ಹನೂರು : ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಗ್ಯಾಸ್ ಸಿಲಿಂಡರ್ ಸಂಗ್ರಹ ಇದ್ದು, ದಾಸೋಹ ವ್ಯವಸ್ಥೆಗೆ ತೊಂದರೆ ಯಾಗಿಲ್ಲ ಎಂದು ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ.ಈ ರಘು ತಿಳಿಸಿದ್ದಾರೆ.
ಈ ಸಂಬಂಧ ಅವರು ಮಾತನಾಡಿ, ದಾಸೋಹ ಭವನದಲ್ಲಿ ಪ್ರಸಾದ ಹಾಗೂ ಲಾಡು ಪ್ರಸಾದ ವ್ಯವಸ್ಥೆ ಎಂದಿನಂತೆ ಸಾಗಿದೆ. ಆದರೆ ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಗ್ಯಾಸ್ ಸಿಲಿಂಡರ್ ಸಮಸ್ಯೆಯಿಂದಾಗಿ ದಾಸೋಹದ ಪ್ರಸಾದ ವ್ಯವಸ್ಥೆಯಲ್ಲಿ ತೊಂದರೆಯಾಗಿದೆ ಎಂದು ಸುದ್ದಿ
ಹಬ್ಬಿದೆ. ಇದಕ್ಕೆ ಭಕ್ತರು ಕಿವಿಗೊಡಬಾರದು. ನಮ್ಮಲ್ಲಿ ಗ್ಯಾಸ್ ಸಿಲಿಂಡರ್ ಅಗತ್ಯ ದಾಸ್ತಾನು ಇದೆ.
ಜಿಲ್ಲಾಡಳಿತ ಅಚ್ಚಕಟ್ಟಾಗಿ ವ್ಯವಸ್ಥೆ ಮಾಡಿದೆ ಎಂದು ಹೇಳಿದರು.
ಮಾ.16ರಿಂದ 19ರೆವರೆಗೆ ಕ್ಷೇತ್ರದಲ್ಲಿ ಯುಗಾದಿ ಜಾತ್ರೆ ನಡೆಯಲಿದೆ. ಎಂದಿನಂತೆ ದಾಸೋಹ ಭವನದಲ್ಲಿ ಪ್ರಸಾದ ಹಾಗೂ ಲಾಡು ಪ್ರಸಾದ ವಿತರಣೆ ವ್ಯವಸ್ಥೆ ಇದೆ. ಆದ್ದರಿಂದ ಭಕ್ತರು ಆಗಮಿಸಿ ದೇವರ ದರ್ಶನವನ್ನು ಪಡೆಯುವುದರ ಮೂಲಕ ಪ್ರಸಾದ ಸ್ವೀಕರಿಸುವಂತೆ ಮನವಿ ಮಾಡಿದ್ದಾರೆ.
ಪ್ರಸಾದ ಸ್ವೀಕರಿಸಿದ ಕಾರ್ಯದರ್ಶಿ:
ದಾಸೋಹ ಭವನ ಹಾಗೂ ಲಾಡು ತಯಾರಿಕ ಘಟಕಕ್ಕೆ ಭಾನುವಾರ ಖುದ್ದಿ ಭೇಟಿ ನೀಡಿದ
ಕಾರ್ಯದರ್ಶಿ ರಘು, ದಾಸ್ತಾನಿಸಿರುವ ಗ್ಯಾಸ್ ಸಿಲಿಂಡರ್ ಬಗ್ಗೆ ಮಾಹಿತಿ ಪಡೆದುಕೊಂಡರು. ಪ್ರಸಾದ ತಯಾರಿಕೆಯ ಗುಣಮಟ್ಟವನ್ನು ಪರಿಶೀಲಿಸಿದರು. ದಾಸೋಹ ಭವನದಲ್ಲಿ ಭಕ್ತರೊಂದಿಗೆ ತಾವೂ ಕುಳಿತು ಪ್ರಸಾದ ಸ್ವೀಕರಿಸುವುದರ ಮೂಲಕ ಮ.ಬೆಟ್ಟದಲ್ಲಿ ಪ್ರಸಾದ ವ್ಯವಸ್ಥೆಗೆ ಸಮಸ್ಯೆ ಇಲ್ಲ ಎಂಬುದನ್ನು ಖಚಿತ ಪಡಿಸಿದರು.