ಹನೂರು:ಕುರಟ್ಟಿಹೊಸೂರು ಹಾಗೂ ಶೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹೆಚ್ಚು ಕೆರೆಗಳು ನಿರ್ಮಾಣವಾದಾಗ ಮಾತ್ರ ಅಂತರ್ಜಲ ಮಟ್ಟ ವೃದ್ಧಿಸುತ್ತದೆ. ಆದ್ದರಿಂದ ಒತ್ತುವರಿಯಾಗಿರುವ ಕೆರೆಗಳನ್ನು ತೆರವುಗೊಳಿಸುವಂತೆ ಶಾಸಕ ಎಂ.ಆರ್. ಮಂಜುನಾಥ್ ತಿಳಿಸಿದರು.
ತಾಲೂಕಿನ ಕುರಟ್ಟಿ ಹೊಸೂರು ಗ್ರಾಮದಲ್ಲಿ ಭಾನುವಾರ 7.5 ಕೋಟಿ ರೂ., ವೆಚ್ಚದಲ್ಲಿ ದಂಟಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ ಬಳಿಕ, ಶೆಟ್ಟಳ್ಳಿ ಬಣಜಿಗ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶೆಟ್ಟಳ್ಳಿ, ಕುರಟ್ಟಿ ಹೊಸೂರು ಎಲ್ಲೇಮಾಳ ಹಾಗೂ ಕೌದಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮೂಲಸೌಕರ್ಯ ವಂಚಿತವಾಗಿರುವ ಪರಿಣಾಮ ಜನರು ವಲಸೆ ಹೋಗಿರುವುದು ನಿಜಕ್ಕೂ ವಿಪರ್ಯಾಸ. ಈ ಭಾಗದಲ್ಲಿ ಕಳೆದ 15 ವರ್ಷದಿಂದ ಮಳೆಯಾಗದ ಪರಿಣಾಮ ಅಂತರ್ಜಲ ಮಟ್ಟ ತೀವ್ರ ಕುಸಿದಿದ್ದು, ಕೃಷಿ ಹಾಗೂ ಕುಡಿವ ನೀರಿಗೆ ಸಮಸ್ಯೆಯಾಗಿದೆ. ಹಾಗಾಗಿ ಈ ಭಾಗಕ್ಕೆ ನೀರಾವರಿ ಸೌಕರ್ಯವನ್ನು ಕಲ್ಪಿಸುವುದು ಅಗತ್ಯವಾಗಿದೆ. ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಬಾರಿ ಬಜೆಟ್‌ನಲ್ಲಿ ಉಡುತೊರೆಹಳ್ಳ ಜಲಾಶಯದ ನೀರಾವರಿ ಯೋಜನೆಗೆ 490 ಕೋಟಿ ರೂ. ಅನುದಾನವನ್ನು ಘೋಷಿಸುವುದು ನಿಜಕ್ಕೂ ವರದಾನವಾಗಿದೆ. ಇದರ ಅನುಷ್ಠಾನಕ್ಕಾಗಿ ಈಗಾಗಲೇ ಅಗತ್ಯ ಕ್ರಮವಹಿಸಲಾಗಿದೆ. ಮುಂದಿನ ದಿನಗಳಲ್ಲಿ ನೀರಾವರಿ
ಸೌಕರ್ಯವನ್ನು ಒದಗಿಸಲಾಗುವುದು ಎಂದರು.
ಅಂತರ್ಜಲ ಮಟ್ಟವನ್ನು ಉತ್ತಮಪಡಿಸುವ ಸಲುವಾಗಿ ಈ ಭಾಗದಲ್ಲಿ ಹೆಚ್ಚು ಕೆರೆಗಳು ನಿರ್ಮಾಣವಾಗಬೇಕಿದೆ. ಈ ಬಗ್ಗೆ ಪ್ರತಿಯೊಬ್ಬರೂ ಮುತುವರ್ಜಿ ವಹಿಸಬೇಕು. ಮುಂದಿನ ದಿನಗಳಲ್ಲಿ ಭಾಗಕ್ಕೆ ಇನ್ನಷ್ಟು ಅಗತ್ಯ ಮೂಲ ಸೌಕರ್ಯ ಒದಗಿಸಲಾಗುವುದು ಎಂದು ತಿಳಿಸಿದರು.
ಸಮುದಾಯ ಭವನಕ್ಕೆ 50 ಲಕ್ಷ ರೂ. ಅನುದಾನ: ಈಗಾಗಲೇ ಶೆಟ್ಟಳ್ಳಿಯಲ್ಲಿ ನಿರ್ಮಾಣವಾಗಿರುವ ಬಣಜಿಗ ಸಮುದಾಯ ಭವನದ ಮುಂದುವರಿದ ಅಭಿವೃದ್ಧಿ ಕಾಮಗಾರಿಗೆ 50 ಲಕ್ಷ ರೂ. ಅನುದಾನ ನೀಡಲಾಗಿದೆ. ಇನ್ನು 2 ಕೋಟಿ ರೂ. ಅನುದಾನದ ಅಗತ್ಯವಿದೆ. ಜವಾಬ್ದಾರಿ ಹೊತ್ತವರು ಕಾಮಗಾರಿಯಲ್ಲಿ ಗುಣಮಟ್ಟವನ್ನು ಕಾಯ್ದುಕೊಳ್ಳುವುದರ ಮೂಲಕ 4 ತಿಂಗಳೊಳಗೆ ಪೂರ್ಣಗೊಳಿಸಬೇಕು. ಗುಣಮಟ್ಟದ ಬಗ್ಗೆ ಗ್ರಾಮಸ್ಥರು ಹೆಚ್ಚಿನ ನಿಗಾ ವಹಿಸಬೇಕು ಎಂದು ತಿಳಿಸಿದರು.