ಗುಂಡ್ಲುಪೇಟೆ:ತಾಲೂಕಿನ ಕೆರೆಗಳಿಗೆ ನೀರು ತುಂಬಿಸುವಂತೆ ಒತ್ತಾಯಿಸಿ ಹುತ್ತೂರು ಏತ ನೀರಾವರಿ ಯೋಜನೆಯ ನಾಲ್ಕನೇ ಹಂತದ ಅಚ್ಚುಕಟ್ಟು ಪ್ರದೇಶದ ರೈತರು ಚಾಮರಾಜನಗರ ತಾಲೂಕಿನ ತಮ್ಮಡಹಳ್ಳಿ ಪಂಪ್ಹೌಸ್ ಬಳಿ ಮಂಗಳವಾರದಿಂದ ಎರಡನೇ ಬಾರಿಗೆ ಪ್ರತಿಭಟನೆ ಆರಂಭಿಸಿದ್ದಾರೆ.
ತಾಲೂಕಿನ ಕಲ್ಲುಕಟ್ಟೆಹಳ್ಳ ಜಲಾಶಯ ಹಾಗೂ ವಿಜಯಪುರ ಅಮಾನಿ ಕೆರೆಗಳಿಗೆ ನೀರು ತುಂಬಿಸುವಂತೆ ಒತ್ತಾಯಿಸಿ ಅಚ್ಚುಕಟ್ಟು ಪ್ರದೇಶದ ರೈತರು ಕಳೆದ ತಿಂಗಳು ಅನಿರ್ದಿಷ್ಟಾವಧಿ ಪ್ರತಿಭಟನೆ ಕೈಗೊಂಡಿದ್ದರು. ಈ ವೇಳೆ ಅಧಿಕಾರಿಗಳ ಜತೆ ಪ್ರತಿಭಟನಾಕಾರರನ್ನು ಭೇಟಿ ಮಾಡಿದ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಕೆರೆಹಳ್ಳಿ ಪಂಪ್ಹೌಸ್ನ ಮೂರು ಮೋಟಾರುಗಳ ರಿಪೇರಿ ಕಾರ್ಯ ನಡೆಯುತ್ತಿದ್ದು ಡಿಸೆಂಬರ್ ಮೊದಲ ವಾರದಲ್ಲಿ ನೀರು ಹರಿಸುವುದಾಗಿ ಭರವಸೆ ನೀಡಿದ್ದರಿಂದ ಪ್ರತಿಭಟನೆ ಕೈಬಿಡಲಾಯಿತು.
ಕೆರೆಹಳ್ಳಿ ಕೆರೆಯ ಪಂಪ್ಹೌಸ್ನಲ್ಲಿ ಮೂರು ಮೋಟಾರು ಅಳವಡಿಸಿದ ನಂತರ ತಮ್ಮಡಹಳ್ಳಿಯಿಂದ ಹುತ್ತೂರಿಗೆ ನೀರು ತುಂಬಿಸಿದ ನಂತರ ಡಿ.5ರಂದು ಶಾಸಕರು ಹುತ್ತೂರು ಪಂಪ್ಹೌಸ್ನಲ್ಲಿ ಸ್ಚಿಚ್ ಆನ್ ಮಾಡಿ ವಡ್ಡಗೆರೆ ಕೆರೆಗೆ ನೀರು ಹರಿಸಿದ್ದರು. ಆದರೆ ನಾಲ್ಕೇ ದಿನಕ್ಕೆ ನದಿಯಿಂದ ನೀರೆತ್ತುವ ಆಲಂಬೂರು ಪಂಪ್ಹೌಸ್ನ ಮೋಟಾರುಗಳು ಕೆಟ್ಟಿದ್ದರಿಂದ ತಾಲೂಕಿನ ಕೆರೆಗಳಿಗೆ ನೀರು ಹರಿಯುವುದು ಸ್ಥಗಿತಗೊಂಡಿತ್ತು.
ಈ ಹಿನ್ನೆಲೆಯಲ್ಲಿ ಹುತ್ತೂರು ಏತ ನೀರಾವರಿ ಯೋಜನೆಯ ನಾಲ್ಕನೇ ಹಂತದ ಅಚ್ಚುಕಟ್ಟು ಪ್ರದೇಶದ ರೈತರು ಮಂಗಳವಾರ ಆಲಂಬೂರು, ಕೆರೆಹಳ್ಳಿ, ಕೋಣನೂರು ಹಾಗೂ ತಮ್ಮಡಹಳ್ಳಿ ಪಂಪ್ಹೌಸ್ಗಳಿಗೆ ಭೇಟಿ ನೀಡಿ ಅಲ್ಲಿನ ಮೋಟಾರುಗಳ ಸ್ಥಿತಿಗತಿಗಳನ್ನು ಪರಿಶೀಲಿಸಿ ವಾಸ್ತವವನ್ನು ಪರಿಶೀಲಿದರು.
ಆದರೆ ತಾಲೂಕಿನ ಹುತ್ತೂರು ಕೆರೆಗೆ ನೀರೆತ್ತುವ ತಮ್ಮಡಹಳ್ಳಿ ಪಂಪ್ಹೌಸ್ಗೆ ಇನ್ನೂ ನೀರು ಬಂದಿಲ್ಲ. ಅಲ್ಲದೆ ಅಲ್ಲಿನ ಮೂರರಲ್ಲಿ ಎರಡು ಮೋಟಾರುಗಳು ಕೆಟ್ಟಿರುವುದು ಕಂಡುಬಂದಿರುವ ಹಿನ್ನೆಲೆಯಲ್ಲಿ ಅವುಗಳನ್ನು ಕೂಡಲೇ ರಿಪೇರಿ ಮಾಡಬೇಕು. ಎರಡು ಮೋಟಾರುಗಳಲ್ಲಿ ಹುತ್ತೂರಿಗೆ ನೀರು ಹರಿಸಲು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿ ತಮ್ಮಡಹಳ್ಳಿ ಪಂಪ್ಹೌಸ್ ಎದುರು ಮಂಗಳವಾರದಿಂದ ಎರಡನೇ ಹಂತದ ಪ್ರತಿಭಟನೆ ಹಮ್ಮಿಳ್ಳಲಾಗಿದೆ ಎಂದು ರೈತ ಮುಖಂಡ ಎಸ್.ಎಂ.ನಾಗಾರ್ಜುನಕುಮಾರ್ ತಿಳಿಸಿದ್ದಾರೆ.