ಮಂಗಲ ಗ್ರಾಮದ ಅಭಿವೃದ್ಧಿಗೆ ಸಂಪೂರ್ಣ ಸಹಕಾರ

 ಮಂಗಲ ಗ್ರಾಮದಲ್ಲಿ ಆಯೋಜಿಸಿದ್ದ ಆದಿಶಕ್ತಿ ಬಣ್ಣದಮ್ಮ ದೇಗುಲದ ಜೀರ್ಣೋದ್ಧಾರ ಕಾರ್ಯಕ್ರಮದಲ್ಲಿ ಶಾಸಕ ಎಂ.ಆರ್.ಮಂಜುನಾಥ್ ಮಾತನಾಡಿದರು. ಶಿವರಾಮೇಗೌಡ, ರಾಜಶೇಖರಗೌಡ, ಶಿವರಾಮು ಇತರರಿದ್ದರು.
ಮಂಗಲ ಗ್ರಾಮದಲ್ಲಿ ಆಯೋಜಿಸಿದ್ದ ಆದಿಶಕ್ತಿ ಬಣ್ಣದಮ್ಮ ದೇಗುಲದ ಜೀರ್ಣೋದ್ಧಾರ ಕಾರ್ಯಕ್ರಮದಲ್ಲಿ ಶಾಸಕ ಎಂ.ಆರ್.ಮಂಜುನಾಥ್ ಮಾತನಾಡಿದರು. ಶಿವರಾಮೇಗೌಡ, ರಾಜಶೇಖರಗೌಡ, ಶಿವರಾಮು ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಎಂ.ಆರ್.ಮಂಜುನಾಥ್ ಭರವಸೆ
ಹನೂರು: ಗ್ರಾಮಕ್ಕೆ ಅಗತ್ಯ ಮೂಲ ಸೌಕರ್ಯ ಒದಗಿಸುವ ಮೂಲಕ ಅಭಿವೃದ್ಧಿಗೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಶಾಸಕ ಎಂ.ಆರ್.ಮಂಜುನಾಥ್ ತಿಳಿಸಿದರು.
ತಾಲೂಕಿನ ಮಂಗಲ ಗ್ರಾಮದ ಕುರುಬರ ಬಡಾವಣೆಯಲ್ಲಿ ಸೋಮವಾರ ಆಯೋಜಿಸಿದ್ದ ಶ್ರೀ ಆದಿಶಕ್ತಿ ಬಣ್ಣದಮ್ಮ ದೇಗುಲದ ಜೀರ್ಣೋದ್ಧಾರ ಕಾರ್ಯಕ್ರಮದಲ್ಲಿ ಮಾತನಾಡಿದರು. ಹನೂರು ತಾಲೂಕಾಗಿ ಹಲವು ವರ್ಷಗಳು ಕಳೆದಿದ್ದರೂ ಜನರಿಗೆ ಅಗತ್ಯ ಸೌಕರ್ಯಗಳು ದೊರಕಿರಲಿಲ್ಲ. ಇದರಿಂದ ಜನರು ಸಮಸ್ಯೆ ಎದುರಿಸುತ್ತಿದ್ದರು. ಇದನ್ನು ಮನಗಂಡು ಹನೂರಿನಲ್ಲಿ 20 ಕೋಟಿ ರೂ. ವೆಚ್ಚದಲ್ಲಿ 50 ಹಾಸಿಗೆಯ ಆಸ್ಪತ್ರೆ ಕಟ್ಟಡ ನಿರ್ಮಾಣವಾಗುತ್ತಿದ್ದು, ಒಂದೂವರೆ ವರ್ಷದೊಳಗೆ ಸೇವೆಗೆ ಲಭ್ಯವಾಗಲಿದೆ ಎಂದರು.
ನೀರಾವರಿ ಯೋಜನೆಗೆ ಹೆಚ್ಚಿನ ಒತ್ತು ನೀಡಿದ್ದು, ಕಾವೇರಿ ನದಿ ಮೂಲದಿಂದ ಈ ಭಾಗದ ರಾಮನಗುಡ್ಡೆಗೆ ಕೆರೆಗೆ ನೀರು ತುಂಬಿಸಲಾಗಿದೆ. ನಾಲ್‌ರೋಟ್, ಬಂಡಳ್ಳಿ ಹಾಗೂ ಇತರ ಮುಖ್ಯ ರಸ್ತೆಗಳು ಅಭಿವೃದ್ಧಿಯಾಗುತ್ತಿದೆ. ಕ್ಷೇತ್ರದಲ್ಲಿ ಆಗಬೇಕಿರುವ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಒತ್ತು ನೀಡಲಾಗಿದ್ದು, ಅಗತ್ಯ ಕ್ರಮವಹಿಸಲಾಗಿದೆ. ಇನ್ನು ಜನರ ಬೇಡಿಕೆಯಂತೆ ಗ್ರಾಮಕ್ಕೆ ರಸ್ತೆ, ಚರಂಡಿ ಹಾಗೂ ಸ್ಮಶಾನ ಸೌಕರ್ಯ ಕಲ್ಪಿಸಲಾಗುವುದು. ಇದಕ್ಕೆ ತಮ್ಮೆಲ್ಲರ ಸಹಕಾರ ಅತ್ಯಗತ್ಯ. ಇದೀಗ ಎಲ್ಲರ ಸಹಕಾರದಿಂದ ನಿರ್ಮಿಸಲಾಗಿರುವ ದೇಗುಲದ ಅಭಿವೃದ್ಧಿಗೆ ಸಹಕಾರ ನೀಡಲಾಗುವುದು. ಹಿಂದಿನ ಆಚರಣೆ, ಸಂಪ್ರದಾಯ ಉಳಿಯುವಂತಾಗಬೇಕು ಎಂದು ತಿಳಿಸಿದರು.
ಶಿವರಾಮು ಎಂಬುವರು ಮಾತನಾಡಿ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಇದರಿಂದ ಗ್ರಾಮದ ಅಭಿವೃದ್ಧಿ ಕುಂಠಿತವಾಗಿದೆ. ಆದ್ದರಿಂದ ಪಿಡಿಒ ಅವರನ್ನು ವರ್ಗಾಯಿಸುವಂತೆ ಮನವಿ ಮಾಡಿದರು. ಇದಕ್ಕೆ ಶಾಸಕರು ಅಗತ್ಯ ಕ್ರಮವಹಿಸುವುದಾಗಿ ಭರವಸೆ ನೀಡಿದರು.
ಮುಖಂಡರಾದ ಶಿವರಾಮೇಗೌಡ, ರಾಜಶೇಖರ್‌ಗೌಡ, ಸಿದ್ಧೇಗೌಡ, ಗಂಗರಾಜು, ರುದ್ರಪ್ಪ, ಮಹೇಂದ್ರ ಆರಾಧ್ಯ, ಮಂಜೇಶ್, ಚಿನ್ನವೆಂಕಟ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net