ಯುದ್ಧದಿಂದ ಗ್ರಾನೈಟ್ ಬೇಡಿಕೆ ಕುಸಿತ

ಕೆ.ಶಿವಕುಮಾರ್
ಕೆ.ಶಿವಕುಮಾರ್
Published on

ಪ್ರಮುಖ ಮುಖ್ಯಾಂಶಗಳು

  • ವಿಧಾನ ಪರಿಷತ್ತಿನ ಸದಸ್ಯ ಕೆ.ಶಿವಕುಮಾರ್ ಪ್ರಶ್ನೆಗೆ ಗಣಿ ಸಚಿವ ಮಲ್ಲಿಕಾರ್ಜುನ ಉತ್ತರ
  • ಕರಿಕಲ್ಲಿಗೆ ಶೇ.10ರಿಂದ 15ರಷ್ಟು ಬೇಡಿಕೆ ಇಳಿಕೆ
ಚಾಮರಾಜನಗರ: ರಷ್ಯಾ, ಯುಕ್ರೇನ್, ಇರಾನ್ ಸೇರಿದಂತೆ ಜಾಗತಿಕವಾಗಿ ನಡೆಯುತ್ತಿರುವ ಯುದ್ಧದಿಂದ ರಫ್ತಿನ ಮಾರುಕಟ್ಟೆಯಲ್ಲಿ ಕರಿಕಲ್ಲು ಬೇಡಿಕೆ ಶೇ.10ರಿಂದ 15ರಷ್ಟು ಕುಸಿದಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.
ವಿಧಾನ ಪರಿಷತ್ತಿನ ಅಧಿವೇಶನದಲ್ಲಿ ಕಾಂಗ್ರೆಸ್ ಸದಸ್ಯ ಕೆ.ಶಿವಕುಮಾರ್ ಕೇಳಿದ್ದ ಚುಕ್ಕೆ ಗುರುತಿನ ಪ್ರಶ್ನೆಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಉತ್ತರಿಸಿದ್ದು, ಕರೊನಾ ಸಾಂಕ್ರಾಮಿಕ ರೋಗ ಹರಡುವಿಕೆಯಿಂದ ಚೀನಾ, ಇಟಲಿ ಮತ್ತು ತೈವಾನ್ ಇತರೆ ದೇಶಗಳಿಗೆ ರ‌್ತಾಗುತ್ತಿದ್ದ ಗ್ರಾನೈಟ್ ಮಾರುಕಟ್ಟೆಯಲ್ಲಿ ಬೇಡಿಕೆಯು ಕುಸಿದಿದೆ. ಉಕ್ರೇನ್ ಮತ್ತು ರಷ್ಯಾ ಯುದ್ಧದಿಂದ ರಫ್ತಿನ ಮಾರುಕಟ್ಟೆಯಲ್ಲಿ ಕರಿಕಲ್ಲಿನ ಬೇಡಿಕೆಯೂ ಕುಸಿದಿದೆ. ಇದರಿಂದ ರಾಜ್ಯ ಸರ್ಕಾರಕ್ಕೆ 2ರಿಂದ 3 ಕೋಟಿ ರೂ. ರಾಜಧನ ಸಂಗ್ರಹ ಕುಂಠಿತವಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಅನಧಿಕೃತ ಉಪಖನಿಜ ಗಣಿಗಾರಿಕೆ: ಜಿಲ್ಲೆಯಲ್ಲಿ ಅನಧಿಕೃತವಾಗಿ ಎಷ್ಟು ಗಣಿಗಾರಿಕೆ ನಡೆಯುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿರುವ ಸಚಿವ, 2023-24ನೇ ಸಾಲಿನಿಂದ 2025-26ನೇ ಸಾಲಿನವರೆಗೆ ಒಟ್ಟು 32 ಅನಧಿಕೃತ ಉಪಖನಿಜ ಗಣಿಗಾರಿಕೆ ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ. 49.69 ಲಕ್ಷ ರೂ. ದಂಡ ವಿಧಿಸಲಾಗಿದೆ. 6 ಮೊಕದ್ದಮೆಗಳನ್ನು ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.

ಆತಂಕದಲ್ಲಿರುವ ಉದ್ಯಮಿಗಳು:ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧ ಗ್ರಾನೈಟ್ ಉದ್ಯಮದ ಮೇಲೆ ಕಾರ್ಮೋಡ ಕವಿಯುಂತೆ ಮಾಡಿದೆ. ಜಿಲ್ಲೆಯ ಪ್ರಮುಖ ಉದ್ಯಮವಾಗಿರುವ ಕರಿಕಲ್ಲು ಗಣಿಗಾರಿಕೆ ದೇಶ ವಿದೇಶಗಳವರೆಗೂ ವ್ಯಾಪಾರ ವಹಿವಾಟನ್ನು ಇಟ್ಟುಕೊಂಡಿದೆ. ಯುದ್ಧದ ವಾತಾವರಣದಲ್ಲಿ ಬೇರೆ ದೇಶಗಳಿಗೆ ಕರಿಕಲ್ಲು ರ್ತು ಮಾಡಲು ಆಗುತ್ತಿಲ್ಲ. ಇದರಿಂದ ಉದ್ಯಮಿಗಳಿಗೆ ತುಂಬಾ ತೊಂದರೆಯಾಗಿದೆ ಎಂದು ಕರಿಕಲ್ಲು ಉದ್ಯಮಿಗಳು ಬೇಸರಗೊಂಡಿದ್ದಾರೆ. ಇತ್ತ ಗಣಿಗಾರಿಕೆ ಕೆಲಸದಲ್ಲಿ ತೊಡಗಿರುವ ಕಾರ್ಮಿಕರಿಗೂ ಆತಂಕ ಎದುರಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net