ಗುಂಡ್ಲುಪೇಟೆ ತಾಲೂಕಿನ ಹೊನ್ನೇಗೌಡನಹಳ್ಳಿ ಗ್ರಾಮದಲ್ಲಿ ವಸತಿಹೀನರಿಗೆ ಮನೆ ನಿರ್ಮಾಣ ಕಾಮಗಾರಿಗೆ ದಿನೇಶ್ ಭೂಮಿಪೂಜೆ ನೆರವೇರಿಸಿದರು. ಚಂದ್ರಶೇಖರ್, ಮೂಕಾಂಬಿಕಾ, ಚೈತ್ರಾ, ಮಲ್ಲಿಕಾರ್ಜುನ, ನಂದೀಶ್, ರಾಜಣ್ಣ ಇದ್ದರು.
ಗುಂಡ್ಲುಪೇಟೆ: ನಿರ್ಗತಿಕರಿಗೆ ಸಮಾಜದಲ್ಲಿ ತಮಗೆ ಯಾರೂ ಇಲ್ಲ ಎಂಬ ಭಾವನೆ ಬಾರದಂತೆ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆ ರೂಪಿಸಲಾಗಿದೆ ಎಂದು ಯೋಜನೆಯ ಜಿಲ್ಲಾ ನಿರ್ದೇಶಕ ದಿನೇಶ್ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆ ವತಿಯಿಂದ ತಾಲೂಕಿನ ಹೊನ್ನೇಗೌಡನಹಳ್ಳಿ ಗ್ರಾಮದ ದೊಡ್ಡಮ್ಮ ಎಂಬ ವಸತಿಹೀನರಿಗೆ ಮನೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಸಮಾಜದಲ್ಲಿ ನಿರ್ಗತಿಕರಿಗೆ ಪ್ರತಿ ತಿಂಗಳು ಒಂದು ಸಾವಿರ ರೂಪಾಯಿ ಮಾಸಾಶನ, ಪೌಷ್ಟಿಕ ಆಹಾರ ವಾತ್ಸಲ್ಯ ಮಿಕ್ಸ್ (ಫುಡ್) ಹಾಗೂ ವಾತ್ಸಲ್ಯ ಕಿಟ್‌ನ್ನು ನೀಡುತ್ತಿದ್ದೇವೆ ಎಂದು ತಿಳಿಸಿದರು.
ಅಲ್ಲದೆ ವಾತ್ಸಲ್ಯ ಯೋಜನೆಯಲ್ಲಿ ಆಯ್ಕೆಯಾದ ಫಲಾನುಭವಿಗಳಿಗೆ ಶೌಚಗೃಹ ಕಟ್ಟಿಕೊಡುವುದು, ಮನೆ ರಿಪೇರಿ ಮಾಡಿಸುವುದು, ಬಿಸಿನೀರಿಗೆ ಸೋಲಾರ್ ಅಳವಡಿಕೆ ಮೂಲಕ ನಿಮ್ಮೊಂದಿಗೆ ನಾವಿದ್ದೇವೆ ಎಂಬ ಆತ್ಮಸ್ಥೈರ್ಯ ತುಂಬಿ ಅವರು ಸಮಾಜದಲ್ಲಿ ಗೌರವಯುತವಾಗಿ ಬದುಕಲು ಧರ್ಮಸ್ಥಳ ಸಂಸ್ಥೆ ಶ್ರಮಿಸುತ್ತಿದೆ. ಯೋಜನೆಯ ವತಿಯಿಂದ ತಾಲೂಕಿನಲ್ಲಿ 64 ನಿರ್ಗತಿಕರನ್ನು ಗುರ್ತಿಸಿ ಪ್ರತಿ ತಿಂಗಳು ಒಂದು ಸಾವಿರ ರೂಪಾಯಿ ಮಾಸಾಶನ ನೀಡಲಾಗುತ್ತಿದೆ. ಈಗಾಗಲೇ 2 ಮನೆಗಳನ್ನು ನಿರ್ಮಿಸಿಕೊಡಲಾಗಿದ್ದು, ಇದು 3ನೆಯದಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ತಾಲೂಕು ಯೋಜನಾಧಿಕಾರಿ ಚಂದ್ರಶೇಖರ್, ಪ್ರಾದೇಶಿಕ ಯೋಜನಾಧಿಕಾರಿ ಮೂಕಾಂಬಿಕಾ, ತಾಲೂಕು ಸಮನ್ವಯಾಧಿಕಾರಿ ಚೈತ್ರಾ, ಮುಖಂಡರಾದ ಮಲ್ಲಿಕಾರ್ಜುನ, ನಂದೀಶ್, ರಾಜಣ್ಣ ಸೇರಿದಂತೆ ಹಲವರು ಇದ್ದರು.