ಜಾತ್ರೆ ಅಂಗವಾಗಿ ಪ್ರತಿಯೊಂದು ಕುಟುಂಬದವರೂ ತಮ್ಮ ತಮ್ಮ ಮನೆಗಳಲ್ಲಿ ತಯಾರಿಸಿದ ಆಹಾರ ಪದಾರ್ಥಗಳು, ಸಿಹಿತಿನಿಸುಗಳನ್ನು ಬಿದಿರು ಬುಟ್ಟಿಯಲ್ಲಿ ಹಾಕಿಕೊಂಡು ಸತ್ತಿಗೆ ಸುರಾಪಾಣಿ, ಮಂಗಳ ವಾದ್ಯಗಳ ಜತೆಗೆ ಮೆರವಣಿಗೆ ಮಾಡಿದರು. ಎಲ್ಲ ಮನೆಯ ಪುರುಷರು, ಮಹಿಳೆಯರು ಹಾಗೂ ಮಕ್ಕಳು ಗ್ರಾಮದ ಹೊರವಲಯದಲ್ಲಿಯುವ ಶ್ರೀ ಗುರುಲಿಂಗೇಶ್ವರ ದೇವಾಲಯಕ್ಕೆ ತೆರಳಿ ಅಲ್ಲಿ ಗುರುಲಿಂಗೇಶ್ವರರಿಗೆ ವಿಶೇಷ ಪೂಜೆ, ಅಭಿಷೇಕ ಪೂಜೆ, ನೈವೇದ್ಯ ಅರ್ಪಿಸಿದರು. ನಂತರ ಒಟ್ಟಾಗಿ ಕುಳಿತು ಸಹಭೋಜನ ಸೇವಿಸಿದರು. ಅಕ್ಕ ಪಕ್ಕದ ಗ್ರಾಮಗಳ ತಮ್ಮ ಬಂಧು, ಬಾಂಧವರನ್ನೂ ಜಾತ್ರೆಗೆ ಆಹ್ವಾನಿಸಿ, ಅವರಿಗೂ ಉಣಬಡಿಸಿ ಸಂಭ್ರಮಿಸಿದರು. ರಾಜಕೀಯ ಕಾರಣಗಳಿಗಾಗಿ ಗ್ರಾಮದಲ್ಲಿ ಎರಡು ಗುಂಪುಗಳು ಬೇರೆ ಬೇರೆ ದಿನಗಳಂದು ಪ್ರತ್ಯೇಕವಾಗಿ ಈ ಹಿಂದೆ ಜಾತ್ರೆ ನಡೆಸಿದ್ದರು. ಆದರೆ ಈ ಬಾರಿ ತಹಸೀಲ್ದಾರ್ ಎಂ.ಎಸ್.ತನ್ಮಯಿ ಹಾಗೂ ಪಟ್ಟಣ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಸಾಹೇಬಗೌಡರು ಮುಖಂಡರ ಸಭೆ ನಡೆಸಿ, ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು, ಮನವೊಲಿಸಿದ ಫಲವಾಗಿ 18 ವರ್ಷಗಳ ನಂತರ ಒಟ್ಟಾಗಿ ಜಾತ್ರೆ ಆಚರಿಸಲು ಸಾಧ್ಯವಾಗಿರುವುದು ವಿಶೇಷವಾಗಿದೆ. ಈ ಬಗ್ಗೆ ಗ್ರಾಮದ ಹಿರಿಯರು, ಯಜಮಾನರು ಹರ್ಷ ವ್ಯಕ್ತಪಡಿಸಿದ್ದಾರೆ.