ಜಮೀನಿನ ಬಂಡಿದಾರಿ ಒತ್ತುವರಿ

ಹನೂರಿನಲ್ಲಿ ಆಯೋಜಿಸಿದ್ದ ಸಾರ್ವಜನಿಕರ ಕುಂದು ಕೊರತೆ ದೂರು ಸ್ವೀಕಾರ ಕಾರ್ಯಕ್ರಮದಲ್ಲಿ ಲೋಕಾಯುಕ್ತ ಇನ್‌ಸ್ಪೆಕ್ಟರ್ ಲೋಹಿತ್‌ಕುಮಾರ್ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು. ಕೆ.ಎನ್ ಚೈತ್ರಾ, ಡಾ.ಪ್ರಕಾಶ್, ರೇಖಾ, ರಾಜೇಶ್ ಇನ್ನಿತರರಿದ್ದರು.
ಹನೂರಿನಲ್ಲಿ ಆಯೋಜಿಸಿದ್ದ ಸಾರ್ವಜನಿಕರ ಕುಂದು ಕೊರತೆ ದೂರು ಸ್ವೀಕಾರ ಕಾರ್ಯಕ್ರಮದಲ್ಲಿ ಲೋಕಾಯುಕ್ತ ಇನ್‌ಸ್ಪೆಕ್ಟರ್ ಲೋಹಿತ್‌ಕುಮಾರ್ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು. ಕೆ.ಎನ್ ಚೈತ್ರಾ, ಡಾ.ಪ್ರಕಾಶ್, ರೇಖಾ, ರಾಜೇಶ್ ಇನ್ನಿತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಲೋಕಾಯುಕ್ತ ಕುಂದುಕೊರತೆ ಸಭೆಯಲ್ಲಿ ಹಲವು ದೂರು
  • ಸಮಸ್ಯೆ ಬಗೆಹರಿಸುವಂತೆ ಸಾರ್ವಜನಿಕರ ಆಗ್ರಹ
ಹನೂರು: ಪಟ್ಟಣದ ಲೋಕೋಪಯೋಗಿ ಇಲಾಖೆಯ ಅತಿಥಿ ಗೃಹದ ಸಭಾಂಗಣದಲ್ಲಿ ಗುರುವಾರ ಜಿಲ್ಲಾ ಲೋಕಾಯುಕ್ತ ಪೊಲೀಸರಿಂದ ಆಯೋಜಿಸಿದ್ದ ಕುಂದುಕೊರತೆ, ದೂರು ಸ್ವೀಕಾರ ಕಾರ್ಯಕ್ರಮದಲ್ಲಿ 8 ಅರ್ಜಿಗಳು ಸಲ್ಲಿಕೆಯಾದವು.
ಎಲ್ಲೇಮಾಳ ಗ್ರಾಮದ ಸಂಜೀವ ಮಾತನಾಡಿ, ಜಮೀನಿಗೆ ತೆರಳಲು ಬಂಡಿದಾರಿ ಇದೆ. ಆದರೆ ಕೆಲವರು ದಾರಿಯನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಇದರಿಂದ ಓಡಾಡಲು ಸಮಸ್ಯೆಯಾಗಿದೆ. ಈ ಬಗ್ಗೆ ಸಂಬಂಧಪಟ್ಟವರಿಗೆ ಅರ್ಜಿ ಸಲ್ಲಿಸಿ ಒಂದು ವರ್ಷವಾಗಿದೆ. ಆದರೆ ಯಾವುದೇ ಕ್ರಮವಾಗಿಲ್ಲ ಎಂದು ದೂರಿದರು.
ಹನೂರಿನ ನಾಗರಾಜಮೂರ್ತಿ ಮಾತನಾಡಿ, ಜಮೀನಿನಲ್ಲಿ ವಿದ್ಯುತ್ ಪೂರೈಕೆಯಾಗದ ನಿರರ್ಥಕವಾಗಿರುವ ಹಳೆಯ ವಿದ್ಯುತ್ ಕಂಬವನ್ನು ತೆರವುಗೊಳಿಸುವಂತೆ ಸೆಸ್ಕ್ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಲಾಗಿದೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದರು.
ಹನೂರಿನ ಎ.ಜೆ ಕಾಲನಿಯ ಭಾಗ್ಯಾ ಮಾತನಾಡಿ, 2021-22ನೇ ಸಾಲಿನಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಮನೆಯನ್ನು ನಿರ್ಮಿಸಲಾಗಿದೆ. ಆದರೆ ಕೇಂದ್ರ ಸರ್ಕಾರದಿಂದ ಸಿಗಬೇಕಾದ ಅನುದಾನ ಬಿಡುಗಡೆಯಾಗಿಲ್ಲ. ಆದ್ದರಿಂದ ಈ ಬಗ್ಗೆ ಗಮನಹರಿಸುವಂತೆ ಮನವಿ ಮಾಡಿದರು.
ಇನ್ನು ಕುರಟ್ಟಿ ಹೊಸೂರು ಗ್ರಾಮದ ಸಿದ್ದರಾಜು ಮಾತನಾಡಿ, ಕುರಟ್ಟಿ ಹೊಸೂರು ಗ್ರಾಪಂನಲ್ಲಿ 2024ರಿಂದ 2026ನೇ ಸಾಲಿನವರೆಗೆ 15ನೇ ಹಣಕಾಸಿನ ಯೋಜನೆಯಡಿ ಇಲ್ಲಿನ ಅಧಿಕಾರಿಗಳು ನಕಲಿ ಬಿಲ್‌ಗಳನ್ನು ಸೃಷ್ಟಿಸಿ ಹಣ ದುರುಪಯೋಗ ಪಡಿಸಿಕೊಂಡಿದ್ದಾರೆ. ಈ ಬಗ್ಗೆ ತಾಪಂ ಅಧಿಕಾರಿಗಳು ಗ್ರಾಪಂಗೆ ಆಗಮಿಸಿ ಪರಿಶೀಲಿಸಿದ್ದಾರೆ. ಆದರೆ ಈವರೆಗೂ ಯಾವುದೇ ಕ್ರಮವಾಗಿಲ್ಲ ಎಂದು ದೂರಿದರು.
ಹನೂರಿನ ಆಂಜನೇಯ ಬೀದಿ ನಿವಾಸಿ ಮಹದೇವಸ್ವಾಮಿ ಅವರು ಸಾರ್ವಜನಿಕರು ಓಡಾಡಲು ಅತಿಕ್ರಮಿಸಿರುವ ರಸ್ತೆ ಒತ್ತುವರಿಯನ್ನು ತೆರವುಗೊಳಿಸುವಂತೆ ಮನವಿ ಮಾಡಿದರು. ಇದೇ ವೇಳೆ ಇನ್ನು ಹಲವರು ಸಮಸ್ಯೆಗಳನ್ನು ಹೇಳಿಕೊಂಡರು.
ಅಗತ್ಯ ಕ್ರಮ:
ಸಮಸ್ಯೆಗಳನ್ನು ಆಲಿಸಿದ ಲೋಕಾಯುಕ್ತ ಇನ್‌ಸ್ಪೆಕ್ಟರ್ ಲೋಹಿತ್‌ಕುಮಾರ್, ಸಾರ್ವಜನಿಕರ ಸಮಸ್ಯೆಗಳನ್ನು ಈಡೇರಿಸಲು ಅಗತ್ಯ ಕ್ರಮವಹಿಸುವಂತೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು. ಹನೂರು ತಾಲೂಕಿನಲ್ಲಿ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ವಿಳಂಬವಾಗುತ್ತಿದೆ ಎಂಬುದಾಗಿ ಸಾರ್ವಜನಿಕರಿಂದ ದೂರು ಬಂದಿದೆ. ಆದ್ದರಿಂದ ನಿಗದಿತ ಅವಧಿಯೊಳಗೆ ಅರ್ಜಿ ವಿಲೇವಾರಿಗೊಳಿಸುವುದರ ಮೂಲಕ ಸಮಸ್ಯೆ ಬಗೆಹರಿಸಬೇಕು. ಕಾನೂನು ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು. ತಹಸೀಲ್ದಾರ್ ಕೆ.ಎನ್ ಚೈತ್ರಾ, ಶಿರಸ್ತೇದಾರರಾದ ನಾಗೇಂದ್ರ, ಮಾದೇಶ್, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ರಾಜೇಶ್, ಟಿಎಚ್‌ಒ ಡಾ.ಪ್ರಕಾಶ್, ಪಪಂ ಮುಖ್ಯಾಧಿಕಾರಿ ರೇಖಾ, ಆರ್‌ಎಫ್‌ಒಗಳಾದ ನಿರಂಜನ್, ವಾಗೀಶ್, ತಾಪಂ ವ್ಯವಸ್ಥಾಪಕ ರಮೇಶ್ ಇನ್ನಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net