ತಾಲೂಕಿನ ಕುರಟ್ಟಿ ಹೊಸೂರು ಸಮೀಪದ ಎಲ್‌ಪಿಎಸ್ ಕ್ಯಾಂಪ್‌ನ ಅರಣ್ಯ ಇಲಾಖೆ ವಸತಿ ಗೃಹದ ಗೇಟ್ ಬಳಿ ಶನಿವಾರ ರಾತ್ರಿ ಅರಣ್ಯ ಇಲಾಖೆ ಜೀಪನ್ನು ಐವರು ಅಡ್ಡಗಟ್ಟಿ ಕಲ್ಲು ತೂರಾಟ ನಡೆಸುವ ಮೂಲಕ ಹಾನಿಗೊಳಿಸಿದ್ದು, ಈ ಸಂಬಂಧ ರಾಮಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಲೂಕಿನ ಎಲ್ಪಿಎಸ್ ಕ್ಯಾಂಪ್ ಇ ವಿಲೇಜ್‌ನ ವೆಂಕಟೇಶ್, ಎಫ್ ವಿಲೇಜ್‌ನ ಚಿನ್ನಪ್ರಕಾಶ್, ಮಾಳಶೆಟ್ಟಿ, ಕೊಳ್ಳೇಗಾಲ ತಾಲೂಕಿನ ಜಾಗೇರಿಯ ಪಚ್ಚಿಮುತ್ತು ಅರಣ್ಯ ಇಲಾಖೆ ಜೀಪ್ ಮೇಲೆ ಕಲ್ಲು ತೂರಿ ಪರಾರಿಯಾಗಿದ್ದಾರೆ. ಅಲ್ಲದೆ ಮತ್ತೊಬ್ಬನ ಹೆಸರು ತಿಳಿದು ಬಂದಿಲ್ಲ.
ಕೌದಳ್ಳಿ ವನ್ಯಜೀವಿ ವಲಯದ ಆರ್‌ಎಫ್‌ಒ ಅವರ ಸೂಚನೆ ಮೇರೆಗೆ ಸಿಬ್ಬಂದಿ ಅರುಣ್‌ಕುಮಾರ್ ಹಾಗೂ ಹುಚ್ಚಯ್ಯ ಅವರು ಎಲ್ಪಿಎಸ್ ಕ್ಯಾಂಪ್‌ನ ಅರಬಗೆರೆ ಡಿಲೈನ್‌ನಲ್ಲಿ ಗಸ್ತಿಗಾಗಿ ರಾತ್ರಿ 10.30ರ ಸಮಯದಲ್ಲಿ ಚೆನ್ನೂರು ಗ್ರಾಮದಿಂದ ಹೊಸಳ್ಳಿ ಕಡೆಗೆ ಅರಣ್ಯ ಇಲಾಖೆಯ ಜೀಪ್‌ನಲ್ಲಿ ತೆರಳುತ್ತಿದ್ದರು. ಈ ವೇಳೆ ಎಲ್ಪಿಎಸ್ ಕ್ಯಾಂಪ್ ಎ ವಿಲೇಜ್ ಅರಣ್ಯ ಇಲಾಖೆ ವಸತಿಗೃಹದ ಗೇಟ್ ಬಳಿ ನಾಲ್ವರು ಬೈಕ್ ನಿಲ್ಲಿಸಿ ಜೀಪ್ ತಡೆದಿದ್ದಾರೆ. ಬಳಿಕ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾರೆ. ಈ ವೇಳೆ ಪಚ್ಚಿಮುತ್ತು ಎಂಬಾತ ಕಲ್ಲು ತೂರಿ ಜೀಪ್ ಗ್ಲಾಸ್ ಹಾನಿಗೊಳಿಸಿದರೆ, ಇನ್ನುಳಿದವರು ಚಾಲಕನ ಸೀಟ್ ಹಾಗೂ ಮೇಲ್ಭಾಗದ ಟಾರ್ಪಾಲ್ ಕಿತ್ತು ಹಾನಿಗೊಳಿಸಿದ್ದಾರೆ. ಈ ಸಂಬಂಧ ರಾಮಾಪುರ ಪೊಲೀಸ್‌ಠಾಣೆಯಲ್ಲಿ ಐವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಸಿಬ್ಬಂದಿ ಅರುಣ್ ಕುಮಾರ್ ದೂರು ನೀಡಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.