ವಿದ್ಯಾರ್ಥಿಗಳಿಗೆ ಟೀ ಶರ್ಟ್‌ಗಳನ್ನು ನೀಡಿದ ಬ್ಯಾಂಕ್ ಅಧಿಕಾರಿ
ಹನೂರು:ತಾಲೂಕಿನ ಶಾಗ್ಯ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಸರ್ಕಾರಿ ಸೇವೆಗೆ ಸೇರಿದ ಮಹಿಳಾ ಅಧಿಕಾರಿಯೊಬ್ಬರು ಬುಧವಾರ ಮೊದಲ ತಿಂಗಳ ಸಂಬಳದಲ್ಲಿ ಟೀ ಶರ್ಟ್ ವಿತರಿಸಿದರು.
ಶಾಗ್ಯ ಗ್ರಾಮದ ಕುಸುಮಾ ಕೆಂಚಪ್ಪ ಅವರು ಬೆಂಗಳೂರಿನಲ್ಲಿ ನೆಲೆಸಿದ್ದು, ಬ್ಯಾಂಕ್ ಅಭಿವೃದ್ಧಿ ಅಧಿಕಾರಿಯಾಗಿ ನೇಮಕಗೊಂಡಿದ್ದರು. ಬಂದ ಮೊದಲ ತಿಂಗಳ ಸಂಬಳದಲ್ಲಿ ಈ ಕಾರ್ಯ ಮಾಡಿದ್ದಾರೆ. ಈ ಬಗ್ಗೆ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಈ ವೇಳೆ ಕುಸುಮಾ ಕೆಂಚಪ್ಪ ಮಾತನಾಡಿ, ವಿದ್ಯಾರ್ಥಿ ದಿಸೆಯಲ್ಲೇ ನೈತಿಕ ಮೌಲ್ಯಗಳನ್ನು ಬೆಳೆಸಿಕೊಳ್ಳುವುದರ ಜತೆಗೆ ಓದಿನ ಕಡೆ ಹೆಚ್ಚಿನ ಒತ್ತನ್ನು ನೀಡುವುದರ ಮೂಲಕ ಶೈಕ್ಷಣಿಕವಾಗಿ ಪ್ರಗತಿ ಸಾಧಿಸಬೇಕು. ಇದರಿಂದ ಭವಿಷ್ಯದಲ್ಲಿ ಉತ್ತಮ ಜೀವನವನ್ನು ರೂಪಿಸಿಕೊಳ್ಳಬಹುದು. ಈ ಬಗ್ಗೆ ಪ್ರತಿಯೊಬ್ಬರೂ ಮನದಟ್ಟು ಮಾಡಿಕೊಳ್ಳಬೇಕು. ಇನ್ನು ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಫಲಿತಾಂಶವನ್ನು ಪಡೆಯಬೇಕು. ಶಾಲೆ, ಗ್ರಾಮ, ಪಾಲಕರು ಹಾಗೂ ಶಿಕ್ಷಕರಿಗೆ ಕೀರ್ತಿ ತರಬೇಕು ಎಂದು ತಿಳಿಸಿದರು.
ಮುಖ್ಯಶಿಕ್ಷಕ ಮಹಾದೇವ, ಗ್ರಾಪಂ ಮಾಜಿ ಅಧ್ಯಕ್ಷ ಶಿವಮಲ್ಲಪ್ಪ, ಮುಖಂಡರಾದ ಪರಶಿವಮೂರ್ತಿ, ಮುತ್ತುರಾಜು, ಸಂಧ್ಯಾ, ಸುಜಾತಾ, ಸುಂದ್ರಮ್ಮ, ಪೊಲೀಸ್ ಪೇದೆ ಚಂದ್ರಶೇಖರ್ ಹಾಗೂ ಶಾಲೆಯ ಶಿಕ್ಷಕರು ಇದ್ದರು.