ಗೃಹಜ್ಯೋತಿ ಪರಿಶೀಲನೆ ತ್ವರಿತಗೊಳಿಸಿ

 ಚಾಮರಾಜನಗರ ಸೆಸ್ಕಾಂ  ವಿಭಾಗೀಯ ಕಚೇರಿ ಸಭಾಂಗಣದಲ್ಲಿ ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿಯ ಅಧ್ಯಕ್ಷ ಹೊಂಗನೂರು ಚಂದ್ರು ಅಧ್ಯಕ್ಷತೆಯಲ್ಲಿ  ಗೃಹ ಜ್ಯೋತಿ ಪರಿಶೀಲನೆ ಕುರಿತು ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಸೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರದೀಪ್,  ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಚಾ.ನಗರ ನಲ್ಲೂರು ಸೋಮೇಶ್ವರ್, ಕೊಳ್ಳೇಗಾಲ  ರಾಜೇಂದ್ರ, ಯಳಂದೂರು ಪ್ರಭುಪ್ರಸಾದ್, ಹನೂರು ರಾಜಪ್ಪ, ಗುಂಡ್ಲುಪೇಟೆ  ತೆರಕಣಾಂಬಿ ರವಿ ಇದ್ದರು.
ಚಾಮರಾಜನಗರ ಸೆಸ್ಕಾಂ ವಿಭಾಗೀಯ ಕಚೇರಿ ಸಭಾಂಗಣದಲ್ಲಿ ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿಯ ಅಧ್ಯಕ್ಷ ಹೊಂಗನೂರು ಚಂದ್ರು ಅಧ್ಯಕ್ಷತೆಯಲ್ಲಿ ಗೃಹ ಜ್ಯೋತಿ ಪರಿಶೀಲನೆ ಕುರಿತು ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಸೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರದೀಪ್, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಚಾ.ನಗರ ನಲ್ಲೂರು ಸೋಮೇಶ್ವರ್, ಕೊಳ್ಳೇಗಾಲ ರಾಜೇಂದ್ರ, ಯಳಂದೂರು ಪ್ರಭುಪ್ರಸಾದ್, ಹನೂರು ರಾಜಪ್ಪ, ಗುಂಡ್ಲುಪೇಟೆ ತೆರಕಣಾಂಬಿ ರವಿ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ವಿ.ಚಂದ್ರು ಸೂಚನೆ
  • ಸೆಸ್ಕಾಂ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆ
ಚಾಮರಾಜನಗರ: ಜಿಲ್ಲೆಯಲ್ಲಿ ಗೃಹಜ್ಯೋತಿ ಯೋಜನೆಯ ಲಾನುಭವಿಗಳ ಪರಿಶೀಲನಾ ಪ್ರಕ್ರಿಯೆಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿ ಎಂದು ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ವಿ.ಚಂದ್ರು ಸೂಚನೆ ನೀಡಿದರು.
ನಗರದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಕಚೇರಿಯ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು. ಗೃಹಜ್ಯೋತಿ ನೈಜ ಲಾನುಭವಿಗಳ ಪರಿಶೀಲನೆಯನ್ನು ನಿಗದಿ ಪಡಿಸಿರುವ ಅವಧಿಯೊಳಗೆ ಪೂರ್ಣಗೊಳಿಸಬೇಕು ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಜಾರಿಗೆ ತಂದ ಪಂಚ ಗ್ಯಾರಂಟಿ ಯೋಜನೆಗಳು ಬಡವರಿಗೆ ತುಂಬಾ ಉಪಯೋಗವಾಗಿವೆ. ಗೃಹಲಕ್ಷ್ಮೀ ಹಣ ಕೂಡಿಟ್ಟ ಹಲವು ಮಹಿಳೆಯರು ಸಣ್ಣ ಉದ್ಯಮ ಶುರು ಮಾಡಿದ್ದಾರೆ. ಯುವನಿಧಿಯಿಂದ ನಿರುದ್ಯೋಗಿ ಯುವಕರಿಗೆ ಭತ್ಯೆ ಸಿಗುತ್ತಿದೆ. ಶಕ್ತಿ ಯೋಜನೆಯಡಿ ಮಹಿಳೆಯರು ಬಸ್‌ಗಳಲ್ಲಿ ಪ್ರಯಾಣ ಮಾಡುತ್ತಿದ್ದಾರೆ. ಗೃಹಜ್ಯೋತಿ ಮನೆಗಳನ್ನು ಬೆಳಗುತ್ತಿದೆ. ಇವುಗಳನ್ನು ಈಗಿನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜವಾಬ್ದಾರಿಯುತವಾಗಿ ಮುಂದುವರೆಸುತ್ತಿದ್ದಾರೆ. ಸೂಕ್ತ ಕಾರ್ಯ ಯೋಜನೆ ರೂಪಿಸಲು ಪರಿಶೀಲನೆ ಮಾಡಿಸುತ್ತಿದ್ದಾರೆ ಎಂದು ತಿಳಿಸಿದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಜಿಲ್ಲೆ ಮುಂಚೂಣಿಯಲ್ಲಿದೆ. ಜಿಲ್ಲೆಯಲ್ಲಿ 2,00,105 ಗೃಹ ಜ್ಯೋತಿ ಫಲಾನುಭವಿಗಳಿದ್ದು, ಈಗಾಗಲೇ 65 ಸಾವಿರ ಅರ್ಜಿಗಳನ್ನು ಫಲಾನುಭವಿಗಳಿಗೆ ನೀಡಿ, ಭರ್ತಿ ಮಾಡಿ ವಾಪಸ್ ಪಡೆದುಕೊಳ್ಳಲಾಗಿದೆ. ಶೇ. 33 ರಷ್ಟು ಪ್ರಗತಿ ಆಗಿದ್ದು, ಇನ್ನುಳಿದ ಅವಧಿಯಲ್ಲಿ ಎಲ್ಲ ಫಲಾನುಭವಿಗಳನ್ನು ತಲುಪಿ ಶೇ.100 ರಷ್ಟು ಪ್ರಗತಿ ನಮ್ಮ ಜಿಲ್ಲೆಯಿಂದ ಆಗಬೇಕೆಂಬುವುದೇ ನಮ್ಮ ಆಶಯವಾಗಿದೆ. ಇದಕ್ಕೆ ಸೆಸ್ಕಾಂ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಂಪೂರ್ಣವಾಗಿ ತೊಡಗಿಸಿಕೊಂಡು ಮನೆ ಮನೆಗಳಿಗೆ ತಲುಪಿ, ಮಾಹಿತಿಗಳನ್ನು ಪೂರ್ಣವಾಗಿ ಹಾಕಬೇಕು ಎಂದರು.
ಪಂಚ ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿಯ ಜಿಲ್ಲಾ ಹಾಗೂ ತಾಲೂಕು ಸಮಿತಿಯನ್ನು ರಚನೆ ಮಾಡಿದ್ದು, ಆಯಾ ವ್ಯಾಪ್ತಿಯಲ್ಲಿ ಗ್ಯಾರಂಟಿ ಸಮಿತಿಯ ಅಧ್ಯಕ್ಷರು, ಸದಸ್ಯರಿಗೆ ಸೆಸ್ಕಾಂ ಅಧಿಕಾರಿಗಳು ಮಾಹಿತಿ ನೀಡಬೇಕು. ವಿಭಾಗದ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ಮೂಲಕ ಸಮಿತಿ ಸದಸ್ಯರಿಗೂ ಮಾಹಿತಿ ಅವರನ್ನು ಪರಿಶೀಲನಾ ಸ್ಥಳಕ್ಕೆ ಆಗಮಿಸಿ, ಸಾರ್ವಜನಿಕರಲ್ಲಿ ಅರಿವು ಮೂಡಿಸುತ್ತಾರೆ. ಜೊತೆಗೆ ನಿಮ್ಮ ಕಾರ್ಯವು ಸುಗಮವಾಗಿ ನಡೆಯುತ್ತದೆ. ಇದರ ಸದ್ಬಳಕೆ ಬಗ್ಗೆ ಫಲಾನುಭವಿಗಳಿಗೆ ತಿಳಿವಳಿಕೆ ಮೂಡಿಸಬೇಕು ಎಂದು ಹೇಳಿದರು.
ಸೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರದೀಪ್ ಮಾತನಾಡಿ, ಕೊಳ್ಳೇಗಾಲ ಹಾಗೂ ಚಾಮರಾಜನಗರ ವಿಭಾಗದ ವ್ಯಾಪ್ತಿಯಲ್ಲಿ ಗೃಹಜ್ಯೋತಿ ಪರಿಶೀಲನೆ ವೇಗವಾಗಿ ನಡೆಯುತ್ತಿದೆ. ಪ್ರತಿ ದಿನವು ಸಹ ಮಾಹಿತಿಗಳನ್ನು ಪಡೆದುಕೊಳ್ಳುತ್ತೇವೆ. ನಮ್ಮ ಸಿಬ್ಬಂದಿ ಇತರೆ ಕೆಲಸ ಕಾರ್ಯಗಳನ್ನು ಬದಗೊತ್ತಿ, ತುರ್ತು ಸಂದರ್ಭದಲ್ಲಿ ಹೊರತು ಪಡಿಸಿ, ಇನ್ನುಳಿದ ವೇಳೆಯಲ್ಲಿ ಈ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಇಂಜಿನಿಯರ್‌ಗಳು ಇದರ ನಿರ್ವಹಣೆ ಮಾಡುತ್ತಿದ್ದು, ಬಿಡುವಿನ ವೇಳೆಯಲ್ಲಿ ಹೆಚ್ಚುವರಿಯಾಗಿ ಎರಡು ಗಂಟೆ ಕೆಲಸ ಮಾಡುವಂತೆ ಸೂಚನೆಯನ್ನು ನೀಡಿದ್ದೇವೆ. ಸಾರ್ವಜನಿಕರು ಸಹ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಸರ್ಕಾರದ ಯೋಜನೆಯನ್ನು ಜನರಿಗೆ ಮನವರಿಕೆ ಮಾಡಿಕೊಡುವುದು ಇದರ ಉದ್ದೇಶವಾಗಿದೆ ಎಂದು ಹೇಳಿದರು.
ಸಭೆಯಲ್ಲಿ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಚಾ.ನಗರ ನಲ್ಲೂರು ಸೋಮೇಶ್ವರ್, ಕೊಳ್ಳೇಗಾಲ ರಾಜೇಂದ್ರ, ಯಳಂದೂರು ಪ್ರಭುಪ್ರಸಾದ್, ಹನೂರು ರಾಜಪ್ಪ, ಗುಂಡ್ಲುಪೇಟೆ ತೆರಕಣಾಂಬಿ ರವಿ, ಕೊಳ್ಳೇಗಾಲ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ತಬಸ್ಸಮ್ ಅಫ್ತಾಬಾನು ಹಾಗೂ ಉಪ ವಿಭಾಗಗಳ ಇಂಜನಿಯರ್‌ಗಳು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net