ಮೊದಲ ಬಾರಿಗೆ ಶಾಸಕರಾದ ಎಚ್.ಎಂ.ಗಣೇಶ್‌ಪ್ರಸಾದ್ ತಮ್ಮ ತಂದೆಯ ಕನಸನ್ನು ನನಸು ಮಾಡಲು ಮುಂದಾಗಿ ಸರ್ಕಾರದ ಮೇಲೆ ಒತ್ತಡ ಹೇರಿ ಅನುದಾನ ತಂದು 2024ರ ಜ. 3ರಂದು ಕೃಷಿ ಉತ್ಪನ್ನ ಮಾರುಕಟ್ಟೆಯ ಉಪಮಾರುಕಟ್ಟೆ ಪ್ರಾಂಗಣದಲ್ಲಿ ಕಾಮಗಾರಿಗೆ ಚಾಲನೆ ನೀಡಿದ ಫಲವಾಗಿ ಬೇಗೂರಿನ ಹತ್ತಿ ಮಾರುಕಟ್ಟೆ ಕಾಮಗಾರಿ ಇದೀಗ ಪೂರ್ಣಗೊಂಡಿದೆ. ವಿಶಾಲವಾದ ರಸ್ತೆ, ಮುಚ್ಚಿದ ಹರಾಜುಕಟ್ಟೆ, ಆಡಳಿತ ಕಚೇರಿ, ಶೌಚಗೃಹ, ಸಿಸಿ ಚರಂಡಿ ಹಾಗೂ ಕಾಂಪೌಂಡ್ ನಿರ್ಮಾಣ ಪೂರ್ಣಗೊಂಡಿದೆ. ವಿದ್ಯುತ್ ಸಂಪರ್ಕ ಮತ್ತು ರೈತರಿಗೆ ಕುಡಿಯುವ ನೀರಿನ ಸಂಪರ್ಕ ಸಹ ಕಲ್ಪಿಸಲಾಗಿದೆ. ಕೆಲವೇ ದಿನಗಳಲ್ಲಿ ಇದು ಸೇವೆಗೆ ಸಮರ್ಪಣೆಯಾಗಲು ಸಿದ್ಧ್ದವಾಗಿದೆ.