ಗ್ಯಾರಂಟಿ ಯೋಜನೆಗಳ ತಾಂತ್ರಿಕ ಸಮಸ್ಯೆ ಸರಿಸಪಡಿಸಿ

ಚಾಮರಾಜನಗರದ ಜಿಲ್ಲಾಡಳಿತ ಭವನದ ಹಳೆ ಕೆಡಿಪಿ ಸಭಾಂಗಣದಲ್ಲಿ ಜಿಲ್ಲಾಮಟ್ಟದ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಎಚ್.ವಿ.ಚಂದ್ರು, ಮೋನಾರೋತ್, ಹೊನ್ನರಾಜು ಹಾಜರಿದ್ದರು.
ಚಾಮರಾಜನಗರದ ಜಿಲ್ಲಾಡಳಿತ ಭವನದ ಹಳೆ ಕೆಡಿಪಿ ಸಭಾಂಗಣದಲ್ಲಿ ಜಿಲ್ಲಾಮಟ್ಟದ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಎಚ್.ವಿ.ಚಂದ್ರು, ಮೋನಾರೋತ್, ಹೊನ್ನರಾಜು ಹಾಜರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಎಚ್.ವಿ.ಚಂದ್ರು ಸೂಚನೆ
  • ಜಿಲ್ಲಾಮಟ್ಟದ ಪ್ರಗತಿ ಪರಿಶೀಲನಾ ಸಭೆ
  • ಪರಿಣಾಮಕಾರಿಯಾಗಿ ಯೋಜನೆಗಳನ್ನು ತಲುಪಿಸಿ
ಚಾಮರಾಜನಗರ: ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಮೂಲ ಬಡವರಿಗೆ ತೊಂದರೆ ಉಂಟಾಗದಂತೆ ಸಮಸ್ಯೆಗಳನ್ನು ಪರಿಶೀಲಿಸಿ ಪರಿಹರಿಸುವಂತೆ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಎಚ್.ವಿ.ಚಂದ್ರು ಸೂಚನೆ ನೀಡಿದರು.
ನಗರದ ಹಳೇ ಕೆ.ಡಿ.ಪಿ. ಸಭಾಂಗಣದಲ್ಲಿ ಶುಕ್ರವಾರ ನಡೆದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಜಿಲ್ಲಾಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬಡವರ, ಮಹಿಳೆಯರ ಅರ್ಥಿಕ ಸ್ವಾವಲಂಬನೆಗಾಗಿ ಸರ್ಕಾರವು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ್ದು, ಅವುಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವುದು ಸಂಬಂಧಪಟ್ಟ ಜಿಲ್ಲಾಮಟ್ಟದ ಅಧಿಕಾರಿಗಳ ಕರ್ತವ್ಯ ಮತ್ತು ಜವಾಬ್ದಾರಿಯಾಗಿದೆ. ಹೋಬಳಿ, ಪಂಚಾಯಿತಿಮಟ್ಟದಲ್ಲಿ ಗ್ಯಾರಂಟಿ ಸಮಿತಿ ಸಭೆಗಳನ್ನು ನಡೆಸಿದ ಪರಿಣಾಮವಾಗಿ ತಳಮಟ್ಟದ ಸಮಸ್ಯೆಗಳು ತಿಳಿಯುತ್ತಿವೆ. ಅನುಷ್ಟಾನದಲ್ಲಿ ಎದುರಾಗುವ ತಾಂತ್ರಿಕ ಸಮಸ್ಯೆಗಳಿಂದ ಅಧಿಕಾರಿಗಳು ಗೊಂದಲಕ್ಕೆ ಒಳಗಾಗದೇ ಇನ್ನಷ್ಟು ಪರಿಣಾಮಕಾರಿಯಾಗಿ ಯೋಜನೆಗಳನ್ನು ತಲುಪಿಸಲು ಮುಂದಾಗಬೇಕು ಎಂದರು.
ಜಿಲ್ಲೆಯ ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಹೆಚ್ಚಿನ ಉದ್ಯೋಗಾವಕಾಶ ಲಭ್ಯವಾಗಬೇಕು. ಪ್ರತಿಸಭೆಗೂ ಕಳೆದ ಸಭೆಯ ಅನುಪಾಲನಾ ವರದಿಗಳನ್ನು ಅಧಿಕಾರಿಗಳು ತರಬೇಕು. ಗ್ರಾಮ ಪಂಚಾಯಿತಿ ಮತ್ತು ಹೋಬಳಿಮಟ್ಟದಲ್ಲಿ ನಡೆಯುವ ಗ್ಯಾರಂಟಿ ಯೋಜನೆಗಳ ಸಭೆ ವರದಿಗಳನ್ನು ಸರ್ಕಾರಕ್ಕೆ ಸಲ್ಲಿಸಬೇಕಾಗಿರುವುದರಿಂದ ಪ್ರತಿತಿಂಗಳ 5ರೊಳಗೆ ಸಲ್ಲಿಸಬೇಕು. ಜಿಲ್ಲೆಯ ಯಾವುದೇ ಭಾಗದಲ್ಲಿ ನಡೆಯುವ ಅಭಿವೃದ್ಧಿ ಕಾಮಗಾರಿ, ಕಾರ್ಯಕ್ರಮಗಳಿಗೆ ಗ್ಯಾರಂಟಿ ಸಮಿತಿ ಸದಸ್ಯರನ್ನು ಆಹ್ವಾನಿಸಬೇಕು. ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕೆಂದುತಿಳಿಸಿದರು.
ಅನ್ನಭಾಗ್ಯ ಯೋಜನೆಯಡಿ ಪಡಿತರ ಎತ್ತುವಳಿ ಸಂದರ್ಭದಲ್ಲಿ ಬಿಲ್ಲಿಂಗ್ ಪ್ರಕ್ರಿಯೆ ತಡವಾಗುತ್ತಿರುವುದು, ನ್ಯಾಯಬೆಲೆ ಮಾಲೀಕರ ಸಭೆಗೆ ಗ್ಯಾರಂಟಿ ಸಮಿತಿ ಸದಸ್ಯರನ್ನು ಆಹ್ವಾನಿಸದಿರುವುದು, ಯುವನಿಧಿ ಯೋಜನೆಯಡಿ ಜಿಲ್ಲೆಯ ಯಾವ ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡಲಾಗಿದೆ ಎಂಬ ಮಾಹಿತಿ ಪಟ್ಟಿ ಒದಗಿಸದಿರುವುದು, ಗೃಹಜ್ಯೋತಿ ಯೋಜನೆಗೆ ನೋಂದಣಿಯಾಗಿರುವ ಫಲಾನುಭವಿಗಳಿಂದ (ಭದ್ರತಾ ಠೇವಣಿ) ಸೆಕ್ಯೂರಿಟಿ ಡೆಫೋಸಿಟ್ ಸಂಗ್ರಹಿಸುವುದು ಸೇರಿದಂತೆ ಹತ್ತು-ಹಲವು ಸಮಸ್ಯೆಗಳನ್ನು ಸಭೆಯಲ್ಲಿ ಗ್ಯಾರಂಟಿ ಸಮಿತಿ ಸದಸ್ಯರು ಪ್ರಸ್ತಾಪಿಸಿದರು. ಸದಸ್ಯರು ಪ್ರಸ್ತಾಪಿಸಿದ ಸಮಸ್ಯೆಗಳನ್ನು ಖುದ್ದಾಗಿ ಪರಿಶೀಲಿಸಿ ಶೀಘ್ರವಾಗಿ ಪರಿಹರಿಸುವಂತೆ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾರೋತ್, ಮುಖ್ಯ ಯೋಜನಾಧಿಕಾರಿ ಹೊನ್ನರಾಜು, ಗ್ಯಾರಂಟಿ ಸಮಿತಿಯ ತಾಲೂಕು ಅಧ್ಯಕ್ಷ ಸೋಮೇಶ್ವರ್, ರಾಜೇಂದ್ರ, ಎಚ್.ಜಿ. ಉಮಾಪತಿ, ಸದಸ್ಯರಾದ ಕೆ.ಬಿ.ಚಿನ್ನಸ್ವಾಮಿ, ಪ್ರದೀಪ್, ಪ್ರಭು, ನಾಗೇಂದ್ರಮೂರ್ತಿ, ರವಿ, ಸಿದ್ದರಾಜು, ಭಾಗ್ಯ ಇತರರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net