ಸಮಾಜಕ್ಕೆ ಸಾಹಿತ್ಯದಲ್ಲಿ ಬೆಳಕು ನೀಡಿದವರು ಜಿಎಸ್‌ಎಸ್

 ಚಾಮರಾಜನಗರ ತಾಲೂಕಿನ ಕುದೇರು ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ಡಾ. ಜಿಎಸ್‌ಎಸ್ ನೆನಪುಗಳ ಹಣತೆ ಉಪನ್ಯಾಸ ಕಾರ್ಯಕ್ರಮದಲ್ಲಿ ಮೈಸೂರು ಜೆಎಸ್‌ಎಸ್ ವಿದ್ಯಾಪೀಠದ ನಿರ್ದೇಶಕ ಪ್ರೊ.ಮೊರಬದ ಮಲ್ಲಿಕಾರ್ಜುನ ಅವರನ್ನು ಸನ್ಮಾನಿಸಲಾಯಿತು. ಕೆ.ವೆಂಕಟರಾಜು, ಪ್ರಕಾಶ್‌ರಾಜ್ ಮೇಹು, ಸಿ.ಎಂ.ನರಸಿಂಹಮೂರ್ತಿ, ಪ್ರೊ.ಎ.ಎಂ.ಶಿವಸ್ವಾಮಿ, ಸಿಂಧು ಮತ್ತು ಇತರರು ಇದ್ದರು.
ಚಾಮರಾಜನಗರ ತಾಲೂಕಿನ ಕುದೇರು ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ಡಾ. ಜಿಎಸ್‌ಎಸ್ ನೆನಪುಗಳ ಹಣತೆ ಉಪನ್ಯಾಸ ಕಾರ್ಯಕ್ರಮದಲ್ಲಿ ಮೈಸೂರು ಜೆಎಸ್‌ಎಸ್ ವಿದ್ಯಾಪೀಠದ ನಿರ್ದೇಶಕ ಪ್ರೊ.ಮೊರಬದ ಮಲ್ಲಿಕಾರ್ಜುನ ಅವರನ್ನು ಸನ್ಮಾನಿಸಲಾಯಿತು. ಕೆ.ವೆಂಕಟರಾಜು, ಪ್ರಕಾಶ್‌ರಾಜ್ ಮೇಹು, ಸಿ.ಎಂ.ನರಸಿಂಹಮೂರ್ತಿ, ಪ್ರೊ.ಎ.ಎಂ.ಶಿವಸ್ವಾಮಿ, ಸಿಂಧು ಮತ್ತು ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮೈಸೂರು ಜೆಎಸ್‌ಎಸ್ ವಿದ್ಯಾಪೀಠದ ನಿರ್ದೇಶಕ ಪ್ರೊ.ಮೊರಬದ ಮಲ್ಲಿಕಾರ್ಜುನ ಅಭಿಮತ
  • ಡಾ. ಜಿಎಸ್‌ಎಸ್ ನೆನಪುಗಳ ಹಣತೆ ಉಪನ್ಯಾಸ ಕಾರ್ಯಕ್ರಮ
ಚಾಮರಾಜನಗರ: ಜಿಎಸ್‌ಎಸ್ ಅವರು ತಮ್ಮ ಸಾಹಿತ್ಯದಲ್ಲಿ ಮತ್ತು ಕಾರ್ಯದಲ್ಲಿ ಈ ಸಮಾಜಕ್ಕೆ ತಮ್ಮ ಶಕ್ತಿ ಮೀರಿ ಬೆಳಕು ನೀಡಲು ಪ್ರಯತ್ನಿಸಿದರು ಎಂದು ಮೈಸೂರು ಜೆಎಸ್‌ಎಸ್ ವಿದ್ಯಾಪೀಠದ ನಿರ್ದೇಶಕ ಪ್ರೊ.ಮೊರಬದ ಮಲ್ಲಿಕಾರ್ಜುನ ತಿಳಿಸಿದರು.
ಡಾ.ಜಿ.ಎಸ್. ಶಿವರುದ್ರಪ್ಪ ಅವರ ಜನ್ಮ ಶತಮಾನೋತ್ಸವದ ಪ್ರಯುಕ್ತ ತಾಲೂಕಿನ ಕುದೇರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಹಾಗೂ ಕುದೇರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹಯೋಗದೊಂದಿಗೆ ಚಕೋರ ಸಾಹಿತ್ಯ ವಿಚಾರ ವೇದಿಕೆಯಿಂದ ಗುರುವಾರ ಆಯೋಜಿಸಿದ್ದ ಡಾ. ಜಿಎಸ್‌ಎಸ್ ನೆನಪುಗಳ ಹಣತೆ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಡಾ.ರವೀಂದ್ರನಾಥ ಠಾಕೂರರು ಬರೆದ ಒಂದು ಸಣ್ಣ ಕಥೆಯ ಆಶಯವನ್ನು ಶಿವರುದ್ರಪ್ಪ ಅವರು ಹೇಗೆ ತಮ್ಮ ಕಾವ್ಯ ಪರಂಪರೆಯಲ್ಲಿ ಮತ್ತು ಸಾಮಾಜಿಕ ಕಾರ್ಯಗಳಲ್ಲಿ ಸಾಧಿಸಿ ತೋರಿಸಿದರು ಅನ್ನುವುದನ್ನು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಮತ್ತು ಉಪನ್ಯಾಸಕರ ಸಮ್ಮುಖದಲ್ಲಿ ವಿವರಿಸಿದರು.
ಮಲ್ಲಿಕಾರ್ಜುನ ಅವರು ಹೇಳಿದ ಠಾಕೂರರ ಆ ಕಥೆ ಹೀಗಿದೆ. ಮುಳುಗುತ್ತಿರುವ ಸೂರ್ಯ ಜಗತ್ತಿಗೆ ಸಾರಿ ಹೇಳುತ್ತಾನೆ, ಹಗಲಿನ ಹನ್ನೆರಡು ಗಂಟೆ ನಾನು ಈ ಜಗತ್ತಿಗೆ ಬೆಳಕು ನೀಡಿದ್ದೇನೆ. ಇನ್ನುಳಿದ ಹನ್ನೆರಡು ಗಂಟೆ ಈ ಜಗತ್ತಿಗೆ ಯಾರು ಬೆಳಕು ನೀಡುತ್ತೀರಿ? ಅನ್ನುವ ಸವಾಲು ಎಸೆದಾಗ, ಕತ್ತಲಿನಿಂದ ಎದ್ದು ಬಂದ ಒಂದು ಸಣ್ಣ ಬುಡ್ಡಿ ದೀಪ ಹೇಳುತ್ತದೆ, ನನಗೆ ನಿನ್ನಷ್ಟು ವ್ಯಾಪಕವಾಗಿ, ಪ್ರಕಾರವಾಗಿ ಬೆಳಕು ನೀಡಲು ಸಾಧ್ಯವಾಗದಿರಬಹುದು. ಆದರೆ ಸಾಧ್ಯವಾದಷ್ಟು ನನ್ನ ಶಕ್ತಿ ಮೀರಿ ನನ್ನ ಸುತ್ತಲಿನ ಪರಿಸರಕ್ಕೆ ಬೆಳಕು ನೀಡಲು ಪ್ರಯತ್ನಿಸುತ್ತೇನೆ ಅಂತ ಹೇಳಿ ತನ್ನ ಕೆಲಸ ಪ್ರಾರಂಭಿಸಿತಂತೆ ಅನ್ನುವ ಕಥೆಯಲ್ಲಿ ಬರುವ ಆ ಬುಡ್ಡಿ ದೀಪದ ಮಾತಿನಂತೆ ಜಿಎಸ್‌ಎಸ್ ಅವರು ತಮ್ಮ ಸಾಹಿತ್ಯದಲ್ಲಿ ಮತ್ತು ಕಾರ್ಯದಲ್ಲಿ ಈ ಸಮಾಜಕ್ಕೆ ತಮ್ಮ ಶಕ್ತಿ ಮೀರಿ ಬೆಳಕು ನೀಡಲು ಪ್ರಯತ್ನಿಸಿದರು. ಹಾಗಾಗಿ ಅವರ ಕಾವ್ಯದಲ್ಲಿ ಹಣತೆ, ದೀಪ, ಜ್ಯೋತಿ ಅನ್ನುವ ಪ್ರತಿಮೆಗಳು ಮತ್ತೆ ಮತ್ತೆ ಕಾಣಿಸಿಕೊಂಡವು ಎಂದು ವಿವರಿಸಿದರು.
ಜಿಎಸ್‌ಎಸ್ ಅವರು ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಕೆಲಸ ಮಾಡುತ್ತಿದ್ದ ಸಮಯದಲ್ಲಿ ಇಡೀ ಶಿಕ್ಷಣ ವ್ಯವಸ್ಥೆಯಲ್ಲಿ ಮೌಢ್ಯವನ್ನು ತೊಲಗಿಸಿ, ವೈಚಾರಿಕತೆಯನ್ನು ಕಟ್ಟುವುದು ಹೇಗೆ? ಇಡೀ ವಿದ್ಯಾರ್ಥಿ ಸಮೂಹವನ್ನು ವೈಚಾರಿಕವಾಗಿ ಮತ್ತು ವೈಜ್ಞಾನಿಕವಾಗಿ ಚಿಂತಿಸುವಂತೆ ರೂಪಿಸುವುದು ಹೇಗೆ? ಅದಕ್ಕೆ ಏನೇನು ಕಾರ್ಯಕ್ರಮ ಮಾಡಬೇಕು ಅಂತ ಡಾ.ಎಚ್. ನರಸಿಂಹಯ್ಯ ಅವರ ಜತೆ ಸಮಾಲೋಚಿಸಿ ಕಾರ್ಯಕ್ರಮಗಳನ್ನು ರೂಪಿಸಿದ್ದರಿಂದ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಒಂದು ಆರೋಗ್ಯ ಪೂರ್ಣ ವಾತಾವರಣ ಸೃಷ್ಟಿಯಾಯಿತು. ಆ ವಾತಾವರಣದಲ್ಲಿ ಬೆಳೆದ ಹಲವಾರು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಆ ವೈಚಾರಿಕ, ವೈಜ್ಞಾನಿಕ ಚಿಂತನೆಗಳನ್ನು ಮೈಗೂಡಿಸಿಕೊಂಡು ಅದನ್ನು ಇಡೀ ನಾಡಿನಾದ್ಯಂತ ವಿಸ್ತರಿಸತೊಡಗಿದರು ಎಂದರು.
ಕಾಲೇಜಿನ ಪ್ರಾಂಶುಪಾಲ ಪ್ರೊ.ಥಿಯೋಡರ್ ಲೂಥರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸಾಹಿತಿ ಕೆ. ವೆಂಕಟರಾಜು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಾಹಿತ್ಯ ಅಕಾಡೆಮಿಯ ಸದಸ್ಯರಾದ ಪ್ರಕಾಶರಾಜ್ ಮೇಹು ಚಕೋರ ಕಾರ್ಯಕ್ರಮದ ಉದ್ದೇಶಗಳನ್ನು ವಿವರಿಸಿದರು. ಖ್ಯಾತ ಗಾಯಕರಾದ ಸಿ.ಎಂ.ನರಸಿಂಹಮೂರ್ತಿ, ಪ್ರೊ.ಎ.ಎಂ.ಶಿವಸ್ವಾಮಿ ಮತ್ತು ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಸಿಂಧು ಭಾವಗೀತೆಗಳನ್ನು ಹಾಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net