ಸಭಾಂಗಣದಲ್ಲಿ ಬುಧವಾರ ತಾಲೂಕು ಆಡಳಿತದ ವತಿಯಿಂದ ಆಯೋಜಿಸಿದ್ದ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
12ನೇ ಶತಮಾನದಲ್ಲಿ ಶ್ರೀ ಬಸವೇಶ್ವರರ ಆಸ್ಥಾನದಲ್ಲಿದ್ದ ಹಡಪದ ಅಪ್ಪಣ್ಣ ಅವರು ವಚನ ಚಳವಳಿ ಹಾಗೂ ಸಾಮಾಜಿಕ ಕ್ರಾಂತಿಯ ಹರಿಕಾರರು. ಇವರು ತಾಂಬೂಲ ತಯಾರು ಮಾಡುವ ಕಾಯಕದಲ್ಲಿದ್ದುಕೊಂಡೇ 200ಕ್ಕೂ ಹೆಚ್ಚು ವಚನಗಳನ್ನು ರಚಿಸುವುದರ ಮೂಲಕ ಉತ್ತಮ ಸಮಾಜಕ್ಕೆ ಕೊಡುಗೆ ನೀಡಿದ್ದಾರೆ. ಶರಣರಲ್ಲಿ ಇರಬೇಕಾದ ಕಾಯಕನಿಷ್ಠೆ, ಭಕ್ತಿ, ಆಚಾರ, ವಿಚಾರಗಳನ್ನು ವಚನಗಳಲ್ಲಿ ಸಾಹಿತ್ಯೀಕರಿಸಿದ್ದು, ಸಮಾಜದಲ್ಲಿದ್ದ ಮೌಢ್ಯವನ್ನು ಹೋಗಲಾಡಿಸಲು ಪಣತೊಟ್ಟಿದ್ದರು. ಹಾಗಾಗಿ ಇವರ ಆದರ್ಶ ಒಂದು ಸಮುದಾಯಕ್ಕೆ ಸೀಮಿತವಾಗದೆ ಎಲ್ಲ ವರ್ಗಕ್ಕೂ ಸ್ಫೂರ್ತಿಯಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ಇವರ ಆದರ್ಶವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದರ ಮೂಲಕ ಕಾಯಕ ನಿಷ್ಠೆ ಮೆರೆಯಬೇಕು. ಇದರಿಂದ ಜೀವನದಲ್ಲಿ ಉನ್ನತಿ ಸಾಧ್ಯ ಎಂದು ತಿಳಿಸಿದರು.
ಸವಿತಾ ಸಮಾಜದ ಮಾಜಿ ಅಧ್ಯಕ್ಷ ರಾಜು, ಮುಖಂಡರಾದ ವೆಂಕಟೇಶ್, ಗುರು, ಮಂಜು, ರಾಜೇಶ್, ರವಿ, ಅರುಣಾಚಲ, ಗುರುರಾಜು, ಶಾಂತಿ, ಭಾಗ್ಯಾ, ಕುಮಾರಿ, ಅನಿತಾ ಹಾಗೂ ಕಂದಾಯ ಇಲಾಖೆಯ ನೌಕರರು ಇದ್ದರು.