ಗುಂಡ್ಲುಪೇಟೆ: ಸಹಪಾಠಿಗಳು 20 ವರ್ಷಗಳ ನಂತರ ಸಮಾವೇಶಗೊಂಡು ಹಿರಿಯ ಶಿಕ್ಷಕರಿಗೆ ಗುರುವಂದನೆ ಸಲ್ಲಿಸಿರುವುದು ಧನ್ಯತಾಭಾವ ಮೂಡಿಸಿದೆ ಎಂದು ಶಿಕ್ಷಕ ಪ್ರಕಾಶ್ ಹೇಳಿದರು.
ಪಟ್ಟಣದ ಸೇಂಟ್ ಜಾನ್ಸ್ ಶಾಲೆಯಲ್ಲಿ 1993ನೇ ಬ್ಯಾಚಿನ ಪ್ರಾಥಮಿಕ ವಿಭಾಗದ ವಿದ್ಯಾರ್ಥಿಗಳು ಸ್ನೇಹಿತರ ಬಳಗದ ವತಿಯಿಂದ ಮಂಗಳವಾರ ಆಯೋಜಿಸಿದ್ದ ಗುರುವಂದನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿದ್ಯೆ ಕಲಿಸಿ ಬಾಳಿಗೆ ಬೆಳಕು ನೀಡಿದ ಶಿಕ್ಷಕರನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಆದರೆ ಹಳೆಯ ವಿದ್ಯಾರ್ಥಿಗಳು ಒಂದೆಡೆ ಸೇರುವುದು ಬಹಳ ಅಪರೂಪ. ಹಾಗಾಗಿ ಈ ಕಾರ್ಯಕ್ರಮ ಶಾಲೆಯ ಇತಿಹಾಸದಲ್ಲಿ ಬಹಳ ವಿಶೇಷ ಎನಿಸಿದೆ ಎಂದರು.
ಹಿರಿಯ ಶಿಕ್ಷಕರಾದ ಹನುಮಂತು, ಶಿವಣ್ಣ ಇತರರು ಇದ್ದರು.
ಹತ್ತು ಹಲವು ಕ್ಷೇತ್ರಗಳಲ್ಲಿ ತೊಡಗಿದ್ದರೂ ತಮ್ಮ ಹಳೆಯ ಸಹಪಾಠಿಗಳನ್ನು ಭೇಟಿಯಾಗುವ ಸಲುವಾಗಿ ಒಂದೆಡೆ ಮಿಲನಗೊಂಡಿದ್ದ ಗೆಳೆಯರು ತಮ್ಮ ಹಳೆಯ ನೆನಪುಗಳನ್ನು ಮೆಲಕುಹಾಕಿದರು.
ಹಾಡಿ, ಕುಣಿದು ಸಂಭ್ರಮಿಸಿದರು. ಒಂದೇ ಕೊಠಡಿಯಲ್ಲಿ ಕುಳಿತು ಕಲಿತಿದ್ದನ್ನು, ಗುರುಗಳ ವಿಶ್ವಾಸ ಮತ್ತು ಕರುಣೆಯನ್ನು, ಬಾಲ್ಯದ ದಿನಗಳನ್ನು ಸ್ಮರಿಸಿಕೊಂಡರು.