ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಮಾಜಕಲ್ಯಾಣ ಇಲಾಖೆಯ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೋಳಿ, ಸಂಸದ ಸುನಿಲ್ ಬೋಸ್, ಜಿಲ್ಲಾಧಿಕಾರಿ ಶ್ರೀರೂಪಾ, ಜಿಪಂ ಸಿಇಒ ಮೋನಾ ರೋತ್, ಉಪವಿಭಾಗಾಧಿಕಾರಿ ಧಮೇರ್ಂದ್ರಕುಮಾರ್ ಮೀನಾ, ತಹಸೀಲ್ದಾರ್ ಎಂ.ಎಸ್.ತನ್ಮಯಿ, ಮಾಜಿ ಸಚಿವೆ ಡಾ.ಗೀತಾ ಮಹದೇವಪ್ರಸಾದ್, ಶಾಸಕರಾದ ಸಿ.ಪುಟ್ಟರಂಗಶೆಟ್ಟಿ, ಎ.ಆರ್.ಕೃಷ್ಣಮೂರ್ತಿ, ಅನಿಲ್ ಚಿಕ್ಕಮಾಧು, ಧ್ರುವನಾರಾಯಣ್, ಕಾಡಾ ಅಧ್ಯಕ್ಷ ಮರಿಸ್ವಾಮಿ, ಮಾಜಿ ಅಧ್ಯಕ್ಷ ಎಚ್.ಎಸ್.ನಂಜಪ್ಪ, ಚಾಮುಲ್ ನಿರ್ದೇಶಕ ಎಚ್.ಎಸ್.ನಂಜುಂಡಪ್ರಸಾದ್, ಗ್ಯಾರೆಂಟಿ ಸಮಿತಿಯ ಅಧ್ಯಕ್ಷ ಎಚ್.ವಿಚಂದ್ರು ಇದ್ದರು.
ಗುಂಡ್ಲುಪೇಟೆ: ಪ್ರಸ್ತುತ ಮಹಿಳೆಯರ ರಾಜಕಾರಣದ ಸಬಲತೆಗೆ ಕಾಂಗ್ರೆಸ್ ಕಾರಣವಾಗಿದ್ದು, ಕ್ಷೇತ್ರ ಮರುವಿಂಗಡಣೆಗೆ ಸಂವಿಧಾನ ತಿದ್ದುಪಡಿಗೆ ನಮ್ಮ ವಿರೋಧವಿದೆಯೇ ಹೊರತು ಮಹಿಳಾ ಮೀಸಲಾತಿಗಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಪಟ್ಟಣದ ಡಿ.ದೇವರಾಜ ಅರಸು ಕ್ರೀಡಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 110 ಕೆರೆಗಳಿಗೆ ನೀರು ತುಂಬಿಸುವ ಯೋಜನೆ, ಅರೇಪುರ ಸಮೀಪ ವಿದ್ಯುತ್ ಪ್ರಸರಣ ಕೇಂದ್ರ, ಬೇಗೂರು ಸಮೀಪ ಹತ್ತಿ ಮಾರುಕಟ್ಟೆ, ಪಟ್ಟಣದ ವಾಲ್ಮೀಕಿ ಭವನ, ತೆರಕಣಾಂಬಿಯ ಸಮುದಾಯ ಆರೋಗ್ಯಕೇಂದ್ರ ಹಾಗೂ ಬೊಮ್ಮನಹಳ್ಳಿ ಸಮೀಪದ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಗಳ ನಾಮಫಲಕಗಳನ್ನು ಅನಾವರಣಗೊಳಿಸಿ ಮಾತನಾಡಿದರು.
ಮಹಿಳಾ ಮೀಸಲಾತಿಯನ್ನು ನಾವು ವಿರೋಧಿಸಿಲ್ಲ. ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲಾತಿ ಕೊಟ್ಟಿದ್ದೆ ಕಾಂಗ್ರೆಸ್. ಈ ಹಿಂದೆ ಮಹಿಳಾ ಮೀಸಲಾತಿ ವಿರೋಧ ಮಾಡಿದ್ದವರು ಇಂದು ಪರವಾಗಿ ಮಾತನಾಡುತ್ತಿದ್ದಾರೆ ಎಂದು ಛೇಡಿಸಿದರು.
ಕ್ಷೇತ್ರದ ಅಭಿವೃದ್ಧಿಗಾಗಿ 523 ಕೋಟಿ ರೂ.ನೀಡಿದ್ದು, ಕಾರ್ಯಕ್ರಮವನ್ನು ಸಂತಸದಿಂದ ಉದ್ಘಾಟನೆ ಮಾಡಿದ್ದೇನೆ. ಕುಡಿಯುವ ನೀರಿಗಾಗಿ ಕೆರೆಗಳಿಗೆ ತುಂಬಿಸಲು 110 ಕೆರೆ-ಕಟ್ಟೆಗಳನ್ನು ಗೊತ್ತು ಮಾಡಲಾಗಿದೆ. ಇದರ ಯೋಜನಾ ವೆಚ್ಚ 475 ಕೋಟಿ ರೂ.ಗಳಾಗಿದ್ದು ಈ ಯೋಜನೆ ಜಾರಿಯಿಂದ ಅಂತರ್ಜಲ ವೃದ್ಧಿಯಾಗಿ ಪಂಪ್‌ಸೆಟ್‌ಗಳಿಗೆ ನೀರು ಸರಬರಾಜಾಗುತ್ತದೆ. ಇದರ ಕೀರ್ತಿ ಗಣೇಶ್‌ಪ್ರಸಾದ್‌ಗೆ ಸಲ್ಲುತ್ತದೆ. ನನಗೆ ಹಾಗೂ ಡಿಸಿಎಂಗೆ ಮನವಿ ಮಾಡುವ ಮೂಲಕ ನಿಮ್ಮೆಲ್ಲರ ನಿರೀಕ್ಷೆಯನ್ನು ಸಾಕಾರಗೊಳಿಸಿದ್ದಾರೆ ಎಂದು ತಿಳಿಸಿದರು.
ಗುಂಡ್ಲುಪೇಟೆ ಹಿಂದುಳಿದ ತಾಲೂಕಾಗಿರುವುದರಿಂದ ವಿಶೇಷ ಪ್ರಾತಿನಿಧ್ಯ ನೀಡಿದ್ದೇವೆ. ದಿ.ಮಹದೇವಪ್ರಸಾದ್ ಅವಧಿಯಲ್ಲಿ ನೀರು ತುಂಬಿಸುವ ಯೋಜನೆಗೆ ಮಂಜೂರಾತಿ ನೀಡಿದ್ದೆ. ಹಾಗೆಯೇ 475 ಕೋಟಿ ರೂ. ಜತೆಗೆ 48 ಕೋಟಿ ರೂ. ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದ್ದರೂ ಶ್ರಮ ಮಾತ್ರ ಗಣೇಶ್ ಪ್ರಸಾದ್ ಅವರದ್ದಾಗಿದೆ. ಮೂರು ವರ್ಷದಲ್ಲಿ ಅನೇಕ ಅಭಿವೃದ್ಧಿ ಕೆಲಸ ಮಾಡಿರುವ ಗಣೇಶ್ ಜನಮಾನಸದಲ್ಲಿ ಉಳಿಯುವ ಕಾರ್ಯ ಮಾಡಿದ್ದಾರೆ ಎಂದು ಶ್ಲಾಘಿಸಿದರು.
ಅಭಿವೃದ್ಧಿ ಸಹಿಸಲಾಗದ ವಿಪಕ್ಷದವರು ರಾಜಕೀಯವಾಗಿ ನಮ್ಮ ಸರ್ಕಾರದ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ದಯಮಾಡಿ ಅವರ ಮಾತನ್ನು ಯಾರೂ ಕೇಳಬಾರದು. ಕಾಂಗ್ರೆಸ್ ಮಹಿಳೆಯರ ಪರವಾಗಿ ಇರುವ ಪಕ್ಷ. 140 ಕೋಟಿ ಜನಸಂಖ್ಯೆಯಲ್ಲಿ 70 ಕೋಟಿಯಷ್ಟು ಮಹಿಳೆಯರಿದ್ದು ನಾರಿಶಕ್ತಿ ಹಾಗೂ ರಾಜಕೀಯ ನಿರ್ಣಯದಲ್ಲಿ ಅವರ ಪಾತ್ರ ಬಹುಮುಖ್ಯವಾದುದು ಎಂದರು.
ಗ್ಯಾರಂಟಿ ಯೋಜನೆ ಜಾರಿ ಮಾಡುವ ವೇಳೆ ವಿರೋಧ ಮಾಡಿದ ಬಿಜೆಪಿಯವರು ಕಾಪಿ ಮಾಡಲಿ ಹೊರಟಿರುವುದು ನಾಚಿಕೆಗೇಡು. ಗ್ಯಾರಂಟಿ ಯೋಜನೆ ಜಾರಿಯಾದರೆ ರಾಜ್ಯ ಆರ್ಥಿಕವಾಗಿ ದಿವಾಳಿಯಾಗುತ್ತೆ ಎಂದಿದ್ದರು. ಆದರೆ ಈವರೆಗೆ ಅಭಿವೃದ್ಧಿಯಿಂದ ಹಿಂದೆ ಬಿದ್ದಿಲ್ಲ, ಕೊಟ್ಟ ಮಾತಿನಂತೆ ನಡೆದ ಪಕ್ಷ ಯಾವುದಾದರೂ ಇದ್ದರೆ ಅದು ಕಾಂಗ್ರೆಸ್ ಎಂದರು.
ಗಣೇಶ್ ಪ್ರಸಾದ್ ಬೆನ್ನುತಟ್ಟಿದ ಸಿಎಂ:ಗಣೇಶ್ ಪ್ರಸಾದ್ ತನ್ನ ತಂದೆಯಂತೆಯೇ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡು ಒಳ್ಳೆಯ ಶಾಸಕ ಎಂದು ಹೆಸರಾಗಿದ್ದಾರೆ ಎಂದು ಬೆನ್ನುತಟ್ಟಿದರು. ನಿಮಗೆ ಒಳ್ಳೆಯ ಎಂಎಲ್‌ಎ ಸಿಕ್ಕಿದ್ದಾರೆ. ಕಳೆದ ಬಾರಿಯಂತೆ ಮುಂದಿನ ಚುನಾವಣೆಯಲ್ಲಿಯೂ ಇನ್ನೂ ಹೆಚ್ಚಿನ ಮತಗಳಿಂದ ಗೆಲ್ಲಿಸಿ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.