ಕಾವೇರಿಯಿಂದ ರಾಮನಗುಡ್ಡೆ ಡ್ಯಾಂ ಭರ್ತಿ

 ಹನೂರು ತಾಲೂಕಿನ ರಾಮನಗುಡ್ಡೆ ಕೆರೆ ಕಾವೇರಿ ನೀರಿನಿಂದ ಭರ್ತಿಯಾಗಿರುವುದು.
ಹನೂರು ತಾಲೂಕಿನ ರಾಮನಗುಡ್ಡೆ ಕೆರೆ ಕಾವೇರಿ ನೀರಿನಿಂದ ಭರ್ತಿಯಾಗಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ರೈತರಲ್ಲಿ ಹರ್ಷ
  • ಹೆಚ್ಚಿದ ಅಂತರ್ಜಲ ಮಟ್ಟ
  • ಹಸಿರಿನಿಂದ ಕಂಗೊಳಿಸುತ್ತಿರುವ ಫಸಲು

ಹನೂರು:

ತಾಲೂಕಿನಲ್ಲಿ ಈ ವರ್ಷ ಬರಗಾಲ ಎದುರಾಗಿದ್ದು, ಜಲಾಶಯಗಳಲ್ಲಿ ನೀರಿನ ಪ್ರಮಾಣ ಕ್ಷೀಣಿಸುತ್ತಿದ್ದರೆ, ಮಂಗಲ ಸಮೀಪದ ರಾಮನಗುಡ್ಡೆ ಡ್ಯಾಂ(ದೊಡ್ಡಕೆರೆ) ಕಾವೇರಿ ನೀರಿನಿಂದ ಭರ್ತಿಯಾಗಿದ್ದು, ರೈತರಲ್ಲಿ ಸಂತಸ ಮೂಡಿಸಿದೆ.

ತಾಲೂಕು ವ್ಯಾಪ್ತಿಯಲ್ಲಿ ಉಡುತೊರೆಹಳ್ಳ, ಮಿನ್ನತ್ತುಹಳ್ಳ, ಕೀರೆಪಾತಿ, ಹುಬ್ಬೆಹುಣಸೆ, ರಾಮನಗುಡ್ಡೆ, ಗೋಪಿನಾಥಂ ಸೇರಿದಂತೆ ಇನ್ನಿತರ ಹಲವು ಜಲಾಶಯಗವೆ. ಮಳೆಯಾದ ವೇಳೆ ಈ ಡ್ಯಾಂಗಳು ಭರ್ತಿಯಾಗುತ್ತಿದ್ದವು. ಇದರಿಂದ ಕೃಷಿ ಹಾಗೂ ಕುಡಿಯುವ ನೀರಿಗೆ ಅನುಕೂಲವಾಗುತ್ತಿತ್ತು. ಆದರೆ ಈ ಬಾರಿ ಮಳೆಯಾಗದ ಪರಿಣಾಮ ಈ ಡ್ಯಾಂಗಳಲ್ಲಿ ನೀರಿನಮಟ್ಟ ಗಣನೀಯವಾಗಿ ಕುಸಿದಿದೆ. ಆದರೆ ರಾಮನಗುಡ್ಡೆ ದೊಡ್ಡಕೆರೆಯು ಕಾವೇರಿ ನೀರಿನಿಂದ ತುಂಬಿ ತುಳುಕುತ್ತಿದೆ.
ಕ್ಷೇತ್ರ ವ್ಯಾಪ್ತಿಯ ಹುಬ್ಬೆಹುಣಸೆ, ರಾಮನಗುಡ್ಡೆ ಹಾಗೂ ಗುಂಡಾಲ್ ಜಲಾಶಯದ ಅಚ್ಚುಕಟ್ಟು ಪ್ರದೇಶದಲ್ಲಿ ಹೆಚ್ಚಿನ ರೈತರು ಕೃಷಿ ಮಾಡುತ್ತಿದ್ದಾರೆ. ಆದರೆ ಬೇಸಿಗೆ ವೇಳೆ ಈ ಡ್ಯಾಂಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿತ್ತು. ಇದರಿಂದ ಕೃಷಿಗೆ ತೊಡುಕಾಗಿ ಪರಿಣಮಿಸಿತ್ತು. ಡ್ಯಾಂಗಳಿಗೆ ಕಾವೇರಿ ನದಿ ಮೂಲದಿಂದ ನೀರು ತುಂಬಿಸುವಂತೆ ರೈತರು ಒತ್ತಾಯಿಸುತ್ತಿದ್ದರು. ಈ ಹಿನ್ನೆಲೆ ಕಳೆದ 5 ವರ್ಷದ ಹಿಂದೆ ಕ್ಷೇತ್ರ ವ್ಯಾಪ್ತಿಯ ಈ 3 ಜಲಾಶಯಕ್ಕೆ ಕಾವೇರಿ ನದಿ ಮೂಲದಿಂದ ನೀರು ತುಂಬಿಸುವ ಯೋಜನೆಯಡಿ 132 ಕೋಟಿ ರೂ.ವೆಚ್ಚದಲ್ಲಿ ಕಾಮಗಾರಿಯನ್ನು ಕೈಗೊಳ್ಳಲಾಗಿತ್ತು. ಆದರೆ ಕೆಲ ಕಾರಣಾಂತರದಿಂದ ಕಾಮಗಾರಿ ಬೂದುಬಾಳು ಗ್ರಾಮದವರೆಗಷ್ಟೇ ಆಗಿತ್ತು. ಇಲ್ಲಿಂದ ಗುಂಡಾಲ್ ಜಲಾಶಯಕ್ಕೆ ಮಾತ್ರ ನೀರು ಪೂರೈಕೆಯಾಗುತ್ತಿತ್ತು. ಇನ್ನುಳಿದ ರಾಮನಗುಡ್ಡೆ ಹಾಗೂ ಹುಬ್ಬೆಹುಣಸೆ ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ನನೆಗುದಿಗೆ ಬಿದ್ದಿತ್ತು. ಈ ಬಗ್ಗೆ ರೈತರಿಂದ ಒತ್ತಾಯ ಕೇಳಿ ಬಂದಿತ್ತು.
ಭರ್ತಿಯಾಗಿರುವ ಕೆರೆ
ಗುಂಡಾಲ್ ಜಲಾಶಯಕ್ಕೆ ನೀರು ಪೂರೈಕೆಯಾಗುತ್ತಿರುವ ಬೂದುಬಾಳು ಗ್ರಾಮದ ನೀರು ಘಟಕದಿಂದ ಹಳ್ಳದ ಮೂಲಕ ರಾಮನಗುಡ್ಡೆ ಕೆರೆಗೆ ನೀರು ಹರಿಸಲು ಅಗತ್ಯ ಕ್ರಮವಹಿಸುವಂತೆ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಶಾಸಕ ಎಂ.ಆರ್.ಮಂಜುನಾಥ್ ಸೂಚಿಸಿದ್ದರು. 2.50 ಕೋಟಿ ರೂ.ವೆಚ್ಚದಲ್ಲಿ ಕಾಮಗಾರಿ ಕೈಗೊಂಡು ಕಳೆದ 2 ತಿಂಗಳ ಹಿಂದೆ ನೀರು ಹರಿಸುವ ಕಾರ್ಯಕ್ಕೆ ಚಾಲನೆ ನೀಡಿದ್ದರು.
ಅಂತರ್ಜಲ ವೃದ್ಧಿ
ರಾಮನಗುಡ್ಡೆ ಕೆರೆ ಕಾವೇರಿ ನೀರಿನಿಂದ ಭರ್ತಿಯಾಗಿರುವುದರಿಂದ ಕೃಷಿಗೆ ಅನುಕೂಲವಾಗಿದ್ದು, ರೈತರಲ್ಲಿ ಸಂತಸ ಮನೆ ಮಾಡಿದೆ. ಬೂದುಬಾಳು ಗ್ರಾಮದಿಂದ ಕೆರೆಯತನಕ ಸುಮಾರು 4 ಕಿ.ಮೀ.ವರೆಗಿನ ಹಳ್ಳದಲ್ಲಿ ನೀರು ಹರಿದು ಬರುತ್ತಿರುವುದರಿಂದ ಅಂತರ್ಜಲ ಮಟ್ಟ ವೃದ್ಧಿಯಾಗಿದೆ. ಇದರಿಂದ ನೀರು ಕ್ಷೀಣಿಸಿದ್ದ ಪಂಪ್‌ಸೆಟ್‌ಗಳಲ್ಲಿ ಉತ್ತಮ ನೀರು ಲಭ್ಯವಾಗುತ್ತಿದೆ. ಮಳೆಯಿಲ್ಲದ ಪರಿಣಾಮ ಬಿತ್ತನೆಯಾಗದೇ ತಾಲೂಕಿನ ಎಲ್ಲೆಡೆ ಬರಗಾಲ ಎದುರಾಗಿರುವ ಈ ಸಂದರ್ಭದಲ್ಲಿ ರಾಮನಗುಡ್ಡೆ ಕೆರೆ ಭರ್ತಿಯಾಗಿರುವುದು ಈ ಭಾಗದ ರೈತರಿಗೆ ವರದಾನವಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net