ಬೆಳಗಾವಿಗೆ ಹೊರಟ ರೈತ ಮುಖಂಡರು

ಗುಂಡ್ಲುಪೇಟೆಯಿಂದ ಬೆಳಗಾವಿಗೆ ಹೊರಟ ರೈತ ಮುಖಂಡರು.
ಗುಂಡ್ಲುಪೇಟೆಯಿಂದ ಬೆಳಗಾವಿಗೆ ಹೊರಟ ರೈತ ಮುಖಂಡರು.
Published on

ವಿವಿಧ ಬೇಡಿಕೆಗಳನ್ನು ಈಡೇರಿಸಲು ಮನವಿ ಸಲ್ಲಿಸುವ ಹಿನ್ನೆಲೆ

ಗುಂಡ್ಲುಪೇಟೆ: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವಾಸುದೇವ ಮೇಟಿ ಬಣ ಸುಮಾರು 25 ಜನರ ಎರಡು ತಂಡ ಬೆಳಗಾವಿಗೆ ಹೊರಟಿದ್ದು ಈ ಬಾರಿ ಚಳಿಗಾಲದ ಅಧಿವೇಶನದ ಸಮಯದಲ್ಲಿ ಮೈಸೂರು ಚಾಮರಾಜನಗರ ಜಿಲ್ಲೆಯಲ್ಲಿ ಹೆಚ್ಚು ಉಪಟಳ ನೀಡುತ್ತಿರುವ ಕಾಡುಪ್ರಾಣಿಗಳ ಹಾವಳಿಯನ್ನು ತಪ್ಪಿಸಬೇಕು ಎಂದು ಮುಖ್ಯಮಂತ್ರಿಗೆ ಮನವಿ ಸಲ್ಲಿಸಲು ತಾಲೂಕಿನ 25 ಜನ ರೈತ ಮುಖಂಡರು ಸುವರ್ಣಸೌಧ ಬೆಳಗಾವಿ ಚಲೋ ಹಮ್ಮಿಕೊಂಡಿದ್ದಾರೆ.
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವಾಸುದೇವ ಮೇಟಿ ಬಣದ 25 ಜನರ ಎರಡು ತಂಡ ಭಾನುವಾರ ಎರಡು ಟೆಂಪೋಗಳಲ್ಲಿ ಬೆಳಗಾವಿಗೆ ಪ್ರಯಾಣ ಬೆಳೆಸಿದರು. ಹೋಂಸ್ಟೇ ಹಾಗೂ ರೆಸಾರ್ಟ್‌ಗಳನ್ನು ಸಂರಕ್ಷಿತ ಅರಣ್ಯದಿಂದ ಕನಿಷ್ಠ 10 ಕಿ.ಮೀ. ದೂರದಲ್ಲಿಡಬೇಕು. ಅಕ್ರಮ ರೆಸಾರ್ಟ್‌ಗಳನ್ನು ಕೂಡಲೆ ಮುಚ್ಚಬೇಕು, ಚಾಮರಾಜನಗರ ಜಿಲ್ಲೆಯ ಎಲ್ಲ ಕೆರೆಗಳಿಗೆ ನೀರು ತುಂಬಿಸಬೇಕು, ಅಕ್ರಮ ಗಣಿಗಾರಿಕೆ ಹಾಗೂ 16 ರಿಂದ 20 ಚಕ್ರದ ಭಾರೀ ವಾಹನಗಳ ಸಂಚಾರಕ್ಕೆ ಕಡಿವಾಣ ಹಾಕುವುದು, ರೈತರು ಬೆಳೆದ ಎಲ್ಲ ಬೆಳೆಗಳಿಗೆ ಸಮಯಕ್ಕೆ ಸರಿಯಾಗಿ ಬೆಂಬಲ ಬೆಲೆ ಘೋಷಣೆ ಮಾಡಿ ಶೀಘ್ರವಾಗಿ ಖರೀದಿ ಕೇಂದ್ರಗಳನ್ನು ತೆರೆಯುವುದು, ಸರ್ಕಾರಿ ಅಧಿಕಾರಿಗಳ ಲಂಚಾವತಾರ ಬಡ ರೈತರಿಗೆ ಹೊರಲಾರದ ಹೊರೆಯಾಗಿದ್ದು ಲೋಕಾಯುಕ್ತ ಸಂಸ್ಥೆಯನ್ನು ಇನ್ನಷ್ಟು ಸದೃಢಗೊಳಿಸಿ ದಕ್ಷ ಅಧಿಕಾರಿಗಳನ್ನು ನೇಮಿಸಬೇಕು ಎಂಬ ಒತ್ತಾಯಗಳು ಸೇರಿದಂತೆ ಜಿಲ್ಲಾ ಸಮಸ್ಯೆಗಳನ್ನು ರಾಜ್ಯ ಸಮಿತಿಯ ಜತೆ ಸೇರಿ ಬೆಳಗಾವಿಯ ಸುವರ್ಣಸೌಧದಲ್ಲಿ ದನಿಯೆತ್ತುವ ಸಲುವಾಗಿ ಎಲ್ಲ ರೈತ ಹೋರಾಟಗಾರರು ಬೆಳಗಾವಿಗೆ ಹೊರಡುತ್ತಿದ್ದೇವೆ.
ರೈತರ ಪರವಾಗಿ ಜಿಲ್ಲೆಯ ಸಂಕಷ್ಟಗಳನ್ನು ಮುಖ್ಯಮಂತ್ರಿಗೆ ತಲುಪಿಸುವ ಪ್ರಯತ್ನವನ್ನು ಪ್ರಾಮಾಣಿಕವಾಗಿ ಮಾಡಲಿದ್ದೇವೆ ಎಂದು ಸಂಘದ ಜಿಲ್ಲಾಧ್ಯಕ್ಷ ಮಾಡ್ರಹಳ್ಳಿ ಮಹದೇವಪ್ಪ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net