ಬೃಹತ್ ಶಿಲಾಯುಗದ ಸಂಸ್ಕೃತಿ ತೆರೆದಿಡುವ ದೊಡ್ಡಾಲತ್ತೂರು

 ಹನೂರು ತಾಲೂಕಿನ ದೊಡ್ಡಾಲತ್ತೂರು ಗ್ರಾಮದಲ್ಲಿ ಉತ್ಶನನದ ವೇಳೆ ಸಿಕ್ಕ ಅವಶೇಷಗಳು
ಹನೂರು ತಾಲೂಕಿನ ದೊಡ್ಡಾಲತ್ತೂರು ಗ್ರಾಮದಲ್ಲಿ ಉತ್ಶನನದ ವೇಳೆ ಸಿಕ್ಕ ಅವಶೇಷಗಳು
Published on

ಪ್ರಮುಖ ಮುಖ್ಯಾಂಶಗಳು

  • ವಿಶೇಷ ಗ್ರಾಮದ ನೆಲೆದಲ್ಲಿ ಇತಿಹಾಸದ ಮೌಲ್ಯ
  • ಮೈಸೂರು ವಿವಿ ಉತ್ಖನದಲ್ಲೂ ಮತ್ತೆ ಮತ್ತೆ ಸಾಬೀತು
  • ಆಯುಧ ಸಿಕ್ಕಿರುವುದೇ ವಿಶೇಷ
 ಚಾಮರಾಜನಗರ: ಮಾನವ ಕುಲದ ಪ್ರಮುಖ ವಿಕಾಸದ ಹಂತಗಳಲ್ಲಿ ಬೃಹತ್ ಶಿಲಾಯುಗವೂ ಒಂದು. ಈ ಯುಗದ ಸಂಸ್ಕೃತಿಯ ನೆಲೆಯಾಗಿ ಹನೂರು ತಾಲೂಕಿನ ಹಳ್ಳಿಯೊಂದು ಮತ್ತೆ ಮತ್ತೆ ಹೊರಹೊಮ್ಮುತ್ತಿದೆ.
ದೊಡ್ಡಾಲತ್ತೂರು ಗ್ರಾಮ ಈಗಾಗಲೇ ಬೃಹತ್ ಶಿಲಾಯುಗದ ಸಮಾಧಿಗಳ ತಾಣವಾಗಿ ಗುರುತಿಸಿಕೊಂಡಿದೆ. ಮೈಸೂರು ವಿಶ್ವವಿದ್ಯಾಲಯದ  ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗವು ಮಿಥಿಕ್ ಸೊಸೈಟಿ ಸಹಯೋಗದಲ್ಲಿ 2024ರ ಅಕ್ಟೋಬರ್‌ನಿಂದ 2025ರ ೆಬ್ರವರಿಯವರೆಗೆ ನಡೆಸಿದ ಉತ್ಖನನದಲ್ಲಿ ಬೃಹತ್ ಶಿಲಾಯುಗದ ಮಹತ್ವದ ವಸ್ತುಗಳು ಸಿಕ್ಕಿರುವುದು ದೊಡ್ಡಾಲತ್ತೂರಿನ ನೆಲಕ್ಕೆ ಇತಿಹಾಸ ಆಧಾರಿತ ಮೌಲ್ಯವನ್ನು ತಂದುಕೊಟ್ಟಿದೆ. 
ಆಯುಧ ಸಿಕ್ಕಿರುವುದೇ ವಿಶೇಷ: ಬೃಹತ್ ಶಿಲಾಯುಗದ ಸಮಾಧಿಗಳು ಸುರಕ್ಷಿತವಾಗಿರುವ ದೊಡ್ಡಾಲತ್ತೂರಿನಲ್ಲಿ ನಡೆದಿರುವ ಉತ್ಖನನದಲ್ಲಿ ಆಯುಧಗಳು ಸಿಕ್ಕಿದ್ದವು. ಕಲ್ಲು ವೃತ್ತಾಕಾರ ಮತ್ತು ಕಲ್ಗುಪ್ಪೆ ವೃತ್ತದ ಎರಡು ಬಗೆಯ 13 ಸಮಾಧಿಗಳನ್ನು ಉತ್ಖನನ ಮಾಡಿದಾಗ ವಿಶೇಷ ಆಯುಧಗಳು ದೊರಕಿವೆ. ಸಮಾಧಿಗಳಲ್ಲಿ ಕಪ್ಪು, ಕೆಂಪು ಬಣ್ಣದ ಮಣ್ಣಿನ ಪಾತ್ರೆಗಳು, ಕಬ್ಬಿಣದ ಉಪಕರಣಗಳು, ಮಾನವ ಮತ್ತು ಪ್ರಾಣಿಗಳ ಮೂಳೆಗಳು, ಮಣಿಗಳು ಸಿಕ್ಕಿರುವುದು ಸಾಮಾನ್ಯ. ಆದರೆ ವಿಶೇಷವಾಗಿ ಕಬ್ಬಿಣದ ಗುರಾಣಿ, ಈ ಗುರಾಣಿಗೆ ಎರಡು ಕಡೆಗಳಲ್ಲಿ ಚಿಕ್ಕ ಕುಣಿಕೆಯನ್ನು ಜೋಡಿಸಿರುವುದು, ಕಬ್ಬಿಣದ ಕೊಡಲಿ, ಬಾಣದ ತುಂಡುಗಳು, ಎರಡು ಶೂಲವಿರುವ ಆಯುಧವನ್ನು ಇರಿಸಲಾಗಿತ್ತು. ರಾಜ್ಯದಲ್ಲಿ ಶಿಲಾಚಿತ್ರಗಳು ವಿರಳ. ಹಾಗಿರುವಾಗ ದೊಡ್ಡಾಲತ್ತೂರಿನ ವೃತ್ತಾಕಾರದ ಬಂಡೆಗಳ ಸಮಾಧಿಯ ಮೇಲೆ ಮಾನವನ ಚಿತ್ರವನ್ನು ಕೊರೆಯಲಾಗಿದೆ. ಇದೂ ಸಹ ಉತ್ಖನನದಲ್ಲಿ ಸಿಕ್ಕ ವಿಶೇಷವಾಗಿತ್ತು.
ಕ್ರಿ.ಪೂ.4ರಿಂದ 6ನೇ ಶತಮಾನ..: ದೊಡ್ಡಾಲತ್ತೂರಿನ ಸಮಾಧಿಗಳ ಹೊರಗೆ ಸಿಕ್ಕಿರುವ ಮಣ್ಣಿನ ಪಾತ್ರೆಯ ತೊಟ್ಟಿಗಳಲ್ಲಿ ಇದ್ದಿಲು ಸಂಗ್ರಹ ಮಾಡಿದ್ದ ಉತ್ಖನನ ತಂಡ ಅದರ ಕಾಲಘಟ್ಟವನ್ನು ಅಂದಾಜಿಸಿದೆ. ಆ ಪ್ರಕಾರ, ಸಮಾಧಿ ನೆಲೆ ಕ್ರಿ.ಪೂ. 4ರಿಂದ 6ನೇ ಶತಮಾನದವರೆಗೆ ಬಳಕೆಯಲ್ಲಿರುವುದಾಗಿ ತಿಳಿದುಬಂದಿತ್ತು.
1960ರಲ್ಲಿ ಸಮಾಧಿ ಶೋಧ:
ಕೌದಳ್ಳಿಯಿಂದ ಸುಮಾರು 5 ಕಿ.ಮೀ ದೂರದಲ್ಲಿರುವ ದೊಡ್ಡಾಲತ್ತೂರು ಗ್ರಾಮದಲ್ಲಿ 1960ರಲ್ಲೇ ಬೃಹತ್ ಶಿಲಾಯುಗದ ಸಮಾಧಿಗಳ ಉತ್ಖನನ ನಡೆದಿತ್ತು. ಆಗ ಭಾರತೀಯ ಪುರಾತತ್ವ ಸರ್ವೇಕ್ಷಣದ ಸಿ.ಕೃಷ್ಣಮೂರ್ತಿ 40ಕ್ಕೂ ಹೆಚ್ಚು ಪ್ರದೇಶಗಳಲ್ಲಿ ಶೋಧಿಸಿದ್ದ ಬೃಹತ್ ಶಿಲಾಯುಗದ ಸಮಾಧಿಗಳಲ್ಲಿ ದೊಡ್ಡಾಲತ್ತೂರು ಒಂದಾಗಿದೆ. 
ಮರು ಸಂಶೋಧನೆಗಳ ಹಾದಿಯಲ್ಲಿ..:
ದೊಡ್ಡಾಲತ್ತೂರಿನ ಪ್ರದೇಶವನ್ನು ಮೈಸೂರು ವಿವಿಯ ಕಿರು ಸಂಶೋಧನಾ ಯೋಜನೆಯಡಿಯಲ್ಲಿ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ಕೇಂದ್ರದ ಪ್ರಾಧ್ಯಾಪಕಿ ಡಾ.ವಿ.ಶೋಭಾ 2020ರಲ್ಲಿ ಈ ಸಮಾಧಿ ಸ್ಥಳವನ್ನು ಮರು ಸಂಶೋಧನೆ ಮಾಡಿದರು. ಬಳಿಕ 2024ರ ಅಕ್ಟೋಬರ್‌ನಿಂದ 2025ರ ೆಬ್ರವರಿವರೆಗೆ ಮತ್ತೊಮ್ಮೆ ಉತ್ಖನನ ನಡೆಸಲಾಯಿತು. ಮಿಥಿಕ್ ಸೊಸೈಟಿ,  ಭಾರತೀಯ ಪುರಾತತ್ವ ಸರ್ವೆಕ್ಷಣದ ನಿವೃತ್ತ ಅಧಿಕಾರಿ ಸಿ.ಬಿ.ಪಾಟೀಲ್ , ವಿಭಾಗದ ವಿದ್ಯಾರ್ಥಿಗಳು ಈ ಸಂಶೋಧನೆಯಲ್ಲಿ ಪಾಲ್ಗೊಂಡು ಮಹತ್ವದ ಇತಿಹಾಸವನ್ನು ದಾಖಲೀಕರಿಸುವ ಮೂಲಕ ದೊಡ್ಡಾಲತ್ತೂರಿಗೆ ಬೃಹತ್ ಶಿಲಾಯುಗದ ಇತಿಹಾಸವಿರುವುದನ್ನು ಬೆಳಕಿಗೆ ತಂದರು. ಬಳಿಕ ಮೈಸೂರು ವಿವಿಯಲ್ಲಿ ಪ್ರದರ್ಶನವನ್ನೂ ಇಡಲಾಗಿತ್ತು.
ಮಲೆ ಮಹದೇಶ್ವರ ಬೆಟ್ಟದ ಪ್ರದೇಶದಲ್ಲಿ ದೊಡ್ಡಾಲತ್ತೂರಿನಲ್ಲಿ ಇಷ್ಟೊಂದು ಬೃಹತ್ ಶಿಲಾಯುಗದ ಸಮಾಧಿಗಳು ಇನ್ನೆಲ್ಲೂ ಇಲ್ಲ. ಇದೊಂದೇ ಹಳ್ಳಿಯಲ್ಲಿ ಸಮಾಧಿಗಳು ಸಂರಕ್ಷಿತವಾಗಿವೆ. ಈ ಹಿನ್ನೆಲೆಯಲ್ಲಿ ಪುರಾತತ್ವರಿಗೆ ಈ ಗ್ರಾಮ ವಿಶೇಷವಾಗಿದೆ.
ಡಾ.ವಿ.ಶೋಭಾ, ಪ್ರಾಧ್ಯಾಪಕಿ, ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ಕೇಂದ್ರ, ಮೈಸೂರು ವಿವಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net