ಗ್ರಾಪಂಗಳಲ್ಲಿ ಜನರ ಕೆಲಸ ವಿಳಂಬ

 ಗುಂಡ್ಲುಪೇಟೆ ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿ.
ಗುಂಡ್ಲುಪೇಟೆ ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿ.
Published on
ಗುಂಡ್ಲುಪೇಟೆ: ಗ್ರಾಮ ಪಂಚಾಯಿತಿಗಳಿಗೆ ಸರ್ಕಾರ ಸಮರ್ಪಕ ಅನುದಾನ ನೀಡದಿರುವುದು, ಅಭಿವೃದ್ಧಿ ಅಧಿಕಾರಿ ಹಾಗೂ ಸಿಬ್ಬಂದಿ ನಿಯೋಜನೆ ಮಾಡದ ಪರಿಣಾಮ ಯಾವುದೇ ಕೆಲಸ ಕಾರ್ಯಗಳು ಆಗುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅನುದಾನದ ಕೊರತೆ: ಸರ್ಕಾರ ಕಳೆದ ಎರಡು ವರ್ಷಗಳಿಂದ 15 ಹಾಗೂ 16ನೇ ಸಾಲಿನಲ್ಲಿ ಗ್ರಾಮ ಪಂಚಾಯಿತಿಗಳಿಗೆ ಅನುದಾನವನ್ನೇ ನೀಡಿಲ್ಲ. ಇದರಿಂದ ಸಣ್ಣ ಪುಟ್ಟ ಕೆಲಸ ಮಾಡಲೂ ಅನುದಾನವಿಲ್ಲದಂತಾಗಿದ್ದು, ಇದರಿಂದ ಪಂಚಾಯಿತಿಗಳ ಅಗತ್ಯ ಕಾರ್ಯಗಳಾದ ಸ್ವಚ್ಛತೆ ನಿರ್ವಹಣೆ, ಕುಡಿಯುವ ನೀರು ಸರಬರಾಜು, ನರೇಗಾ ಯೋಜನೆಯಲ್ಲಿ ಕೆಲಸ ಮಾಡಿದ ಕಾರ್ಮಿಕರಿಗೆ ಕೂಲಿ ವಿತರಣೆ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಕಾಮಗಾರಿ ಪೂರ್ಣಗೊಂಡರೂ ಹಣ ಬಿಡುಗಡೆ ಮಾಡದ ಪರಿಣಾಮ ನರೇಗಾ ಯೋಜನೆಯಲ್ಲಿ ಕೆಲಸ ಮಾಡಿದ ಕಾರ್ಮಿಕರಿಗೆ ಸಕಾಲದಲ್ಲಿ ಕೂಲಿ ಹಣ ಕೈಸೇರದಂತಾಗಿದೆ. ಹಲವು ಗ್ರಾಮಗಳಲ್ಲಿ ಸ್ವಚ್ಛತೆ ಮರೀಚಿಕೆಯಾಗಿದ್ದು, ಮಳೆಗಾಲದಲ್ಲಿ ರೋಗ ರುಜಿನಗಳು ವ್ಯಾಪಿಸುವ ಆತಂಕ ಎದುರಾಗಿದೆ. ಕುಡಿಯುವ ನೀರಿಗಾಗಿ ಜನತೆ ಹಾಹಾಕಾರಪಡುವಂತಾಗಿದೆ. ವಾಣಿಜ್ಯ ಮಳಿಗೆಗಳು ಹಾಗೂ ಸ್ಥಳೀಯ ಸಂಪನ್ಮೂಲಗಳಿಲ್ಲದ ಪಂಚಾಯಿತಿಗಳು ತೆರಿಗೆ ಸಂಗ್ರಹವನ್ನೇ ಅವಲಂಬಿಸಿವೆ.
ಸಾರ್ವಜನಿಕರ ಸಂಕಟ: ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಸೇರಿದ 34 ಗ್ರಾಮ ಪಂಚಾಯಿತಿಗಳಲ್ಲಿ 8 ಪಂಚಾಯಿತಿಗಳಲ್ಲಿ ಹುದ್ದೆ ಖಾಲಿಯಿದ್ದು ಅಕ್ಕಪಕ್ಕದ ಪಂಚಾಯಿತಿಗಳ ಅಭಿವೃದ್ಧಿ ಅಧಿಕಾರಿಗೆ ಅವುಗಳ ಜವಾಬ್ದಾರಿ ನೀಡಲಾಗಿದೆ. ಇತ್ತೀಚಿನ ದಿನಗಳಲ್ಲಿ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿಯೂ ಕಾರ್ಯದೊತ್ತಡ ಹೆಚ್ಚಾಗುತ್ತಿದ್ದು ತಮ್ಮ ಪಂಚಾಯಿತಿಗಳ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸುವುದೇ ದೊಡ್ಡದಾಗಿರುವ ಸಂದರ್ಭದಲ್ಲಿ ಎರಡೆರಡು ಪಂಚಾಯಿತಿಗಳ ನಿರ್ಹವಣೆ ಮಾಡುವುದು ಪಿಡಿಒಗಳಿಗೆ ಭಾರಿ ಸವಾಲಾಗಿ ಪರಿಣಮಿಸಿದೆ. ವಾರದ ಎರಡು ದಿನ ಮೂಲ ಪಂಚಾಯಿತಿ ಮತ್ತು ಇನ್ನೆರಡು ದಿನ ಪ್ರಭಾರ ಪಂಚಾಯಿತಿಗೆ ಭೇಟಿ ನೀಡಬೇಕಾಗಿದೆ. ಈ ನಡುವೆ ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿಗಳಲ್ಲಿ ಕರೆಯುವ ಮೀಟಿಂಗ್‌ನಲ್ಲಿ ಭಾಗವಹಿಸಬೇಕಾಗಿದೆ. ಕಾಮಗಾರಿಗಳ ಬಿಲ್ ಪಾಸ್ ಮಾಡಲು ತೆರಿಗೆ ಸಂಗ್ರಹ ಹಾಗೂ ಅನುದಾನ ಹೊಂದಿಸುವುದು ಅಧಿಕಾರಿಗಳಿಗೆ ತಲೆನೋವಾಗುತ್ತಿದೆ.
ಸಿಬ್ಬಂದಿ ಕೊರತೆ: ಸರ್ಕಾರ ಗ್ರಾಮ ಪಂಚಾಯಿತಿಗಳಿಗೆ ಹೊಸದಾಗಿ ಸಿಬ್ಬಂದಿ ನೇಮಕ ಮಾಡದ ಹಾಗೂ ಮುಂಬಡ್ತಿ ನೀಡದ ಪರಿಣಾಮ ಎಂಟಕ್ಕೂ ಹೆಚ್ಚಿನ ಪಂಚಾಯಿತಿಗಳಲ್ಲಿ ಬಿಲ್ ಕಲೆಕ್ಟರ್, 20ಕ್ಕೂ ಹೆಚ್ಚಿನ ಕಾರ್ಯದರ್ಶಿಗಳು, 15ಕ್ಕೂ ಹೆಚ್ಚಿನ ಕಂಪ್ಯೂಟರ್ ಆಪರೇಟರ್, 40ಕ್ಕೂ ಹೆಚ್ಚು ಗ್ರಾಮಗಳಲ್ಲಿ ವಾಟರ್‌ಮನ್‌ಗಳ ಕೊರತೆಯಾಗಿದೆ. ಇದರಿಂದ ತೆರಿಗೆ ವಸೂಲಿ, ನೀರಿನ ಕರ ಸಂಗ್ರಹ ಹಾಗೂ ನೀರಿನ ಸರಬರಾಜಿನ ಮೇಲೆ ತೀವ್ರ ದುಷ್ಪರಿಣಾಮ ಬೀರುತ್ತಿದೆ.
ಆಡಳಿತಾಧಿಕಾರಿ ನೇಮಕ: ಗ್ರಾಮ ಪಂಚಾಯಿತಿ ಸದಸ್ಯರ ಅಧಿಕಾರಾವಧಿ ಮುಗಿದಿದ್ದರಿಂದ ಪ್ರತಿ ಗ್ರಾಮ ಪಂಚಾಯಿತಿಗಳಿಗೂ ಆಡಳಿತಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಬೇರೆ ಬೇರೆ ಇಲಾಖೆಗಳಲ್ಲಿ ಕೆಲಸ ಮಾಡುವ ಈ ಅಧಿಕಾರಿಗಳು ತಮ್ಮ ದೈನಂದಿನ ಕರ್ತವ್ಯದ ಜತೆಗೆ ಗ್ರಾಮ ಪಂಚಾಯಿತಿಗಳ ಹೊಣೆಯನ್ನೂ ಹೆಚ್ಚುವರಿಯಾಗಿ ನಿರ್ವಹಿಸಬೇಕಾಗಿದೆ. ಇದರಿಂದ ಅವರು ತಮಗೆ ಹೆಚ್ಚುವರಿ ಹೊಣೆಯಾಗಿರುವ ಗ್ರಾಮ ಪಂಚಾಯಿತಿಗಳಿಗೆ ಪ್ರತಿದಿನವೂ ಹೋಗಲು ಸಾಧ್ಯವಾಗುತ್ತಿಲ್ಲ. ವಾರಕ್ಕೊಮ್ಮೆಯೋ ಹತ್ತು ದಿನಕ್ಕೊಮ್ಮೆಯೋ ಬರುವ ಆಡಳಿತಾಧಿಕಾರಿಗಳು ಕಡತಗಳು ಹಾಗೂ ಬಿಲ್‌ಗಳಿಗೆ ಸಹಿ ಮಾಡುವುದು ತಡವಾಗುವುದರಿಂದ ಸಾರ್ವಜನಿಕರ ಕೆಲಸ ಕಾರ್ಯಗಳು ತೀವ್ರ ವಿಳಂಬವಾಗುತ್ತಿದೆ.
ಇ-ಸ್ವತ್ತು ಬಂದ್, ಪಂಚಾಯಿತಿ ಆದಾಯ ಖೋತಾ: ಇತ್ತೀಚೆಗೆ ಕಾವೇರಿ ತಂತ್ರಾಂಶದಲ್ಲಿ ಸ್ವಲ್ಪ ಸಮಸ್ಯೆ ಎದುರಾಗಿರುವುದರಿಂದ ಯಾವುದೇ ಪಂಚಾಯಿತಿಗಳಲ್ಲಿಯೂ ಇ-ಸ್ವತ್ತುಗಳನ್ನು ಮಾಡಲಾಗುತ್ತಿಲ್ಲ. ಇದರಿಂದ ಗ್ರಾಮ ಪಂಚಾಯಿತಿಗಳ ಮುಖ್ಯ ಆದಾಯದ ಮೂಲವೂ ಬಂದ್ ಆಗಿದ್ದು ಸಾರ್ವಜನಿಕರು ಕಟ್ಟುವ ತೆರಿಗೆ ಹಣವನ್ನೇ ಕಾಯುವಂತಾಗಿದೆ.
ಕೈಗೆ ಸಿಗದ ಪಿಡಿಒ, ಕರೆ ಸ್ವೀಕರಿಸದ ತಾಪಂ ಇಒ: ಪಿಡಿಒಗಳಿಗೆ ಎರಡೆರಡು ಗ್ರಾಮ ಪಂಚಾಯಿತಿಗಳ ಹೊಣೆ ಹೊರಿಸಿದ ಕಾರಣ ಅವರನ್ನು ಪತ್ತೆ ಮಾಡುವುದೇ ಕಷ್ಟವಾಗುತ್ತಿದೆ. ಇದರಿಂದ ಯಾವುದೇ ಪಂಚಾಯಿತಿಯಲ್ಲಿಯೂ ಸಕಾಲದಲ್ಲಿ ಕೆಲಸ ಕಾರ್ಯಗಳು ಆಗುತ್ತಿಲ್ಲ. ಅರ್ಜಿ ಸಲ್ಲಿಸಿ ವರ್ಷವಾದರೂ ತಮ್ಮ ಆಸ್ತಿಗಳ ಖಾತೆ ಮಾಡಿಸಲು ಹಾಗೂ ಇ-ಸ್ವತ್ತು ಮಾಡಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಎಲ್ಲ ಗ್ರಾಮ ಪಂಚಾಯಿತಿಗಳ ಮೇಲುಸ್ತುವಾರಿಯಾಗಿರುವ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸರ್ಕಾರ ನೀಡಿರುವ ಸಿಮ್ ಕಾರ್ಡ್ ಬಳಕೆ ಮಾಡದೆ ನಿಷ್ಕ್ರಿಯವಾಗಿದೆ. ತಮ್ಮ ವೈಯಕ್ತಿಕ ಮೊಬೈಲ್ ನಂಬರಿಗೆ ಯಾರೇ ಕರೆ ಮಾಡಿದರೂ ಸ್ವೀಕರಿಸುವುದಿಲ್ಲ. ಕಚೇರಿಗೆ ಹುಡುಕಿಕೊಂಡು ಬಂದರೂ ಸ್ಪಂದಿಸುವುದಿಲ್ಲ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.
ಅಭಿವೃದ್ಧಿ ಅಧಿಕಾರಿಗಳಿಗೆ ಎರಡೆರಡು ಗ್ರಾಮ ಪಂಚಾಯಿತಿಗಳ ಹೊಣೆ ನೀಡಿರುವುದರಿಂದ ಆಯಾ ಗ್ರಾಮ ಪಂಚಾಯಿತಿಗಳ ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳನ್ನು ಮಾಡಿಸಿಕೊಳ್ಳಲು ಸಾಧ್ಯವಾಗದೆ ತುಂಬಾ ಸಮಸ್ಯೆ ಎದುರಿಸುವಂತಾಗಿದೆ. ಪಿಡಿಒಗಳನ್ನು ಹುಡುಕಿಕೊಂಡು ಗ್ರಾಮ ಪಂಚಾಯಿತಿಗೆ ಹೋಗಿ ವಿಚಾರಿಸಿದರೆ ಪ್ರಭಾರ ಪಂಚಾಯಿತಿಗೆ ಹೋಗಿದ್ದಾರೆ ಎಂಬ ಉತ್ತರ ಬರುತ್ತಿದೆ. ಆದರೆ ಅವರನ್ನು ಹುಡುಕಿಕೊಂಡು ಹೋದರೆ ಅಲ್ಲಿಯೂ ಸಿಗುತ್ತಿಲ್ಲ. ಇದರಿಂದ ಅರ್ಜಿ ಸಲ್ಲಿಸಿ ನಾಲ್ಕು ತಿಂಗಳಾದರೂ ನಿವೇಶನಗಳ ಇ-ಸ್ವತ್ತು ಮಾಡಿಸಿಕೊಳ್ಳಲು ಸಾಧ್ಯವಾಗದಂತಾಗಿದೆ. ಈ ಬಗ್ಗೆ ತಾಲೂಕು ಪಂಚಾಯಿತಿಗೆ ದೂರು ನೀಡಲು ಹೋದರೆ ಕಾರ್ಯನಿರ್ವಾಹಕಾಧಿಕಾರಿಯಂತೂ ಸ್ವಲ್ಪವೂ ಸ್ಪಂದಿಸುತ್ತಿಲ್ಲ. ನಮ್ಮ ಗೋಳನ್ನು ಯಾರಿಗೂ ಹೇಳಿಕೊಳ್ಳಲಾಗುತ್ತಿಲ್ಲ.
ಸಂಪತ್ತು, ಕುಂದಕೆರೆ
ಸರ್ಕಾರ ಹೊಸದಾಗಿ ನೇಮಕ ಮಾಡುವವರೆಗೆ ಕೂಡಲೇ ಎಲ್ಲ ಪಂಚಾಯಿತಿಗಳಿಗೂ ಪಿಡಿಒಗಳನ್ನು ನಿಯೋಜಿಸುವಂತೆ ಜಿಲ್ಲಾ ಪಂಚಾಯಿತಿ ಸಿಇಒ ಅವರಿಗೆ ತಿಳಿಸಿದ್ದೇನೆ. ಸಾರ್ವಜನಿಕರ ದೂರುಗಳಿಗೆ ಸ್ಪಂದಿಸುವಂತೆ ತಾಲೂಕು ಪಂಚಾಯಿತಿ ಇಒ ಅವರಿಗೆ ಸೂಚಿಸಲಾಗುವುದು.
ಎಚ್.ಎಂ.ಗಣೇಶ್ ಪ್ರಸಾದ್, ಶಾಸಕ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net