ಹನೂರಲ್ಲಿ ನಾಡಪ್ರಭು ಜಯಂತಿ ಅದ್ದೂರಿ

 ಹನೂರಿನಲ್ಲಿ ನಾಡಪ್ರಭು ಕೆಂಪೇಗೌಡರ ಪುತ್ಥಳಿ ಮೆರವಣಿಗೆಯು ಸಾವಿರಾರು ಜನರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.
ಹನೂರಿನಲ್ಲಿ ನಾಡಪ್ರಭು ಕೆಂಪೇಗೌಡರ ಪುತ್ಥಳಿ ಮೆರವಣಿಗೆಯು ಸಾವಿರಾರು ಜನರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.
Published on

ಪ್ರಮುಖ ಮುಖ್ಯಾಂಶಗಳು

  • ಅಶ್ವಾರೂಢ ವಾಹನದಲ್ಲಿ ಕೆಂಪೇಗೌಡರ ಪುತ್ಥಳಿ ಮೆರವಣಿಗೆ
ಹನೂರು: ಪಟ್ಟಣದಲ್ಲಿ ಒಕ್ಕಲಿಗ ಸಮುದಾಯದ ವತಿಯಿಂದ ಗುರುವಾರ ನಾಡಪ್ರಭುವಿನ ಪುತ್ಥಳಿ ಮೆರವಣಿಗೆ ನಡೆಸುವ ಮೂಲಕ ಕೆಂಪೇಗೌಡ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಪಟ್ಟಣದ ಕೆಂಪೇಗೌಡ ವೃತ್ತದ ಬಳಿ ನೆರೆದಿದ್ದ ಸಾವಿರಾರು ಜನರ ಸಮ್ಮುಖದಲ್ಲಿ ವಿವಿಧ ಪುಷ್ಪಗಳಿಂದ ಸಿಂಗರಿಸಿದ್ದ ಅಶ್ವಾರೂಢ ವಾಹನದಲ್ಲಿನ ನಾಡಪ್ರಭು ಕೆಂಪೇಗೌಡರ ಪುತ್ಥಳಿಗೆ ಶಾಸಕ ಎಂ.ಆರ್.ಮಂಜುನಾಥ್, ಮಾಜಿ ಶಾಸಕ ಆರ್.ನರೇಂದ್ರ ಹಾಗೂ ಇನ್ನಿತರ ಗಣ್ಯರು ಪುಷ್ಪನಮನ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು.
ಮ.ಬೆಟ್ಟ ಮುಖ್ಯ ರಸ್ತೆ, ಎಚ್. ನಾಗಪ್ಪ ವೃತ್ತ, ಬಂಡಳ್ಳಿ ಮುಖ್ಯ ರಸ್ತೆಯಲ್ಲಿ ಸಾಗಿದ ಮೆರವಣಿಗೆಯು ಶ್ರೀ ಬೆಟ್ಟಳ್ಳಿ ಮಾರಮ್ಮನ ದೇಗುಲದಲ್ಲಿ ಅಂತ್ಯಗೊಂಡಿತು. ವೀರಗಾಸೆ, ಕೇರಳ ಚಂಡೇ ವಾದ್ಯ ನೃತ್ಯ, ಡೊಳ್ಳು ಕುಣಿತ, ಮಂಗಳೂರು ಹುಲಿ ಕುಣಿತ ಹಾಗೂ ಇನ್ನಿತರ ಕಲಾ ತಂಡಗಳ ನೃತ್ಯ ಮೆರವಣಿಗೆಗೆ ಮೆರುಗು ತಂದಿತು. ಯುವಕರು, ಮಹಿಳೆಯರು ಹಾಗೂ ಹೆಣ್ಣು ಮಕ್ಕಳು ವಾದ್ಯದ ತಾಳಕ್ಕೆ ತಕ್ಕಂತೆ ಕುಣಿದು ಕುಪ್ಪಳಿಸಿದರು. ಪಟಾಕಿ ಸಿಡಿಸಿ ಸಂಭ್ರಮಿಸಿದರು. ಈ ಮೂಲಕ ಮೆರವಣಿಗೆಯು ವಿಜೃಂಭಣೆಯಿಂದ ನೆರವೇರಿತು.
ಯುವ ಪೀಳಿಗೆಗೆ ಸ್ಫೂರ್ತಿ: ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಪೀಠಾಧಿಪತಿ ಶ್ರೀ ಸೋಮನಾಥೇಶ್ವರ ಸ್ವಾಮೀಜಿ ಮಾತನಾಡಿ, ಎಲ್ಲರನ್ನು ಒಗ್ಗೂಡಿಸಿ ಭಾವೈಕ್ಯದಿಂದ ನಾಡನ್ನು ಕಟ್ಟುವುದರಲ್ಲಿ ಕೆಂಪೇಗೌಡರ ದೂರದೃಷ್ಟಿ ವಿಶಾಲವಾದುದು. ಅಭಿವೃದ್ಧಿಯ ಚಿಂತನೆಯ ತಳಹದಿಯ ಮೇಲೆ ಬೆಂಗಳೂರು ಇಂದು ಬೃಹತ್ ನಗರವಾಗಿ ಬೆಳೆದಿದೆ. ಇವರ ಆದರ್ಶ ಇಂದಿನ ಯುವಕರಿಗೆ ಮಾದರಿಯಾಗಿದೆ. ಮುಂದಿನ ಪೀಳಿಗೆಗೆ ಸ್ಫೂರ್ತಿಯಾಗಿದೆ. ಹನೂರಿನಲ್ಲಿ ಇವರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸುತ್ತಿರುವುದು ಶ್ಲಾಘನೀಯ ಎಂದರು.
ಶಾಸಕ ಎಂ.ಆರ್. ಮಂಜುನಾಥ್ ಮಾತನಾಡಿ, ಬೆಂಗಳೂರು ನಿರ್ಮಾಣದಲ್ಲಿ ಕೆಂಪೇಗೌಡರ ತ್ಯಾಗ, ಬಲಿದಾನ ಅಜಾರಾಮರ. ಅಂದಿನ ಕಾಲದಲ್ಲಿ ಕೈಗೊಂಡ ಚಿಂತನೆಯ ಪ್ರತಿಫಲ ಬೆಂಗಳೂರು ಅಭಿವೃದ್ಧಿಗೆ ಕಾರಣವಾಗಿದ್ದು, ನಾನಾ ಭಾಗದ ಜನರ ಆಶ್ರಯ ತಾಣವಾಗಿದೆ. ಇವರ ಆದರ್ಶ ಎಲ್ಲರಿಗೂ ಪ್ರೇರಣೆ. ಪಟ್ಟಣದಲ್ಲಿ ಕೆಂಪೇಗೌಡ ವೃತ್ತ ನಾಮಕರಣ ಸಂಬಂಧ ವರದಿಯನ್ನು ಸರ್ಕಾರಕ್ಕೆ ಕಳುಹಿಸಲಾಗಿದೆ. ಅನುಮತಿ ದೊರೆತ ಕೂಡಲೇ ಎಲ್ಲರ ಸಹಕಾರ ಪಡೆದು ಪುತ್ಥಳಿ ನಿರ್ಮಾಣಕ್ಕೆ ಅಗತ್ಯ ಕ್ರಮ ವಹಿಸಲಾಗುವುದು ಎಂದರು.
ಮಾಜಿ ಶಾಸಕ ಆರ್.ನರೇಂದ್ರ ಮಾತನಾಡಿ, ಗಡಿ ಜಿಲ್ಲೆ ಚಾ.ನಗರದಲ್ಲಿ ಒಕ್ಕಲಿಗ ಸಮುದಾಯ ಜನರು ಕಡಿಮೆ ಸಂಖ್ಯೆಯಲ್ಲಿದ್ದಾರೆ. ಮಕ್ಕಳು ಉತ್ತಮ ಶಿಕ್ಷಣ ಪಡೆಯುತ್ತಿದ್ದಾರೆ. ಆದರೆ ಹನೂರು ಹಾಗೂ ಚಾ.ನಗರದಲ್ಲಿ ಸಮುದಾಯದ ಮಕ್ಕಳಿಗೆ ಹಾಸ್ಟೆಲ್ ಸೌಕರ್ಯ ಇಲ್ಲ. ಆದ್ದರಿಂದ ರಾಜ್ಯ ಒಕ್ಕಲಿಗ ಸಂಘ ಈ ಬಗ್ಗೆ ಗಮನಹರಿಸಿ ಈ ಭಾಗದಲ್ಲಿ ಹಾಸ್ಟೆಲ್ ನಿರ್ಮಿಸುವುದರ ಮೂಲಕ ಮಕ್ಕಳ ಶಿಕ್ಷಣಕ್ಕೆ ಅನುಕೂಲ ಕಲ್ಪಿಸಬೇಕು ಎಂದರು.
ಇದೇ ವೇಳೆ ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಸಮುದಾಯದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಮಾನಸ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಡಾ.ಎಸ್ ದತ್ತೇಶ್‌ಕುಮಾರ್, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರಾದ ಗಂಗಾಧರ್, ಮಂಜೇಗೌಡ, ತಾಲೂಕು ಅಧ್ಯಕ್ಷ ಮಾದೇಶ್, ಸಾಹಿತಿ ಕ್ಯಾತನಹಳ್ಳಿ ಶ್ರೀನಿವಾಸ್, ನವನೀತ್‌ಗೌಡ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net