ಸಿಮ್ಸ್‌ನಲ್ಲಿ ಎಂಡೋಸ್ಕೋಫಿ ಚಿಕಿತ್ಸೆ ಅಲಭ್ಯ

ಚಾಮರಾಜನಗರದ ಹೊರವಲಯದಲ್ಲಿರುವ ಸಿಮ್ಸ್ ಆಸ್ಪತ್ರೆ
ಚಾಮರಾಜನಗರದ ಹೊರವಲಯದಲ್ಲಿರುವ ಸಿಮ್ಸ್ ಆಸ್ಪತ್ರೆ
Published on

ಪ್ರಮುಖ ಮುಖ್ಯಾಂಶಗಳು

  • ಶಸ ಚಿಕಿತ್ಸಾ ವಿಭಾಗದ ನಿರ್ಲಕ್ಷ್ಯ
  • ಲ್ಯಾಪ್ರೋಸ್ಕೋಫಿ ಚಿಕಿತ್ಸೆಗೂ ಹಿಂದೇಟು
  • ನಿತ್ಯವೂ ರೋಗಿಗಳ ಪರದಾಟ
ಚಾಮರಾಜನಗರ: ಚಾ.ನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮತ್ತು ಬೋಧನಾ ಆಸ್ಪತ್ರೆಯ ಶಸ ಚಿಕಿತ್ಸಾ ವಿಭಾಗದ ಎಂಡೋಸ್ಕೋಫಿ ಯಂತ್ರ ರೋಗಿಗಳ ಉಪಯೋಗಕ್ಕೆ ಬಾರದಂತಾಗಿದೆ.
ನಗರದ ಹೊರವಲಯದಲ್ಲಿರುವ ಸಿಮ್ಸ್ ಆಸ್ಪತ್ರೆಯ ಶಸ ಚಿಕಿತ್ಸಾ ವಿಭಾಗಕ್ಕೆ ನಿರಂತರ ಹೊಟ್ಟೆ ನೋವಿನಿಂದ ಬಳಲುತ್ತಿರುವ ರೋಗಿಗಳು, ಆಹಾರ ನುಂಗಲು ತೊಂದರೆ ಅನುಭವಿಸುವವರು, ತೂಕ ನಷ್ಟ, ಗುದದ್ವಾರದಲ್ಲಿ ರಕ್ತ ಸ್ರಾವ ಹಾಗೂ ಇನ್ನಿತರೆ ರೋಗಗಳು ಚಿಕಿತ್ಸೆಗೆ ಬರುತ್ತಾರೆ. ಅದರಲ್ಲೂ ವಿವಿಧ ಕಾರಣಕ್ಕೆ ಹೊಟ್ಟೆ ನೋವಿನಿಂದ ಬಳಲುವವರ ಸಂಖ್ಯೆ ಹೆಚ್ಚಾಗಿರುತ್ತದೆ. ಈ ರೋಗಿಗಳಿಗೆ ಅಗತ್ಯ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ 2022 ರಲ್ಲಿ ಎಂಡೋಸ್ಕೋಫಿ ಯಂತ್ರವನ್ನು ಶಸ ಚಿಕಿತ್ಸಾ ವಿಭಾಗಕ್ಕೆ ಹಸ್ತಾಂತರಿಸಲಾಗಿತ್ತು. ಆದರೆ ಈ ಯಂತ್ರ ಇದುವರೆಗೂ ಉಪಯೋಗಕ್ಕೆ ಬಾರದೆ ಮೂಲೆ ಗುಂಪಾಗಿದೆ. ಪರಿಣಾಮವಾಗಿ ಎಂಡೋಸ್ಕೋಫಿ ಚಿಕಿತ್ಸೆಗಾಗಿ ರೋಗಿಗಳು ಖಾಸಗಿ ಆಸ್ಪತ್ರೆ ಅಥವಾ ಮೈಸೂರಿಗೆ ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಸಂಬಂಧ ಸಾರ್ವಜನಿಕರು ಶಸಚಿಕಿತ್ಸಾ ವಿಭಾಗದ ಮುಖ್ಯಸ್ಥರಾದ ಡಾ.ಟಿ.ಕಿರಣ್ ಅವರಿಗೆ ಸಾಕಷ್ಟು ಬಾರಿ ಮನವಿ ಮಾಡಿದರೂ, ಯಾವುದೇ ಪ್ರಯೋಜನವಾಗಿಲ್ಲ. ಎಂಡೋಸ್ಕೋಫಿ ಚಿಕಿತ್ಸೆ ದೊರೆಯದೇ ಹಲವಾರು ರೋಗಿಗಳು ದೂರದ ಮೈಸೂರಿಗೆ ಹೋಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಅದರಲ್ಲೂ ಕೆಲವರು ಅಗತ್ಯ ಚಿಕಿತ್ಸೆ ದೊರೆಯದೇ ಮೃತಪಟ್ಟಿರುವ ಉದಾಹರಣೆಗಳು ಇದೆ. ಈ ನಿಟ್ಟಿನಲ್ಲಿ ಆದಷ್ಟು ಬೇಗ ಸಿಮ್ಸ್ ಆಸ್ಪತ್ರೆಯ ಶಸ ಚಿಕಿತ್ಸಾ ವಿಭಾಗದಲ್ಲಿ ಎಂಡೋಸ್ಕೋಫಿ ಚಿಕಿತ್ಸೆ ನೀಡುವುದನ್ನು ಪ್ರಾರಂಭಿಸಬೇಕು. ಇಲ್ಲವಾದರೇ ಮುಂದಿನ ದಿನಗಳಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಏನಿದು ಎಂಡೋಸ್ಕೋಫಿ?:
ಮನುಷ್ಯನ ದೇಹದ ಆಂತರಿಕ ಅಂಗಗಳನ್ನು ಹಾಗೂ ವಿಶೇಷವಾಗಿ ಜೀರ್ಣಾಂಗ ವ್ಯವಸ್ಥೆಯನ್ನು ಪರೀಕ್ಷಿಸಲು ಕ್ಯಾಮೆರಾ ಹೊಂದಿರುವ ಟ್ಯೂಬ್‌ಗೆ ಎಂಡೋಸ್ಕೋಫಿ ಎಂದು ಕರೆಯಲಾಗುತ್ತದೆ. ಇದು ಅತ್ಯಂತ ಪರಿಣಾಮಕಾರಿ ವೈದ್ಯಕೀಯ ವಿಧಾನವಾಗಿದೆ. ಈ ಪರೀಕ್ಷೆಯು ಹೊಟ್ಟೆನೋವು, ಹುಣ್ಣುಗಳು, ರಕ್ತಸ್ರಾವ, ಜೀರ್ಣಕ್ರಿಯೆ ಸಮಸ್ಯೆ, ಕ್ಯಾನ್ಸರ್‌ನಂತಹ ಕಾಯಿಲೆಗಳನ್ನು ಪತ್ತೆಹಚ್ಚಲು ಹಾಗೂ ಅಗತ್ಯ ಚಿಕಿತ್ಸೆ ನೀಡಲು ಇದು ಅತ್ಯಂತ ಸಹಕಾರಿಯಾಗಿದೆ. ಇದು ಶಸ ಚಿಕಿತ್ಸೆ ಇಲ್ಲದ ಸುಲಭವಾದ, ಸುರಕ್ಷಿತ, ನೋವುರಹಿತ ಹಾಗೂ ತ್ವರಿತ ಚಿಕಿತ್ಸಾ ಪ್ರಕ್ರಿಯೆಯಾಗಿದೆ. ಎಂಡೋಸ್ಕೋಫಿಯಲ್ಲಿ ಅನೇಕ ವಿಧಗಳು ಇದ್ದು, ರೋಗಿಗಳ ಕಾಯಿಲೆ ಪತ್ತೆಗ ಇದು ಅತ್ಯಂತ ಅಹಕಾರಿಯಾಗಿದೆ. ಆದರೆ ಸಿಮ್ಸ್‌ನಲ್ಲಿ ಇಂತಹ ಆಧುನಿಕ ಚಿಕಿತ್ಸಾ ಸೌಲಭ್ಯಗಳು ಇದ್ದರೂ, ಅದನ್ನು ಬಳಕೆ ಮಾಡದೇ ನಿರ್ಲಕ್ಷ್ಯವಹಿಸಿರುವುದು ದುರಂತವಾಗಿದೆ.
ಲ್ಯಾಪ್ರೋಸ್ಕೋಫಿ ಚಿಕಿತ್ಸೆಗೂ ಹಿಂದೇಟು:
ಸಿಮ್ಸ್ ಆಸ್ಪತ್ರೆಯ ಹೆರಿಗೆ ವಿಭಾಗ, ಕೀಲು ಮತ್ತು ಮೂಳೆ ವಿಭಾಗ, ಕಣ್ಣಿನ ವಿಭಾಗ, ದಂತ ಚಿಕಿತ್ಸಾ ವಿಭಾಗ ಹಾಗೂ ಇನ್ನಿತರೆ ವಿಭಾಗದವರು ಅತ್ಯಾಧುನಿಕವಾದ ಚಿಕಿತ್ಸಾ ಸೌಲಭ್ಯಗಳನ್ನು ಅಳವಡಿಸಿಕೊಳ್ಳುವ ಮೂಲಕ ರೋಗಿಗಳಿಗೆ ಉತ್ತಮವಾದ ಚಿಕಿತ್ಸೆಯನ್ನು ನೀಡುತ್ತಿದ್ದಾರೆ. ಆದರೆ ಶಸ ಚಿಕಿತ್ಸಾ ವಿಭಾಗಕ್ಕೆ ಲ್ಯಾಪ್ರೋಸ್ಕೋಫಿ ಯಂತ್ರವನ್ನು ಖರೀದಿಸಲು ವರ್ಷಗಳ ಹಿಂದೆಯೇ ಕ್ರಮಕೈಗೊಡಿದ್ದರಾದರೂ, ಶಸ ಚಿಕಿತ್ಸಾ ವಿಭಾಗದ ಮುಖ್ಯಸ್ಥರಾದ ಡಾ.ಟಿ.ಕಿರಣ್ ಅವರ ನಿರ್ಲಕ್ಷ್ಯದಿಂದ ಈವರೆಗೂ ರೋಗಿಗಳಿಗೆ ಲ್ಯಾಪ್ರೋಸ್ಕೋಫಿ ಚಿಕಿತ್ಸೆ ಅಲಭ್ಯವಾಗಿದೆ. ಪರಿಣಾಮವಾಗಿ ಲ್ಯಾಪ್ರೋಸ್ಕೋಫಿ ಚಿಕಿತ್ಸೆ ಪಡೆಯುವ ರೋಗಿಗಳು ಮೈಸೂರು ಹಾಗೂ ಇನ್ನಿತರೆ ಖಾಸಗಿ ಆಸ್ಪತ್ರೆಗಳಿಗೆ ಮುಖಮಾಡುವಂತಾಗಿದೆ. ಇದರಿಂದ ಸಿಮ್ಸ್ ಆಸ್ಪತ್ರೆಗೆ ಬರುವ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ತೊಂದರೆ ಉಂಟಾಗಿದೆ.
ನಗರದ ಸಿಮ್ಸ್ ಆಸ್ಪತ್ರೆಯ ಶಸ್ತ್ರ ಚಿಕಿತ್ಸಾ ವಿಭಾಗದಲ್ಲಿ ಮುಖ್ಯಸ್ಥರು ಹಾಗೂ ಹಲವಾರು ವೈದ್ಯರ ನಿರ್ಲಕ್ಷ್ಯದಿಂದ ಎಂಡೋಸ್ಕೋಪಿ ಮತ್ತು ಲ್ಯಾಪ್ರೋಸ್ಕೋಪಿ ಚಿಕಿತ್ಸೆ ಬಡ ರೋಗಿಗಳಿಗೆ ಲಭ್ಯವಾಗದಂತಾಗಿದೆ. ಇದರಿಂದ ರೋಗಿಗಳು ಖಾಸಗಿ ಆಸ್ಪತ್ರೆ ಮತ್ತು ಮೈಸೂರಿಗೆ ಹೋಗಬೇಕಾಗಿದೆ. ಸಂಬಂಧಪಟ್ಟವರು ಕೂಡಲೇ ಗಮನಹರಿಸಿ, ಅಗತ್ಯ ಚಿಕಿತ್ಸೆ ಲಭ್ಯವಾಗುವಂತೆ ಕ್ರಮವಹಿಸಬೇಕು.
-ಸ್ವಾಮಿ ಕುಂಭೇಶ್ವರ ಕಾಲೋನಿ, ಚಾಮರಾಜನಗರ
ಈಗಾಗಲೇ ಈ ಸಂಬಂಧ ಹಲವಾರು ದೂರುಗಳು ಬಂದಿದ್ದು, ಶಸ್ತ್ರ ಚಿಕಿತ್ಸಾ ವಿಭಾಗದ ಮುಖ್ಯಸ್ಥರ ಕಾರ್ಯವೈಖರಿಯ ಕುರಿತು ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಈ ಬಗ್ಗೆ ತನಿಖೆ ಪ್ರಗತಿಯಲ್ಲಿದೆ. ಮುಂದಿನ ದಿನಗಳಲ್ಲಿ ಅಗತ್ಯ ಕ್ರಮವಹಿಸಲಾಗುವುದು.
-ಡಾ.ಮಂಜುನಾಥ್, ನಿರ್ದೇಶಕ ಮತ್ತು ಡೀನ್, ಸಿಮ್ಸ್, ಚಾಮರಾಜನಗರ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net