‘ಮೇಲ್ಸೇತುವೆ’ ಬದುಕಿನ ವೇಗ ಕಸಿಯದಿರಲಿ

ಚಾಮರಾಜನಗರ ತಾಲೂಕಿನ ಪಣ್ಯದಹುಂಡಿ ಮುಖ್ಯರಸ್ತೆಯಲ್ಲಿ ರೈಲ್ವೆ ಮೇಲ್ಸೇತುವೆ ನಿರ್ಮಾಣವಾಗಲಿರುವ ಸ್ಥಳ
ಚಾಮರಾಜನಗರ ತಾಲೂಕಿನ ಪಣ್ಯದಹುಂಡಿ ಮುಖ್ಯರಸ್ತೆಯಲ್ಲಿ ರೈಲ್ವೆ ಮೇಲ್ಸೇತುವೆ ನಿರ್ಮಾಣವಾಗಲಿರುವ ಸ್ಥಳ
Published on

ಪ್ರಮುಖ ಮುಖ್ಯಾಂಶಗಳು

  • ಪಣ್ಯದಹುಂಡಿ ರೈಲ್ವೆ ಹಳಿ ಬಳಿ ಸೇತುವೆ ನಿರ್ಮಾಣ
  • ಅಂಡರ್‌ಪಾಸ್, ಬಸ್ ನಿಲ್ದಾಣ, ಭೂಮಿದರಕ್ಕಾಗಿ ಸ್ಥಳೀಯರ ಆಗ್ರಹ
ಚಾಮರಾಜನಗರ: ಭೌತಿಕ ಅಭಿವೃದ್ಧಿಗಾಗಿ ನಡೆಸುವ ಕಾಮಗಾರಿಗಳು ಸಾರ್ವಜನಿಕರ ಜೀವನದ ಮಟ್ಟವನ್ನು ಹೆಚ್ಚಿಸುವ ಉದ್ದೇಶವನ್ನು ಹೊಂದಿವೆ. ಆದರಿಲ್ಲಿ ಸ್ಥಳೀಯರ ಅವಶ್ಯಕತೆಗೆ ಅನುಗುಣವಾಗಿ ನೀಲನಕ್ಷೆ ತಯಾರಾಗದ ಮೇಲ್ಸೇತುವೆ ಗ್ರಾಮಸ್ಥರ ಬದುಕಿನ ವೇಗ ಕಸಿಯುವ ಆತಂಕ ಮೂಡಿಸಿದೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ತಾಲೂಕಿನ ಪಣ್ಯದಹುಂಡಿ ಗ್ರಾಮದಲ್ಲಿ ರೈಲು ಹಾದುಹೋಗುವ ರಸ್ತೆ ಮೇಲೆ ಬದನಗುಪ್ಪೆಯಿಂದ ಮುತ್ತಿಗೆವರೆಗೆ ಮೇಲ್ಸೇತುವೆ ನಿಮಾಣ ಮಾಡಬೇಕೆಂದು ಉದ್ದೇಶಿಸಲಾಗಿದೆ. ಈ ಕಾಮಗಾರಿಯ ಡಿಪಿಆರ್‌ನಲ್ಲಿ ಸುತ್ತಮುತ್ತಲಿನ ಹಳ್ಳಿಗಳ ಜನರಿಗೆ ಅನುಕೂಲಕ್ಕಿಂತ ಅನಾನುಕೂಲಗಳೇ ಹೆಚ್ಚಾಗಿವೆ. ಇದು ಗ್ರಾಮಸ್ಥರ ದೈನಂದಿನ ಜೀವನದ ಮೇಲೆ ಪರಿಣಾಮ ಬೀರುತ್ತದೆ ಎಂಬ ಅಸಮಾಧಾನ ವ್ಯಕ್ತವಾಗುತ್ತಲೇ ಇದೆ.
ಅನೇಕ ಹಳ್ಳಿಗಳಿಂದ ಮೈಸೂರು, ಚಾಮರಾಜನಗರಕ್ಕೆ ಹೋಗಲು ಬರುವ ಜನರು, ಕೃಷಿ ಜಮೀನುಗಳು, ಪಶು ಆಸ್ಪತ್ರೆಗೆ ಹೋಗುವ ರೈತರಿಗೆ, ಶಾಲಾ-ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ಪಣ್ಯದಹುಂಡಿ ಸರ್ಕಲ್ ಕೇಂದ್ರ ಬಿಂದುವಾಗಿದೆ. ಈ ನಿಟ್ಟಿನಲ್ಲಿ ಇಲ್ಲಿ ಅಂಡರ್‌ಪಾಸ್, ಬಸ್ ನಿಲ್ದಾಣ ನಿರ್ಮಾಣವಾಗಬೇಕು. ಡಿಪಿಆರ್ ಬದಲಾವಣೆ ಮಾಡಬೇಕು. ಸೇತುವೆಗಾಗಿ ಸ್ವಾಧೀನವಾಗಿರುವ ಭೂಮಿಯ ದರದಲ್ಲಿ ಒಬ್ಬರಿಗೊಂದು ರೀತಿಯ ವ್ಯತ್ಯಾಸವಿದ್ದು, ಇದನ್ನು ಸರಿಪಡಿಸಬೇಕೆಂದು ಒತ್ತಾಯಿಸಿ ಹೊನ್ನೂರು ಬಸವಣ್ಣ ಅವರ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಗ್ರಾಮಸ್ಥರು ಈಗಾಗಲೇ ಪ್ರತಿಭಟನೆಯನ್ನೂ ಮಾಡಲಾಗಿತ್ತು. ಇದಾದ ನಂತರ ಅಧಿಕಾರಿಗಳಿಂದ ಡಿಪಿಆರ್ ಬದಲಾವಣೆಗೆ ಕ್ರಮವಹಿಸುವ ಭರವಸೆ ಈಡೇರಿಲ್ಲವೆಂದು ಗ್ರಾಮಸ್ಥರು ದೂರುತ್ತಿದ್ದಾರೆ.
ಈ ಸಂಬಂಧ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಇಇ ರೇಣುಕಾ ವಿಜಯವಾಣಿಯೊಂದಿಗೆ ಮಾತನಾಡಿ, ಭೂಮಿಗೆ ನೀಡಿರುವ ದರದ ವ್ಯತ್ಯಾಸದ ವಿಚಾರ ಜಿಲ್ಲಾಧಿಕಾರಿ ನ್ಯಾಯಾಲಯದ ಮೆಟ್ಟಿಲು ಹತ್ತಿದೆ. ಡಿಪಿಆರ್ ತಾಂತ್ರಿಕ ವಿಚಾರವಾಗಿದ್ದು, ಇದನ್ನು ಬದಲಾವಣೆ ಮಾಡಲು ಆಗಲ್ಲ. ರೈಲ್ವೆ ಇಲಾಖೆಯವರು ಅಂಡರ್‌ಪಾಸ್ ನಿರ್ಮಾಣ ಮಾಡುತ್ತಾರೆ. ಬಸ್ ನಿಲ್ದಾಣ ಮಾಡಬೇಕೆಂದು ಗ್ರಾಮಸ್ಥರು ಕೇಳಿದ್ದರು. ಇದನ್ನು ಮೇಲ್ಸೇತುವೆ ಕಾಮಗಾರಿ ಮುಗಿದ ಮೇಲೆ ನಾವು ಮಾಡಿಕೊಡುತ್ತೇವೆ ಎಂದು ಹೇಳುತ್ತಿದ್ದಾರೆ. ಈ ಕುರಿತು ಗ್ರಾಮಸ್ಥರು ಒಕ್ಕೊರಲಿನಿಂದ ಸೂಕ್ತ ಸೌಲಭ್ಯವನ್ನು ನೀಡಲೇಬೇಕೆಂದು ಒತ್ತಾಯಿಸುತ್ತಿದ್ದಾರೆ. ಈ ಕುರಿತು ಲೌಡ್ ಸ್ಪೀಕರ್‌ನಲ್ಲಿ ಅಭಿಪ್ರಾಯ ಸಂಗ್ರಹಿಸಲಾಗಿದೆ.
*ಡಿಸಿಗೆ ಮಾಹಿತಿ ನೀಡದ ಅಧಿಕಾರಿಗಳು
ಕಳೆದ 15 ದಿನಗಳ ಹಿಂದೆ ಜಿಲ್ಲಾಧಿಕಾರಿ ಶ್ರೀರೂಪಾ ಅವರನ್ನು ಭೇಟಿ ಮಾಡಿದೆವು. ಅವರ ಬಳಿ ಎನ್‌ಎಚ್ ಅಧಿಕಾರಿಗಳು ಭೂಮಿಯ ದರದ ಬಗ್ಗೆ ಮಾತ್ರ ತಿಳಿಸಿದ್ದಾರೆ. ಡಿಪಿಆರ್ ಪ್ರಕಾರ ಮೇಲ್ಸೇತುವೆ ನಿರ್ಮಾಣ ಮಾಡುವುದರಿಂದ ಗ್ರಾಮಸ್ಥರಿಗೆ ಆಗುವ ಅನಾನುಕೂಲದ ಬಗ್ಗೆ ಮಾಹಿತಿಯನ್ನೇ ನೀಡಿಲ್ಲ. ನಾವು ಡಿಸಿ ಅವರಿಗೆ ವಿವರಿಸಿದ ಬಳಿಕ ಗ್ರಾಮಸ್ಥರಿಗೆ ಅನುಕೂಲ ಆಗುವ ರೀತಿಯಲ್ಲಿ ಸೇತುವೆ ನಿರ್ಮಾಣವಾಗಲಿದೆ ಎಂದು ಹೇಳಿದರು. ಆದರೆ ಈ ಸಂಬಂಧ ಇನ್ನೂ ಕೂಡ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯಾವ ಅಧಿಕಾರಿಗಳೂ ಸಹ ಬಂದು ಗ್ರಾಮಸ್ಥರನ್ನು ಸಂಪರ್ಕ ಮಾಡಿಲ್ಲ.
ವಿಜಯ್‌ಕುಮಾರ್ ಹೆಗ್ಗೋಠಾರ, ರೈತ ಮುಖಂಡ, ಚಾಮರಾಜನಗರ
*ಅಂಡರ್‌ಪಾಸ್ ಬೇಕೇಬೇಕು
ಕಲ್ಪುರ ಗ್ರಾಮದಿಂದ ಚಾಮರಾಜನಗರ, ಮೈಸೂರಿಗೆ ಹೋಗಲು ಪಣ್ಯದಹುಂಡಿ ಸರ್ಕಲ್‌ಗೆ ಬರಬೇಕು. ಬದನಗುಪ್ಪೆ ಮತ್ತು ಮುತ್ತಿಗೆವರೆಗೆ ಮೇಲ್ಸೇತುವೆ ನಿರ್ಮಾಣವಾಗಿ ಪಣ್ಯದಹುಂಡಿಯಲ್ಲಿ ಅಂಡರ್‌ಪಾಸ್ ಇಲ್ಲದೆ ಹೋದರೆ ಬಳಸಿಕೊಂಡು ಓಡಾಡಬೇಕಾಗುತ್ತದೆ. ತುರ್ತು ಸಂದರ್ಭದಲ್ಲಿ ಆಸ್ಪತ್ರೆಗೆ ರೋಗಿಗಳನ್ನು ಕರೆದುಕೊಂಡು ಹೋಗುವುದಕ್ಕೆ ತೊಂದರೆಯಾಗುತ್ತದೆ.
ಮಹೇಶ್, ಕಲ್ಪುರ, ಚಾಮರಾಜನಗರ
*ಭೂ ಸ್ವಾಧೀನ ದರದಲ್ಲಿ ವ್ಯತ್ಯಾಸ
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಪಣ್ಯದಹುಂಡಿ ರೈಲ್ವೆ ಹಳಿಯ ಮೇಲೆ ಸೇತುವೆ ನಿರ್ಮಾಣ ಮಾಡಲು ಭೂ ಸ್ವಾಧೀನ ಮಾಡಿಕೊಳ್ಳಲಾಗಿದೆ. ಬದನಗುಪ್ಪೆಯಿಂದ ಮುತ್ತಿಗೆವರೆಗಿನ ಭೂಮಿ ಖರೀದಿಯ ದರದಲ್ಲಿ ತುಂಬಾ ವ್ಯತ್ಯಾಸವಿದೆ. ಇಲ್ಲೆಲ್ಲ ಸಣ್ಣ ಪ್ರಮಾಣದ ಭೂಮಿಯನ್ನು ಹೊಂದಿರುವ ರೈತರಿದ್ದಾರೆ. ಇವರೆಲ್ಲ ಮೇಲ್ಸೇತುವೆ ನಿರ್ಮಾಣಕ್ಕಾಗಿ ಭೂಮಿ ಕಳೆದುಕೊಳ್ಳುತ್ತಾರೆ. ಇದರಿಂದ ಸಿಗುವ ಹಣದಲ್ಲಿ ಬೇರೆ ಕಡೆ ಎಲ್ಲಾದರೂ ಭೂಮಿ ಖರೀದಿ ಮಾಡಿಕೊಳ್ಳಬೇಕು. ಪ್ರಸ್ತುತ ಭೂಮಿಯ ದರ ಏರಿಕೆಯಾಗಿದೆ. ಮೇಲ್ಸೇತುವೆಗೆ ಭೂಮಿ ಕೊಟ್ಟ ರೈತರಿಗೆ ಕಡಿಮೆ ದರ ನೀಡಿದರೆ ಅವರೆಲ್ಲ ಭೂರಹಿತರಾಗಬೇಕಾ?
ಬಿ.ಪಿ.ಮಹದೇವಸ್ವಾಮಿ, ಬದನಗುಪ್ಪೆ, ಚಾಮರಾಜನಗರ
*ಸುತ್ತಿ, ಸುಸ್ತಾಗಿ ಹೋಗ್ಬೇಕು
ಪಣ್ಯದಹುಂಡಿ ಮೇಲ್ಸೇತುವೆ ಕೆಳಗಿನ ರಸ್ತೆಯಲ್ಲಿ ಅಂಡರ್‌ಪಾಸ್ ನಿರ್ಮಾಣ ಮಾಡಿಕೊಡದಿದ್ದರೆ ಕೃಷಿ ಜಮೀನಿಗೆ ಹೋಗಲು ಸುತ್ತಿ, ಸುಸ್ತಾಗಬೇಕಾಗುತ್ತದೆ. ಮುಖ್ಯರಸ್ತೆಯ ಒಂದು ಕಡೆಯಲ್ಲಿ ಮತ್ತೊಂದು ಕಡೆ ಇರುವ ಜಮೀನಿಗೆ ಹಸುಗಳನ್ನು ಕರೆದುಕೊಂಡು ಹೋಗುತ್ತವೆ. ಅಂಡರ್‌ಪಾಸ್ ಇಲ್ಲದಿದ್ದರೆ ಬದನಗುಪ್ಪೆಗೋ ಅಥವಾ ಮುತ್ತಿಗೆಗೋ ಹೋಗಿ ಬರಬೇಕು. ನಮ್ಮೂರಿನಲ್ಲಿ ನಮಗೆ ಸುಗಮವಾಗಿ ಓಡಾಡುವ ತೊಂದರೆ ಕೊಡುವುದು ಸರಿಯಲ್ಲ.
ಸುಂದ್ರಮ್ಮ, ಪಣ್ಯದಹುಂಡಿ, ಚಾಮರಾಜನಗರ
*ಮನವಿ ಕೊಟ್ಟರೂ ಸ್ಪಂದಿಸಿಲ್ಲ
ಮೇಲ್ಸೇತುವೆಗೆ ಭೂ ಸ್ವಾಧೀನ ಮಾಡಿಕೊಂಡಿರುವುದಕ್ಕೆ ದರ ತಾರತಮ್ಯ ಮಾಡಲಾಗಿದೆ. ರೈತರನ್ನು ಕರೆದು ಮಾತನಾಡಿ ದರ ನಿಗದಿ ಮಾಡಿಲ್ಲ, ಇದರ ಬಗ್ಗೆ ಭೂ ಮಾಲೀಕರಿಗೆ ಸೂಕ್ತ ಮಾಹಿತಿಯೂ ಇಲ್ಲ. ಸೇತುವೆ ನಿರ್ಮಾಣದಂತಾ ಅಭಿವೃದ್ಧಿ ಕಾಮಗಾರಿ ನಡೆಯಲಿ. ಆದರೆ ಡಿಪಿಆರ್ ತಯಾರು ಮಾಡುವಾಗ ಹಳ್ಳಿಗಳ ಜನರಿಗೆ ತೊಂದರೆ ಆಗದಂತೆ ಕ್ರಮವಹಿಸಬೇಕಿತ್ತು. ಇದ್ಯಾವುದಕ್ಕೂ ಮಾಡಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಮತ್ತು ಜಿಲ್ಲಾಮಟ್ಟದ ಅಧಿಕಾರಿಗಲಿಗೆ ಮನವಿ ಸಲ್ಲಿಸಿದರೂ ಸ್ಪಂದಿಸುವ ಕಾರ್ಯ ಮಾಡುತ್ತಿಲ್ಲ.
ಕುಮಾರ್ ಮೇಲಾಜಿಪುರ , ರೈತ ಮುಖಂಡ, ಚಾಮರಾಜನಗರ
*ಕಾನೂನು ಹೋರಾಟಕ್ಕೂ ಸಿದ್ಧ
ಮೇಲ್ಸೇತುವೆ ನಿರ್ಮಾಣದಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರಿಗೆ ತೊಂದರೆಯಾಗುತ್ತಿರುವುದನ್ನು ವಿರೋಧಿಸಿ ಅನಿರ್ದಿಷ್ಟಾವಧಿ ಧರಣಿ ಮಾಡಲಾಗಿತ್ತು. ಅಧಿಕಾರಿಗಳು ಇದಕ್ಕೂ ಸ್ಪಂದಿಸದೆ ಮುಂದುವರೆದರೆ ಹಳ್ಳಿ ಹಳ್ಳಿಗಳಲ್ಲಿ ಚಂದ ಎತ್ತಿ, ನ್ಯಾಯಾಲಯಕ್ಕೆ ಹೋಗುವುದಕ್ಕೂ ನಾವು ಸಿದ್ಧರಿದ್ದೇವೆ.
ಶಿವಲಿಂಗೇಗೌಡ, ಪಣ್ಯದಹುಂಡಿ, ಚಾಮರಾಜನಗರ
*ವಿದ್ಯಾರ್ಥಿಗಳು, ರೈತರಿಗೆ ತೊಂದರೆ
ಡಿಪಿಆರ್ ಪ್ರಕಾರ ಮೇಲ್ಸೇತುವೆ ನಿರ್ಮಾಣವಾಗಿ ಅಂಡರ್‌ಪಾಸ್ ಮಾಡದಿದ್ದರೆ ಸುತ್ತಮುತ್ತಲಿನ ಹಳ್ಳಿಗಳಿಂದ ಶಾಲಾ-ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ ತೊಂದರೆಯಾಗಲಿದೆ. ಸರ್ವೀಸ್ ರಸ್ತೆಯಲ್ಲಿ ಬರುವ ಬಸ್‌ಗಳಲ್ಲಿ ಮಾತ್ರ ಪ್ರಯಾಣ ಮಾಡಲು ಸಾಧ್ಯವಾಗುತ್ತದೆ. ಮೈಸೂರಿನ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು ಮೇಲ್ಸೇತುವೆ ಬಳಸಿಕೊಂಡು ಹೋಗಬೇಕಾಗುತ್ತದೆ. ಒಂದು ಕಡೆಯಿಂದ ಮತ್ತೊಂದು ಕಡೆಗೆ ರೈತರು ಓಡಾಡಲೂ ಸಮಸ್ಯೆಯಾಗುತ್ತದೆ.
ಮುರಳಿ, ಪಣ್ಯದಹುಂಡಿ, ಚಾಮರಾಜನಗರ
* ಡಿಪಿಆರ್ ಅವೈಜ್ಞಾನಿಕ
ರೈಲ್ವೆ ಮೇಲ್ಸೇತುವೆಯ ಡಿಪಿಆರ್ ಅವೈಜ್ಞಾನಿಕವಾಗಿ ಕೂಡಿದೆ. ಈ ಸಂಬಂಧ ಅಧಿಕಾರಿಗಳಿಗೆ ಎಷ್ಟೇ ತಿಳಿಸಿದರೂ ಸರಿಪಡಿಸುತ್ತಿಲ್ಲ. ಗ್ರಾಮಸ್ಥರಿಗೆ ಅನುಕೂಲವಾಗುವ ರೀತಿಯಲ್ಲಿ, ಸ್ಥಳೀಯವಾಗಿ ಮೂಲಸೌಕರ್ಯ ಕಲ್ಪಿಸುವ ರೀತಿಯಲ್ಲಿ ಡಿಪಿಆರ್ ಬದಲಾವಣೆ ಮಾಡಬೇಕು.
ನಟರಾಜು, ಗ್ರಾಪಂ ಮಾಜಿ ಸದಸ್ಯ, ಪಣ್ಯದಹುಂಡಿ, ಚಾಮರಾಜನಗರ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net