ಹನೂರು: ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಒತ್ತನ್ನು ನೀಡಿದ್ದು, ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದು ಶಾಸಕ ಎಂ.ಆರ್.ಮಂಜುನಾಥ್ ತಿಳಿಸಿದರು.
ತಾಲೂಕಿನ ಹೂಗ್ಯಂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೆದ್ದನಪಾಳ್ಯ ಗ್ರಾಮದಲ್ಲಿ ಬುಧವಾರ 15 ಲಕ್ಷ ರೂ. ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಈ ಭಾಗದ ಸೂಳೇಕೋಬೆ ಗ್ರಾಮದಲ್ಲಿನ ಹಳ್ಳದಲ್ಲಿ ಮಳೆಗಾಲದ ವೇಳೆ ಯತೇಚ್ಛವಾದ ನೀರು ಹರಿಯುತ್ತಿತ್ತು. ಇದರಿಂದ ಹಲವು ವರ್ಷಗಳಿಂದ ಜನರು ಸಂಚಾರಕ್ಕೆ ತುಂಬ ಸಮಸ್ಯೆಯನ್ನು ಎದುರಿಸುತ್ತಿದ್ದರು. ಇದನ್ನು ಮನಗಂಡು ಸೇತುವೆ ನಿರ್ಮಾಣಕ್ಕೆ ಚಾಲನೆ ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ಜನರ ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ. ಇನ್ನು ಹೂಗ್ಯಂ ಹಾಗೂ ಮಿಣ್ಯಂ ಗ್ರಾಪಂ ವ್ಯಾಪ್ತಿಯಲ್ಲಿ 4.95 ಕೋಟಿ ರೂ. ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಯನ್ನು ಕೈಗೊಳ್ಳಲಾಗಿದೆ. ಪೆದ್ದನಪಾಳ್ಯ ಹಾಗೂ ಸಿಲಾರಿ ದೊಡ್ಡಿಯಲ್ಲಿ ಸಿಸಿ ರಸ್ತೆ, ಹೂಗ್ಯಂ ಗ್ರಾಮದಲ್ಲಿ ರಸ್ತೆ ಡಾಂಬರೀಕರಣ, ವಾಲ್ಮೀಕಿ ಬುಡಕಟ್ಟು ಆಶ್ರಮ ಶಾಲೆಗೆ ಸುತ್ತುಗೋಡೆ ಹಾಗೂ ಮಿಣ್ಯಂನಲ್ಲಿ ಸೇತುವೆ ನಿರ್ಮಾಣಕ್ಕೆ ಭೂಮಿಪೂಜೆಯನ್ನು ನೆರವೇರಿಸಲಾಗುತ್ತಿದೆ ಎಂದರು.
ಕಾಮಗಾರಿ ಜವಾಬ್ದಾರಿ ಹೊತ್ತವರು ಗುಣಮಟ್ಟವನ್ನು ಕಾಯ್ದುಕೊಳ್ಳುವುದರ ಮೂಲಕ ಶೀಘ್ರ ಪೂರ್ಣಗೊಳಿಸಬೇಕು. ಈ ಬಗ್ಗೆ ಅಧಿಕಾರಿಗಳು ನಿಗಾ ವಹಿಸಬೇಕು. ಇನ್ನು ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದ್ದು, ಅಗತ್ಯ ಕ್ರಮವಹಿಸಲಾಗಿದೆ. ಆದ್ದರಿಂದ ಕ್ಷೇತ್ರದ ಅಭಿವೃದ್ಧಿಗೆ ಪ್ರತಿಯೊಬ್ಬರೂ ಸಹಕಾರ ನೀಡಬೇಕು ಎಂದು ತಿಳಿಸಿದರು.
ಪಿಡಬ್ಲ್ಯುಡಿ ಇಲಾಖೆಯ ಎಇಇ ಚಿನ್ನಣ್ಣ, ಪಿಡಿಒ ನಂಜುಂಡಸ್ವಾಮಿ, ಮುಖಂಡರಾದ ಹುಚ್ಚಯ್ಯ, ಮುರುಗೇಶ್, ಪಳನಿಸ್ವಾಮಿ, ಬಸವಣ್ಣ, ಮುನಿಯಪ್ಪ, ಗುಂಡೂರಾವ್, ರಾಜೇಂದ್ರ, ಸೆಂದಿಲ್ ಹಾಗೂ ಇನ್ನಿತರರು ಇದ್ದರು.