ಎರಡನೇ ಬಳ್ಳಾರಿ ಆಗಲಿದೆ ಗುಂಡ್ಲುಪೇಟೆ

ನಿರಂಜನಕುಮಾರ್
ನಿರಂಜನಕುಮಾರ್
Published on
ಗುಂಡ್ಲುಪೇಟೆ: ಇನ್ನು ಕೆಲವೇ ದಿನಗಳಲ್ಲಿ ಗುಂಡ್ಲುಪೇಟೆ ತಾಲೂಕು ಎರಡನೇ ಬಳ್ಳಾರಿ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ, ಕ್ಷೇತ್ರದ ಶಾಸಕರು ತಮ್ಮನ್ನು ಬಿಜಿನೆಸ್‌ಮ್ಯಾನ್ ಎಂದು ಹೇಳಿಕೊಳ್ಳುವ ಮೂಲಕ ಗಣಿ ಸಂಪತ್ತನ್ನು ಲೂಟಿ ಮಾಡಲು ಮುಂದಾಗಿದ್ದಾರೆ ಎಂದು ಮಾಜಿ ಶಾಸಕ ಸಿ.ಎಸ್.ನಿರಂಜನ್‌ಕುಮಾರ್ ಆರೋಪಿಸಿದರು.
ತಾಲೂಕಿನ ವ್ಯಾಪ್ತಿಯಲ್ಲಿ ಟಿಪ್ಪರ್ ವಾಹನಗಳಿಂದ ಹೆಚ್ಚಾಗುತ್ತಿರುವ ಅಪಘಾತಗಳನ್ನು ಖಂಡಿಸಿ ಪಟ್ಟಣದ ನೂತನ ಪ್ರವಾಸಿ ಮಂದಿರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಿಂದೆ ಬೆರಳಣಿಕೆಯಲ್ಲಿ ಇದ್ದಂತಹ ಕ್ವಾರಿ ಹಾಗೂ ಕ್ರಷರ್‌ಗಳು ಇತ್ತೀಚಿಗೆ ಹೆಚ್ಚಾಗಿವೆ. ಟಿಪ್ಪರ್‌ಗಳ ಸಂಖ್ಯೆ ಸಾವಿರ ಗಡಿ ದಾಟಿದೆ. ಸಣ್ಣ ಪ್ರದೇಶದಲ್ಲಿ ಕಾನೂನಾತ್ಮಕವಾಗಿ, ಕಾನೂನುಬಾಹಿರವಾಗಿ ಎಷ್ಟು ಕ್ವಾರಿಗಳು ನಡೆಯುತ್ತಿವೆ ಎಂಬುವುದೇ ತಿಳಿಯದಂತಾಗಿದ್ದು, ಕೂಡಲೇ ಕಡಿವಾಣ ಹಾಕಬೇಕಾಗಿದೆ ಎಂದು ಹೇಳಿದರು.
ಟಿಪ್ಪರ್‌ಗಳ ಹಾವಳಿಯಿಂದ ವಾರಕ್ಕೆ ಮೂರರಂತೆ ಅಪಘಾತಗಳು ಸಂಭವಿಸುತ್ತಿದ್ದು, ಸಾವು-ನೋವುಗಳ ಪ್ರಮಾಣ ಸಹ ಹೆಚ್ಚುತ್ತಿದೆ. ಇಷ್ಟಾದರೂ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಕಂಡುಕಾಣದಂತೆ ವರ್ತಿಸುತ್ತಿದ್ದಾರೆ. ಚಿಕ್ಕತುಪ್ಪೂರಿನ ಬಳಿ ಶಾಲಾ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗುತ್ತಿದ್ದ ಟೆಂಪೋ ಹಾಗೂ ಟಿಪ್ಪರ್ ನಡುವೆ ನಡೆದ ಅಪಘಾತದಲ್ಲಿ 7ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ತೀವ್ರವಾದ ಅಪಘಾತ ಸಂಭವಿಸಿ ಸಾವು-ನೋವಿನ ನಡುವೆ ನರಳಾಡುತ್ತಿದ್ದರೆ ಒಬ್ಬರೇ ಅಧಿಕಾರಿಯೂ ಆಸ್ಪತ್ರೆಗೆ ಭೇಟಿ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಷರತ್ತುಬದ್ಧ ಕಾನೂನಾತ್ಮಕವಾಗಿ ಟಿಪ್ಪರ್‌ಗಳ ಸಂಚಾರಕ್ಕೆ ಇಲಾಖೆಯ ಅಧಿಕಾರಿಗಳು ಮುಂದಾಗಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ತಾಲೂಕಿನ ಜನತೆ ಹಾಗೂ ರೈತರೊಂದಿಗೆ ಬೀದಿಗೆ ಇಳಿದು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನಿಡಿದರು.
ಈ ಸಂದರ್ಭದಲ್ಲಿ ಮಾಜಿ ಪುರಸಭಾ ಅಧ್ಯಕ್ಷ ಜಿಡಿಎಲ್ ಸುರೇಶ್ ಮಾತನಾಡಿದರು. ತಾಲೂಕು ಬಿಜೆಪಿ ಮಂಡಲದ ಅಧ್ಯಕ್ಷ ಮಹದೇವ್ ಪ್ರಸಾದ್, ಮಾಜಿ ಪುರಸಭಾ ಸದಸ್ಯ ನಾಗೇಶ್, ಪಕ್ಷದ ಮುಖಂಡರಾದ ಬಸವರಾಜು, ಡಾ.ನವೀನ್ ಮೌರ್ಯ, ಸುನೀಲ್, ಮಹೇಂದ್ರ, ಪ್ರಣಯ್, ನಮೋ ಮಂಜು, ನಾಗೇಂದ್ರ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net