ಎಲ್ಲೆಡೆ ಕುಡಿವ ನೀರಿನದ್ದೇ ತಾಪತ್ರಯ

ಹನೂರು ತಾಲೂಕಿನ ಹುತ್ತೂರು ಗ್ರಾಮದ ಜಮೀನಿನಲ್ಲಿ ಸಚಿವ ಸಿ.ಪುಟ್ಟರಂಗಶೆಟ್ಟಿ ಬರ ಅಧ್ಯಯನ ನಡೆಸಿದರು. ಶಾಸಕ ಎಂ.ಆರ್.ಮಂಜುನಾಥ್, ಮಾಜಿ ಶಾಸಕ ಆರ್.ನರೇಂದ್ರ, ಜಿಲ್ಲಾಧಿಕಾರಿ ಶ್ರೀರೂಪಾ, ಜಿಪಂ ಸಿಇಒ ಮೋನಾ ರೋತ್ ಇತರರು ಇದ್ದರು.
ಹನೂರು ತಾಲೂಕಿನ ಹುತ್ತೂರು ಗ್ರಾಮದ ಜಮೀನಿನಲ್ಲಿ ಸಚಿವ ಸಿ.ಪುಟ್ಟರಂಗಶೆಟ್ಟಿ ಬರ ಅಧ್ಯಯನ ನಡೆಸಿದರು. ಶಾಸಕ ಎಂ.ಆರ್.ಮಂಜುನಾಥ್, ಮಾಜಿ ಶಾಸಕ ಆರ್.ನರೇಂದ್ರ, ಜಿಲ್ಲಾಧಿಕಾರಿ ಶ್ರೀರೂಪಾ, ಜಿಪಂ ಸಿಇಒ ಮೋನಾ ರೋತ್ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಚಿವ ಸಿ.ಪುಟ್ಟರಂಗಶೆಟ್ಟಿ ಎದುರು ಮಹಿಳೆಯರು, ಗ್ರಾಮಸ್ಥರ ಮನವಿ
  • ಮೂಲಸೌಕರ್ಯ ಕಲ್ಪಿಸದಿರುವುದಕ್ಕೆ ಆಕ್ಷೇಪ
  • ಹನೂರು ತಾಲೂಕಿನ ವಿವಿಧೆಡೆ ಬರ ಅಧ್ಯಯನ

ಹನೂರು:

ಬರ ಅಧ್ಯಯನ ನಡೆಸಲು ತಾಲೂಕಿನ ವಿವಿಧ ಗ್ರಾಮಗಳಿಗೆ ಶುಕ್ರವಾರ ಭೇಟಿ ನೀಡಿದ ಸಚಿವ ಸಿ.ಪುಟ್ಟರಂಗಶೆಟ್ಟಿ ಅವರಿಗೆ ಕುಡಿಯುವ ನೀರಿನ ಸಮಸ್ಯೆಗಳೇ ಎದುರಾಯಿತು. ಅಗತ್ಯ ಮೂಲ ಸೌಕರ್ಯ ಕಲ್ಪಿಸದ ಬಗ್ಗೆ ಆಕ್ಷೇಪ ವ್ಯಕ್ತವಾಯಿತು.

ಶಾಸಕ ಎಂ.ಆರ್.ಮಂಜುನಾಥ್, ಮಾಜಿ ಶಾಸಕ ಆರ್.ನರೇಂದ್ರ, ಜಿಲ್ಲಾಧಿಕಾರಿ ಶ್ರೀರೂಪಾ, ಜಿಪಂ ಸಿಇಒ ಮೋನಾ ರೋತ್ ಹಾಗೂ ಜಿಲ್ಲಾ, ತಾಲೂಕು ಮಟ್ಟದ ಅಧಿಕಾರಿಗಳ ತಂಡದೊಂದಿಗೆ ತಾಲೂಕಿನ ಹೊಸದೊಡ್ಡಿ, ಹುತ್ತೂರು, ಪಿ.ಜಿ.ಪಾಳ್ಯ, ಜೋರೇದೊಡ್ಡಿ, ಉಯಿಲನತ್ತ, ಅಜ್ಜೀಪುರ, ದಾಸನದೊಡ್ಡಿ ಹಾಗೂ ಎಲ್ಲೇಮಾಳ ಗ್ರಾಮಗಳಿಗೆ ಬಂದಾಗ ಜನರಿಂದ ಸಮಸ್ಯೆಗಳ ಮಹಾಪೂರವೇ ಹರಿದುಬಂದಿತು.
ಕಳೆದ ಹಲವು ತಿಂಗಳಿನಿಂದ ಕುಡಿಯುವ ನೀರಿಗಾಗಿ ಪಡಬಾರದ ಕಷ್ಟ ಪಡುತ್ತಿದ್ದೇವೆ. ಕೂಲಿ ಬಿಟ್ಟು ಬಿಂದಿಗೆಯನ್ನು ಹಿಡಿದು ಇತರೆಡೆಗೆ ಅಲೆಯುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಮಕ್ಕಳನ್ನು ಶಾಲಾ, ಕಾಲೇಜಿಗೆ ಕಳಿಸಲು ಸಮಸ್ಯೆಯಾಗಿದೆ. ಹಾಗಾಗಿ ನಿತ್ಯ ಕುಡಿಯುವ ನೀರಿನದ್ದೇ ದೊಡ್ಡ ಸಮಸ್ಯೆಯಾಗಿದೆ. ನಮಗೆ ಮೊದಲು ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸುವಂತೆ ಪ್ರತಿಯೊಂದು ಗ್ರಾಮದಲ್ಲೂ ಮಹಿಳೆಯರು ಬೇಡಿಕೊಂಡರು.
ಜಾನುವಾರುಗಳಿಗೆ ಮೇವಿನ ಸಮಸ್ಯೆಯನ್ನು ಬಗೆಹರಿಸುವಂತೆ ರೈತರು ಒತ್ತಾಯಿಸಿದರು. ಆಯಾ ಗ್ರಾಮಗಳಲ್ಲಿ ಆಗತ್ಯಕ್ಕೆ ತಕ್ಕಂತೆ ಬೋರ್‌ವೆಲ್ ಹಾಗೂ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುವುದು. ಮೇವು ಬ್ಯಾಂಕ್ ತೆರೆಯಲು ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಸಚಿವರು ಭರವಸೆ ನೀಡಿದರು.
ಹೊಸದೊಡ್ಡಿ ಗ್ರಾಮದಲ್ಲಿ ನಿಂಗಶೆಟ್ಟಿ ಮಾತನಾಡಿ, 10 ಎಕರೆಯಲ್ಲಿ ಬೆಳ್ಳುಳ್ಳಿ ಫಸಲು ಬೆಳೆದಿದ್ದೆ. ಆದರೆ ಮಳೆಯಿಲ್ಲದ ಪರಿಣಾಮ ಸಂಪೂರ್ಣ ಹಾಳಾಗಿದೆ ಎಂದು ಅಳಲು ತೋಡಿಕೊಂಡರು.
ಒಣಗಿದ ಬೆಳೆಯ ದರ್ಶನ
ಹುತ್ತೂರು ಗ್ರಾಮದಲ್ಲಿ ಜಡೇಸ್ವಾಮಿ ಜಮೀನಿಗೆ ಭೇಟಿ ನೀಡಿದ ಸಚಿವರು ಒಣಗಿದ ಬೆಳ್ಳುಳ್ಳಿ, ಅರಿಶಿಣ ಫಸಲನ್ನು ವೀಕ್ಷಿಸಿದರು. ನಾಲ್ಕೂವರೆ ಎಕರೆಯಲ್ಲಿ ಬೆಳೆದಿದ್ದ ಫಸಲು ಹಾಳಾಗಿದೆ. ಆದರೆ, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡದ ಪರಿಣಾಮ ಬೆಳೆ ವಿಮೆ ಮಾಡಿಸಲು ಸಾಧ್ಯವಾಗಿಲ್ಲ. ಇದರಿಂದ ಆರ್ಥಿಕ ಸಂಕಷ್ಟವನ್ನು ಎದುರಿಸುವಂತಾಗಿದೆ ಎಂದು ಜಡೇಸ್ವಾಮಿ ಬೇಸರ ತೋಡಿಕೊಂಡರು.
ಬೆಳೆ ವಿಮೆ ಬಗ್ಗೆ ಮಾಹಿತಿ ಪಡೆದ ಸಚಿವರು, ರೈತರಿಗೆ ಮಾಹಿತಿ ತಿಳಿಸದೇ ನಿರ್ಲಕ್ಷ್ಯ ವಹಿಸಿರುವ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಅಗತ್ಯ ಕ್ರಮವಹಿಸಿ ರೈತರಿಗೆ ಅನುಕೂಲ ಕಲ್ಪಿಸುವಂತೆ ತಿಳಿಸಿದರು. ಹಾಗೆಯೇ ರೈತರಿಗೆ ಅಗತ್ಯಕ್ಕೆ ತಕ್ಕಂತೆ ಗೊಬ್ಬರ ವಿತರಿಸುವಂತೆ ಸೂಚಿಸಿದರು.
ಬಳಿಕ ಟ್ಯಾಂಕರ್‌ನಲ್ಲಿ ಮಹಿಳೆಯರು ನೀರು ಹಿಡಿಯುತ್ತಿರುವುದನ್ನು ಕಂಡು ಕಾರಿನಿಂದ ಇಳಿದ ಸಚಿವರಿಗೆ ಟ್ಯಾಂಕರ್ ಮೂಲಕ ಪೂರೈಸುತ್ತಿರುವ ನೀರು ಸಾಲುತ್ತಿಲ್ಲ ಎಂದು ಮಹಿಳೆಯರು ದೂರಿದರು. ಜನಸಂಖ್ಯೆಗೆ ಅನುಗುಣವಾಗಿ ಸಮರ್ಪಕ ನೀರು ಪೂರೈಕೆ ಮಾಡುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.
ಚರಂಡಿ ಹೂಳು ತೆರವುಗೊಳಿಸಿ
ಪಿ.ಜಿ.ಪಾಳ್ಯ ಗ್ರಾಮಕ್ಕೆ ಭೇಟಿ ನೀಡಿದ ಸಚಿವರಿಗೆ ರೈತರು ಹಾಗೂ ಮಹಿಳೆಯರು ವಿವಿಧ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿದರು. ರೈತ ಮಹದೇವಪ್ರಭು ಮಾತನಾಡಿ, ಗ್ರಾಮದಲ್ಲಿ ತಲೆದೋರಿರುವ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಬೇಕು. ದನ ಕರುಗಳಿಗೆ ಮೇವು ಒದಗಿಸಬೇಕು. ಆಸ್ಪತ್ರೆಯಲ್ಲಿ ರಾತ್ರಿ ವೇಳೆ ವೈದ್ಯರನ್ನು ನಿಯೋಜಿಸಬೇಕು. ಲೊಕ್ಕನಹಳ್ಳಿ ಹೋಬಳಿಗೆ ತುರ್ತು ವಾಹನ ಸೌಕರ್ಯ, ಪಶು ಆಸ್ಪತ್ರೆ, ಗ್ರಂಥಾಲಯ ನಿರ್ಮಿಸಿ ಕೊಡಬೇಕು. ಕಾಡು ಪ್ರಾಣಿಗಳ ಹಾವಳಿ ತಡೆಗಟ್ಟಬೇಕು. ಬೆಳೆ ನಷ್ಟಕ್ಕೆ ಇಲಾಖೆಯಿಂದ ಸೂಕ್ತ ಪರಿಹಾರ ದೊರಕಿಸಿಕೊಡಬೇಕು ಎಂದು ಒತ್ತಾಯಿಸಿದರು.
4ನೇ ವಾರ್ಡ್‌ನ ಮಹಿಳೆಯರು ಮಾತನಾಡಿ, ಕುಡಿಯುವ ನೀರಿಗಾಗಿ ಕಷ್ಟ ಪಡುತ್ತಿದ್ದೇವೆ. ಕಳೆದ ಒಂದು ವರ್ಷದಿಂದ ಚರಂಡಿಯಲ್ಲಿ ಹೂಳು ತೆಗೆಸದ ಪರಿಣಾಮ ರೋಗ ಹರಡುವ ಭೀತಿ ಆವರಿಸಿದೆ. ಆದ್ದರಿಂದ ಈ ಬಗ್ಗೆ ಗಮನಹರಿಸುವಂತೆ ಮನವಿ ಮಾಡಿದರು. ಈ ಸಂಬಂಧ ಸಚಿವರು ತಾಲೂಕು ಪಂಚಾಯಿತಿ ಅಧಿಕಾರಿ ಉಮೇಶ್ ಅವರನ್ನು ತರಾಟೆಗೆ ತೆಗೆದುಕೊಂಡು ಕೂಡಲೇ ಚರಂಡಿ ಹೂಳು ತೆರವುಗೊಳಿಸಬೇಕು. ಇಲ್ಲವಾದಲ್ಲಿ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.
ಸ್ಮಶಾನ ಮಂಜೂರಿಗೆ ಸೂಚನೆ
ಗ್ರಾಮಕ್ಕೆ 2020ರಲ್ಲಿ ಮಂಜೂರಾಗಿರುವ ಸ್ಮಶಾನ ಜಾಗವು ಗುಡ್ಡದ ಮೇಲಿದೆ. ಇದರಿಂದ ಅಂತ್ಯ ಸಂಸ್ಕಾರ ನಡೆಸಲು ಅನನುಕೂಲವಾಗಿದೆ. ಇದರಿಂದ ಹಲವು ವರ್ಷಗಳಿಂದ ತೊಂದರೆ ಅನುಭವಿಸುತ್ತಿದ್ದೇವೆ. ಆದ್ದರಿಂದ ಅನುಕೂಲವಾಗಿರುವ ಸ್ಥಳದಲ್ಲಿ ಸ್ಮಶಾನ ಮಂಜೂರು ಮಾಡಿಕೊಡುವಂತೆ ಗ್ರಾಮಸ್ಥರು ಒತ್ತಾಯಿಸಿದರು. ಮಾಹಿತಿ ಪಡೆದ ಸಚಿವರು ಕೂಡಲೇ ಈ ಬಗ್ಗೆ ಅಗತ್ಯ ಕ್ರಮವಹಿಸಿ ಒಂದು ಎಕರೆ ಜಾಗವನ್ನು ಮಂಜೂರು ಮಾಡುವಂತೆ ಜಿಲ್ಲಾಧಿಕಾರಿಗೆ ಸೂಚನೆ ನೀಡಿದರು.
ಜೋರೇದೊಡ್ಡಿ ಗ್ರಾಮದಲ್ಲಿ ಗ್ರಾಮಸ್ಥರು ಮಾತನಾಡಿ, ಕಳೆದ ಒಂದು ತಿಂಗಳಿನಿಂದಲೂ ಕುಡಿಯುವ ನೀರಿನ ಸಮಸ್ಯೆ ಅನುಭವಿಸುತ್ತಿದ್ದೇವೆ. ಸಮಸ್ಯೆ ಬಗೆಹರಿಸುವಂತೆ ಪಂಚಾಯಿತಿ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಹೇಳಿದರು. ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡುವಂತೆ ಪಿಡಿಒಗೆ ಸಚಿವರು ಸೂಚಿಸಿದರು.
ಚುನಾವಣೆ ಬಹಿಷ್ಕಾರದ ಎಚ್ಚರಿಕೆ
ಉಯಿಲನತ್ತ ಗ್ರಾಮಕ್ಕೆ ಆಗಮಿಸಿದಾಗ ಮಹಿಳೆಯರು ರಸ್ತೆ, ಕುಡಿಯುವ ನೀರು ಸೇರಿದಂತೆ ಇನ್ನಿತರ ಅಗತ್ಯ ಮೂಲ ಸೌಕರ್ಯದಿಂದ ವಂಚಿತರಾಗಿ ಜೀವನ ನಡೆಸುತ್ತಿದ್ದೇವೆ. ಹಾಗಾಗಿ ಸೌಕರ್ಯ ದೊರಕಿಸಿ ಕೊಡುವಂತೆ ಒತ್ತಾಯಿಸಿದರು. ಸಚಿವರು ಕ್ರಮ ಕೈಗೊಳ್ಳುವ ಭರವಸೆ ನೀಡಿ ಹೊರಡುತ್ತಿದ್ದಂತೆ ಸುಮ್ಮನೆ ಬರ್ತಾರೆ, ಹೋಗ್ತಾರೆ ಜನರ ಕಷ್ಟ ಕೇಳೋದಿಲ್ಲ. ಹಾಗಾಗಿ ಈ ಬಾರಿ ಚುನಾವಣೆ ಬಹಿಷ್ಕರಿಸುತ್ತೇವೆಂದು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು.
ಇನ್ನು ಅಜ್ಜೀಪುರದಲ್ಲಿ ಅರ್ಹ ಬಡ ಕುಟುಂಬದ ಕೆಲವರಿಗೆ ಬಿಪಿಎಲ್ ಕಾರ್ಡ್ ರದ್ದಾಗಿದೆ. ಕೆಲವರಿಗೆ ವೃದ್ದಾಪ್ಯ ಪಿಂಚಣಿ ಸ್ಥಗಿತವಾಗಿದೆ. ದನ, ಕರುಗಳಿಗೆ ಮೇವಿನ ಸಮಸ್ಯೆ ತೀವ್ರವಾಗಿದೆ ಎಂದು ಗ್ರಾಮಸ್ಥರು ದೂರಿದರು. ದೊಮ್ಮನಗದ್ದೆ ಗ್ರಾಮದಲ್ಲಿ ಟ್ಯಾಂಕರ್ ಮೂಲಕ ಪೂರೈಕೆಯಾಗುತ್ತಿರುವ ನೀರು ಸಾಲುತ್ತಿಲ್ಲ. ಸಮರ್ಪಕವಾಗಿ ನೀರು ಕೊಡಿ. ಸ್ಮಶಾನಕ್ಕೆ ಜಾಗ ಮಂಜೂರು ಮಾಡಿಕೊಡುವಂತೆ ಗ್ರಾಮಸ್ಥರು ಮನವಿ ಮಾಡಿದರು. ಎಲ್ಲೇಮಾಳದಲ್ಲೂ ಎಲ್ಲ ಗ್ರಾಮದ ಜನರ ಸಮಸ್ಯೆಯ ಸ್ಥಿತಿಯೇ ಜನರಿಂದ ಕೇಳಿ ಬಂತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net