13ರಂದು ಡಾ.ಶಿವರಾತ್ರಿ ರಾಜೇಂದ್ರ ಸ್ವಾಮೀಜಿ 110ನೇ ಜಯಂತಿ

ಹನೂರಿನಲ್ಲಿ ಡಾ. ಶಿವರಾತ್ರಿ ರಾಜೇಂದ್ರ ಶ್ರೀಗಳ ಜಯಂತಿ ಆಚರಣೆ ಸಂಬಂಧ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಶಾಸಕ ಎಂಆರ್ ಮಂಜುನಾಥ್ ಮಾತನಾಡಿದರು.
ಹನೂರಿನಲ್ಲಿ ಡಾ. ಶಿವರಾತ್ರಿ ರಾಜೇಂದ್ರ ಶ್ರೀಗಳ ಜಯಂತಿ ಆಚರಣೆ ಸಂಬಂಧ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಶಾಸಕ ಎಂಆರ್ ಮಂಜುನಾಥ್ ಮಾತನಾಡಿದರು.
Published on

ಶಾಸಕ ಎಂ.ಆರ್.ಮಂಜುನಾಥ್ ಮಾಹಿತಿ

ಹನೂರು: ಪಟ್ಟಣದಲ್ಲಿ ಡಿ.13ರಂದು ನಡೆಯುವ ಡಾ.ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರ 110ನೇ ಜಯಂತಿ ಕಾರ್ಯಕ್ರಮಕ್ಕೆ ಕ್ಷೇತ್ರದ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವುದರ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಶಾಸಕ ಮಂಜುನಾಥ್ ಮನವಿ ಮಾಡಿದರು.
ಹನೂರು ಭಾಗಕ್ಕೆ ರಾಜೇಂದ್ರ ಶ್ರೀಗಳ ಕೊಡುಗೆ ಅಪಾರವಾಗಿದ್ದು, ಅಂದಿನ ಕಾಲಘಟ್ಟದಲ್ಲಿ ಇಲ್ಲಿನ ಶಿಕ್ಷಣ ವ್ಯವಸ್ಥೆಯ ಅಗತ್ಯತೆಯನ್ನು ತಿಳಿದು ಶಾಲೆಗಳನ್ನು ತೆರೆದು ಬಡ ಮಕ್ಕಳ ಶಿಕ್ಷಣಕ್ಕೆ ಆಶಾಕಿರಣವಾಗಿದ್ದಾರೆ. ಇವರ ದೂರದೃಷ್ಟಿ ಹಾಗೂ ಚಿಂತನೆ ಈ ಭಾಗದ ಸಾವಿರಾರು ವಿದ್ಯಾರ್ಥಿಗಳು ಭವಿಷ್ಯದಲ್ಲಿ ಉತ್ತಮ ಜೀವನವನ್ನು ರೂಪಿಸಿಕೊಂಡಿದ್ದಾರೆ. ಇವರು ಸ್ಥಾಪಿಸಿದ ಶಿಕ್ಷಣ ಸಂಸ್ಥೆಗಳು ಇಂದಿಗೂ ದೊಡ್ಡ ಮಟ್ಟದಲ್ಲಿ ಸೇವೆ ನೀಡುತ್ತಿರುವುದು ಶ್ಲಾಘನೀಯ. ಹಾಗಾಗಿ ಶ್ರೀಗಳ ಜಯಂತಿ ಆಚರಿಸುವ ಭಾಗ್ಯ ಈ ಬಾರಿ ಹನೂರು ತಾಲೂಕಿಗೆ ದೊರಕಿರುವುದು ನಮ್ಮ ಪುಣ್ಯ. ಆದ್ದರಿಂದ ಎಲ್ಲರೂ ಒಟ್ಟುಗೂಡಿ ಅರ್ಥಪೂರ್ಣವಾಗಿ ಜಯಂತಿ ಕಾರ್ಯಕ್ರಮವನ್ನು ಆಚರಿಸಬೇಕಿದೆ. ಈಗಾಗಲೇ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಶ್ರೀಗಳ ಭಾವಚಿತ್ರ ಮೆರವಣಿಗೆ, ವೇದಿಕೆ ಕಾರ್ಯಕ್ರಮ, ಆರೋಗ್ಯ ತಪಾಸಣೆ ಹಾಗೂ ಹನೂರು ತಾಲೂಕು ರೈತ ಸಂಘದಿಂದ ರಕ್ತದಾನ ಶಿಬಿರ ನಡೆಯಲಿದೆ.
ಕಾರ್ಯಕ್ರಮದಲ್ಲಿ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ವಾಟಾಳು ಸೂರ್ಯ ಸಿಂಹಾಸನ ಮಠದ ಶ್ರೀ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ಸಾಲೂರು ಬೃಹನ್ಮಠದ ಪೀಠಾಧಿಪತಿ ಡಾ.ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ, ಹೊಸದುರ್ಗ ಭಗೀರಥ ಪೀಠದ ಶ್ರೀ ಪುರುಷೋತ್ತಮಾನಂದಪುರಿ ಸ್ವಾಮೀಜಿ, ಕನಕಪುರ ದೇಗುಲ ಮಠದ ಶ್ರೀ ಚನ್ನಬಸವ ಸ್ವಾಮೀಜಿ, ಕನಕಪುರ ಮರಳೆಗವಿ ಮಠದ ಶ್ರೀ ಮುಮ್ಮಡಿ ಶಿವರುದ್ರ ಸ್ವಾಮೀಜಿ, ಬೆಂಗಳೂರು ಆದಿ ಚುಂಚನಗಿರಿ ಶಾಖಾ ಮಠದ ಶ್ರೀ ಸೋಮನಾಥ ಸ್ವಾಮೀಜಿ, ಮೈಸೂರು ಕುದೇರು ಮಠದ ಶ್ರೀ ಗುರುಶಾಂತ ಸ್ವಾಮೀಜಿ ಅವರ ದಿವ್ಯ ಸಮ್ಮುಖದಲ್ಲಿ ನಡೆಯಲಿದೆ. ಉದ್ಘಾಟನೆಯನ್ನು ಸಚಿವ ಕೆ.ವೆಂಕಟೇಶ್ ನೆರವೇರಿಸಲಿದ್ದಾರೆ. ಸಂಸದರು, ಜಿಲ್ಲೆಯ ಶಾಸಕರು, ಮಾಜಿ ಶಾಸಕರು ಹಾಗೂ ಇನ್ನಿತರ ಗಣ್ಯರು ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಚಾಮುಲ್ ಮಾಜಿ ಅಧ್ಯಕ್ಷ ಗುರುಮಲ್ಲಪ್ಪ, ನಿರ್ದೇಶಕ ಉದ್ದನೂರು ಪ್ರಸಾದ್, ಮಾಜಿ ಜಿಪಂ ಸದಸ್ಯ ನಾಗೇಂದ್ರಬಾಬು, ವೀರಶೈವ ಮಹಾಸಭಾ ಜಿಲ್ಲಾ ಕಾರ್ಯದರ್ಶಿ ಮುರುಡೇಶ್ವರಸ್ವಾಮಿ, ಜಿಲ್ಲಾ ನಿರ್ದೇಶಕ ಬಸವರಾಜಪ್ಪ, ತಾಲೂಕು ಅಧ್ಯಕ್ಷ ಒಡೆಯರಪಾಳ್ಯ ಸೋಮಶೇಖರ್, ಪ್ರಧಾನ ಕಾರ್ಯದರ್ಶಿ ಮಂಗಲ ಕುಮಾರ್, ನಿರ್ದೇಶಕ ವಿನೋದ್, ಯುವ ಘಟಕದ ನಿರ್ದೇಶಕ ಲೋಕೇಶ್, ಪಿಎಸಿಸಿ ನಿರ್ದೇಶಕ ಮಂಜೇಶ್, ಪಪಂ ಮಾಜಿ ಸದಸ್ಯ ರಾಜಶೇಖರ ಮೂರ್ತಿ ಹಾಗೂ ಇನ್ನಿತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net