ಕರ್ತವ್ಯ ನಿರ್ವಹಿಸಲು ಅರಣ್ಯ ಸಿಬ್ಬಂದಿಗೆ ಭೀತಿ

ಹನೂರು ಅರಣ್ಯ ಇಲಾಖೆಯ ಕಚೇರಿ ಆವರಣದಲ್ಲಿ ಬೀಡು ಬಿಟ್ಟಿರುವ ಪೊಲೀಸ್ ಪಡೆ.
ಹನೂರು ಅರಣ್ಯ ಇಲಾಖೆಯ ಕಚೇರಿ ಆವರಣದಲ್ಲಿ ಬೀಡು ಬಿಟ್ಟಿರುವ ಪೊಲೀಸ್ ಪಡೆ.
Published on

ಹನೂರು:

ಶೂಟೌಟ್ ಪ್ರಕರಣದಿಂದ ಕಿಡಿಗೇಡಿಗಳ ಕೃತ್ಯಕ್ಕೆ ವಸತಿ ಗೃಹ ಹಾಗೂ ಕಳ್ಳಬೇಟೆ ತಡೆ ಶಿಬಿರಗಳು ಧ್ವಂಸವಾಗಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಬೆಚ್ಚಿ ಬಿದ್ದಿದ್ದು, ಕಾರ್ಯನಿರ್ವಹಿಸಲು ಭಯದ ವಾತಾವರಣ ಸೃಷ್ಟಿಯಾಗಿದೆ.

ಶೂಟೌಟ್‌ನಿಂದ ತಾಲೂಕಿನ ಮರಿಯಮಂಗಲ ಗ್ರಾಮದ ಅಂಥೋನಿಸ್ವಾಮಿ, ಜಗನ್ನಾಥದೊಡ್ಡಿಯ ಜಾನ್ ರೋಸ್ ಪೀಟರ್ ಹಾಗೂ ಲಾಸರ್ ದೊಡ್ಡಿಯ ಕುಮಾರ್ ಬಲಿಯಾದ ಬೆನ್ನಲ್ಲೇ ರೊಚ್ಚಿಗೆದ್ದ ಕುಟುಂಬಸ್ಥರು, ಗ್ರಾಮಸ್ಥರು ಹಾಗೂ ವಿವಿಧ ರೈತಪರ, ಪ್ರಗತಿಪರ ಸಂಘಟನೆಗಳು ಹನೂರಿನಲ್ಲಿ ನಡೆಸಿದ್ದ ಪ್ರತಿಭಟನೆ ತೀವ್ರ ಸ್ವರೂಪ ಪಡೆದಿತ್ತು.
ಎಲ್‌ಪಿಎಸ್ ವಿಲೇಜ್ ಬಳಿ ಸಿಬ್ಬಂದಿಗೆ ಜೀವ ಬೆದರಿಕೆಯೊಡ್ಡಿ ಜೀಪ್ ಹಾನಿಗೊಳಿಸಿದ್ದು, ಶಾಗ್ಯದಲ್ಲಿ ಅರಣ್ಯ ಇಲಾಖೆಯ ವಸತಿ ಗೃಹ, ಕಳ್ಳಿದೊಡ್ಡಿ, ಬಂಡಳ್ಳಿ, ಬೂದಿಕೆರೆ, ನಾಲಾಬೋಳಿ ಹಾಗೂ ಇನ್ನಿತರ 10 ಕಡೆಗಳಲ್ಲಿ ಶಿಬಿರಗಳನ್ನು ಧ್ವಂಸಗೊಳಿಸಲಾಗಿತ್ತು. ಜತೆಗೆ ಸ್ಫೋಟಕ ಬಳಸಿ ಕಳ್ಳಬೇಟೆ ತೆಡೆ ಶಿಬಿರವನ್ನು ಧ್ವಂಸಗೊಳಿಸಲಾಗಿದೆ.
ಕಿಡಿಗೇಡಿಗಳ ಕೃತ್ಯದಿಂದ ಅಧಿಕಾರಿಗಳು ಹಾಗೂ ಸಿಬ್ಬಂದಿ ಬೆಚ್ಚಿ ಬಿದ್ದಿದ್ದಾರೆ. ಶೂಟೌಟ್ ನಡೆದ ಸ್ಥಳಕ್ಕೆ ಪರಿಶೀಲನೆಗಾಗಿ ಆಗಮಿಸಿದ ಅಧಿಕಾರಿಗಳನ್ನು ಕರೆದೊಯ್ಯಬೇಕಾದರೆ ಸಮಸ್ಯೆಯಾಗಬಹುದು ಎನ್ನುವ ಉದ್ದೇಶದಿಂದ ಮೂವರು ಮೃತಪಟ್ಟಿರುವ ಗ್ರಾಮಗಳನ್ನು ಬಿಟ್ಟು ಬೇರೆ ದಾರಿಯಲ್ಲಿ ತೆರಳುವಂತಾಗಿದೆ.
ಠಿಕಾಣಿ ಹೂಡಿರುವ ಖಾಕಿ ಪಡೆ: ಮುಂಜಾಗ್ರತಾ ಕ್ರಮವಾಗಿ ಹನೂರಿನ ಅರಣ್ಯ ಇಲಾಖೆ ಕಚೇರಿಗೆ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ. ಖಾಕಿ ಪಡೆ ಕಚೇರಿ ಆವರಣದಲ್ಲಿಯೇ ಬೀಡು ಬಿಟ್ಟಿದೆ. ಹಾಗೆಯೇ ತೊಮಿಯಾರ್ ಪಾಳ್ಯದಲ್ಲೂ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net