ಕೊಳ್ಳೇಗಾಲ ತಾ.ಪಂ.ಸಭಾಂಗಣದಲ್ಲಿ ಬುಧವಾರ ಬರ ಹಾಗೂ ಕುಡಿಯುವ ನೀರು ನಿರ್ವಹಣೆಯ ತಾಲೂಕು ಮಟ್ಟದ ಟಾಸ್ಕ್ ಫೋರ್ಸ್ ಸಭೆ ಶಾಸಕ ಎ.ಆರ್.ಕೃಷ್ಣಮೂರ್ತಿ ಅಧ್ಯಕ್ಷತೆಯಲ್ಲಿ ನಡೆಯಿತು. ಐ.ಇ.ಬಸವರಾಜು, ಚಂದ್ರು ರಾಜೇಂದ್ರ, ಕುಮಾರ್ ಇದ್ದರು.
ತಾಲೂಕಿನಲ್ಲಿ ಜನರಿಗೆ ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೇವಿಗೆ ತೊಂದರೆ ಆಗದಂತೆ ಅಧಿಕಾರಿಗಳು ಕಾರ್ಯ ನಿರ್ವಹಿಸಬೇಕೆಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಹೇಳಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಬರ ಹಾಗೂ ಕುಡಿಯುವ ನೀರು ನಿರ್ವಹಣೆ ಕುರಿತಂತೆ ಆಯೋಜಿಸಿದ್ದ ತಾಲೂಕು ಮಟ್ಟದ ಟಾಸ್ಕ್‌ಫೋರ್ಸ್ ಸಭೆಯಲ್ಲಿ ಕೊಳ್ಳೇಗಾಲ ತಾಲೂಕಿನಲ್ಲಿರುವ 16 ಗ್ರಾಮ ಪಂಚಾಯಿತಿಗಳಲ್ಲಿ ನೀರಿನ ಲಭ್ಯತೆ ಬಗ್ಗೆ ಪಿಡಿಒಗಳು ಹಾಗೂ ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳಿಂದ ಮಾಹಿತಿ ಪಡೆದು ಮಾತನಾಡಿದರು.
ಗ್ರಾಮ ಪಂಚಾಯಿತಿಗಳಿಗೆ ನಿಯೋಜನೆಗೊಂಡಿರುವ ಆಡಳಿತಾಧಿಕಾರಿಗಳು ವಾರಕ್ಕೆ ಮೂರುದಿನ ಕಡ್ಡಾಯವಾಗಿ ಪಂಚಾಯಿತಿಗಳಿಗೆ ಭೇಟಿ ನೀಡಬೇಕು. ಹಾಜರಾತಿ ಪುಸ್ತಕದಲ್ಲಿ ಕೇವಲ ಸಹಿ ಹಾಕಿ ಬರಕೂಡದು. ಭೇಟಿ ವೇಳೆ ಯಾವೆಲ್ಲ ಸಾರ್ವಜನಿಕ ಕಾರ್ಯಗಳನ್ನು ಮಾಡಿದ್ದೀರಿ ಎಂಬ ಬಗ್ಗೆ ರೆಕಾರ್ಡ್‌ನಲ್ಲಿ ಬರೆದಿಡಬೇಕು ಎಂದು ಸೂಚನೆ ನೀಡಿದರು. ಕೊಳ್ಳೇಗಾಲ ನಗರಸಭೆಯ ವ್ಯಾಪ್ತಿಯಲ್ಲಿ ಸ್ಥಗಿತಗೊಂಡಿರುವ ಆರ್‌ಒ ಪ್ಲಾಂಟ್‌ಗಳ ದುರಸ್ತಿ ಕಾರ್ಯ ಆಗಬೇಕು ಎಂದರು.
ತಹಸೀಲ್ದಾರ್ ಐ.ಇ.ಬಸವರಾಜು ಮಾತನಾಡಿ, ಬರ ನಿರ್ವಹಣೆ ವಿಚಾರದಲ್ಲಿ ಅಗತ್ಯ ಎಚ್ಚರಿಕೆ ವಹಿಸದ ಅಧಿಕಾರಿಗಳಿಂದ ಅವಘಡಗಳು ಸೃಷ್ಟಿಯಾದರೆ ಅಂತಹ ಅಧಿಕಾರಿಗಳೇ ಹೊಣೆಯಾಗುತ್ತೀರಿ, ಹಾಗಾಗಿ ಎಚ್ಚರಿಕೆಯಿಂದ ಕೆಲಸ ಮಾಡಿ ಎಂದು ಸಲಹೆ ನೀಡಿದರು. ಗ್ರಾಮಗಳಲ್ಲಿರುವ ಜಾನುವಾರುಗಳ ಕುಡಿಯುವ ನೀರಿನ ತೊಟ್ಟಿಗಳನ್ನು ಸ್ವಚ್ಛಗೊಳಿಸಿ ನೀರು ತುಂಬಿಸಬೇಕು. ಬೋರ್ ವೆಲ್ ನೀರನ್ನು ಗೃಹ ಬಳಕೆಗೆ ಬಳಸಿಕೊಂಡು ಕಾವೇರಿ ನೀರನ್ನು ಕುಡಿಯಲು ಬಳಸುವಂತೆ ಅರಿವು ಮೂಡಿಸಬೇಕು ಎಂದರು.
ಚರಂಡಿ ಅಸ್ವಚ್ಛತೆಯದ್ದೇ ದೂರು:
ತಾಲೂಕಿನ ವಿವಿಧ ಗ್ರಾಮಗಳಲ್ಲಿ ಚರಂಡಿ ಸ್ವಚ್ಛತೆ ಕಾರ್ಯ ಸೂಕ್ತ ರೀತಿಯಲ್ಲಿ ಆಗುತಿಲ್ಲ ಎಂಬ ದೂರುಗಳು ಬಂದಿದೆ ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಹೇಳಿದರು. ತಾ.ಪಂ.ಇಒ ಕುಮಾರ್ ಪ್ರತಿಕ್ರಿಯಿಸಿ, ವರ್ಷಕ್ಕೆ ಎರಡು ಬಾರಿ ಗ್ರಾ.ಪಂ.ಗಳಲ್ಲಿ ಚರಂಡಿ ಕ್ಲೀನ್ ಮಾಡಿಸಲಾಗುತ್ತದೆ. ಅಲ್ಲದೆ, ಪೌರಕಾರ್ಮಿಕರ ಕೊರತೆ ಇರುವುದರಿಂದ ಸಮಸ್ಯೆ ಉಂಟಾಗಿದೆ ಎಂದರು.
ಪೊಲೀಸ್ ಠಾಣೆಗೆ ದೂರು ನೀಡಿ:
ಮುಳ್ಳೂರು ಗ್ರಾಮದ ಕುಡಿಯುವ ನೀರಿನ ತೊಂಬೆಗಳ ಬಳಿ ಮದ್ಯ ವ್ಯಸನಿಗಳು ಕುಳಿತಿರುತ್ತಾರೆ. ಇದ್ದರಿಂದ ನೀರು ತರಲು ಬರುವ ಮಹಿಳೆಯರಿಗೆ ಮುಜುಗರ ಆಗುತ್ತಿದೆ ಎಂದು ಗ್ರಾಮದಿಂದ ದೂರು ಕೇಳಿ ಬಂದಿದೆ. ಈ ಬಗ್ಗೆ ಪಿಡಿಒ ಪರಿಶೀಲಿಸಿ ಕ್ರಮವಹಿಸಬೇಕು. ಅವರೆಲ್ಲರಿಗೂ ತಕ್ಷಣ ಎಚ್ಚರಿಕೆ ನೀಡಬೇಕು. ಕೇಳಲಿಲ್ಲ ಎಂದರೆ, ಪೊಲೀಸ್ ಠಾಣೆಗೆ ದೂರು ನೀಡಬೇಕು. ನೀರು ಸಮಸ್ಯೆಯಾಗದಂತೆ ಕುಡಿಯುವ ನೀರು ಬಳಸಿಕೊಳ್ಳಲು ತೊಂಬೆ ತುಂಬಿಸಿ ಎಂದು ಎ.ಆರ್.ಕೃಷ್ಣಮೂರ್ತಿ ಸೂಚಿಸಿದರು.
ಶೇ.85ರಷ್ಟು ಮಳೆ ಕೊರತೆ
ಸಭೆಯಲ್ಲಿ ಸಹಾಯಕ ಕೃಷಿ ನಿರ್ದೇಶಕ ರಂಗಸ್ವಾಮಿ ಮಾತನಾಡಿ, ಈ ಭಾಗದಲ್ಲಿ ಜೂನ್, ಜುಲೈ, ಆಗಸ್ಟ್ ತಿಂಗಳು ಬಿತ್ತನೆ ಕಾರ್ಯ ನಡೆಯುತ್ತದೆ. ಈ ಬಾರಿ ಶೇ.85 ರಷ್ಟು ಮಳೆ ಕೊರತೆಯಾಗಿದೆ. ಮೇ ತಿಂಗಳಲ್ಲಿ ಬಿದ್ದ ಮಳೆ ಉಪಯೋಗಕ್ಕೆ ಬರಲಿಲ್ಲ. ಬಿತ್ತನೆ ಸಮಯದಲ್ಲಿ ಮಳೆಯಾಗಿದ್ದರೆ ಅನುಕೂಲ ಆಗುತ್ತಿತ್ತು. ನಮ್ಮಲ್ಲಿ ಭತ್ತವೇ ಪ್ರಮುಖ ಬೆಳೆಯಾಗಿದೆ. ನಾವು ಕೂಡ ಬೀಜ ವಿತರಣೆ ಮಾಡಿಲ್ಲ. ರೈತರೆ ಸ್ವಂತವಾಗಿ ಸಸಿಮುಡಿ ಹಾಕಿ ಕೊಂಡಿದ್ದಾರೆ. ನೀರಾವರಿ ಭಾಗದಲ್ಲಿ 20 ಹೆಕ್ಟೇರ್‌ನಲ್ಲಿ ಮುಸುಕಿನ ಜೋಳ ಹಾಕಿದ್ದಾರೆ. ಇದನ್ನು ಬಿಟ್ಟರೆ, ಬೇರೆ ಬಿತ್ತನೆಗಳು ಆಗಿಲ್ಲ ಎಂದು ಸಭೆಗೆ ಮಾಹಿತಿ ನೀಡಿದರು.
ಪಶು ಸಂಗೋಪನೆ ಇಲಾಖೆ ಸಹಾಯಕ ನಿರ್ದೇಶಕ ಡಾ.ಸಿದ್ದರಾಜು ಮಾತನಾಡಿ, ತಾಲೂಕಿನಲ್ಲಿ 24,826 ದನ ಮತ್ತು ಎಮ್ಮೆಗಳು, 38,035 ಕುರಿ ಮೇಕೆಗಳಿವೆ. ಇನ್ನೂ 32 ವಾರಕ್ಕೆ ಸಾಕಾಗುವಷ್ಟು ಮೇವು ನಮ್ಮಲ್ಲಿದೆ. 2 ತಿಂಗಳ ಬಳಿಕ ಹಿತ್ತಲದೊಡ್ಡಿ, ಅರೇಪಾಳ್ಯ, ರಾಚಪ್ಪಾಜಿ ನಗರ, ಚಿಕ್ಕಲ್ಲೂರು ತೆಳ್ಳನ್ನೂರು, ಬಾಣೂರು, ಸುಂಡ್ರಳ್ಳಿ ಗ್ರಾಮಗಳಲ್ಲಿ ಮೇವಿಗೆ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ ಎಂದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಚಂದ್ರು, ತಾಲೂಕು ಅಧ್ಯಕ್ಷ ರಾಜೇಂದ್ರ ಇತರ ಅಧಿಕಾರಿಗಳು ಇದ್ದರು.