ಕೊಳ್ಳೇಗಾಲ: ಸಂತೇಮರಳ್ಳಿಯಲ್ಲಿ ಎರಡೂವರೆ ಕೋಟಿ ರೂ.ವೆಚ್ಚದಲ್ಲಿ ಮಹಿಳಾ ಕ್ರೀಡಾಪಟುಗಳಿಗೆ ವಸತಿ ನಿಲಯ ನಿರ್ಮಾಣವಾಗುತ್ತಿದೆ ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಹೇಳಿದರು.
ಪಟ್ಟಣದ ಮಹದೇಶ್ವರ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ತಾಲೂಕು ಮಟ್ಟದ ದಸರಾ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.
ಕೊಳ್ಳೇಗಾಲದ ಮಹದೇಶ್ವರ ಮೈದಾನದ ಒಳಾಂಗಣ ಕ್ರೀಡಾಂಗಣ ಪೂರ್ಣಗೊಳಿಸಲು 3.20 ಕೋಟಿ ರೂ.ವೆಚ್ಚದ ಕಾಮಗಾರಿಗೆ ಚಾಲನೆ ನೀಡಿದ್ದೇನೆ. ಒಳಾಂಗಣ ಕ್ರೀಡಾಂಗಣದಲ್ಲಿರುವ ಮರಗಳನ್ನು ತೆರವುಗೊಳಿಸಲು ಅರಣ್ಯ ಇಲಾಖೆಗೆ ಮನವಿ ಮಾಡಲಾಗಿದೆ. ಆದರೆ ಮರ ತೆರವಿಗೆ ಅನುಮತಿ ನೀಡಲು ಮಲೆ ಮಹದೇಶ್ವರ ವನ್ಯಜೀವಿಧಾಮದ ಡಿಸಿಎಫ್ ಭಾಸ್ಕರ್ ಮೀನಮೇಷ ಎಣಿಸುತ್ತಿದ್ದಾರೆ. ಅವರ ನಿರ್ಲಕ್ಷ್ಯದಿಂದ ಕಾಮಗಾರಿ ವಿಳಂಬಕ್ಕೆ ಕಾರಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕ್ರೀಡೆಗೆ ಸರ್ಕಾರ ಹೆಚ್ಚು ಉತ್ತೇಜನ ನೀಡುತ್ತಿದ್ದು, ಕ್ರೀಡಾ ಪ್ರತಿಭೆಗಳಿಗೆ ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕ್ರಿಡೆಯನ್ನು ಆಡಲು ಸಹಕಾರ ನೀಡುತ್ತಿದೆ. ಒಲಿಂಪಿಕ್, ಏಷ್ಯನ್ ಕ್ರೀಡೆಯಲ್ಲಿ ಭಾರತದ ಪ್ರತಿಭೆಗಳು ಸಾಧನೆ ಮಾಡಿದ್ದಾರೆ ಎಂದು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ತೋಟೇಶ್, ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ರಾಜೇಂದ್ರ, ತಾ.ಪಂ.ಇಒ ಕುಮಾರ್, ಬಿಇಒ ಮಂಜುಳಾ ಇತರರು ಇದ್ದರು.