ಶ್ರೀ ಬೆಟ್ಟಳ್ಳಿ ಮಾರಮ್ಮನ ದರ್ಶನ ಪಡೆದ ಭಕ್ತರು

ವಿವಿಧ ಪುಷ್ಪಗಳಿಂದ ಸಿಂಗಾರಗೊಂಡ ಶ್ರೀ ಬೆಟ್ಟಳ್ಳಿ ಮಾರಮ್ಮನ ಮೂರ್ತಿ.
ವಿವಿಧ ಪುಷ್ಪಗಳಿಂದ ಸಿಂಗಾರಗೊಂಡ ಶ್ರೀ ಬೆಟ್ಟಳ್ಳಿ ಮಾರಮ್ಮನ ಮೂರ್ತಿ.
Published on
ಹನೂರು: ಮಣ್ಣೆತ್ತಿನ ಅಮಾವಾಸ್ಯೆ ಹಿನ್ನೆಲೆಯಲ್ಲಿ ಪಟ್ಟಣದ ಶ್ರೀ ಬೆಟ್ಟಳ್ಳಿ ಮಾರಮ್ಮನ ದೇಗುಲಕ್ಕೆ ಮಂಗಳವಾರ ಭಕ್ತರ ದಂಡೇ ಹರಿದು ಬಂದಿತ್ತು.
ಅಮಾವಾಸ್ಯೆಯ ಅಂಗವಾಗಿ ದೇಗುಲವನ್ನು ತಳಿರು, ತೋರಣದಿಂದ ಸಿಂಗರಿಸಲಾಗಿತ್ತು. ದೇವಿಗೆ ಬೆಳಗ್ಗೆ 4.30ರಲ್ಲಿ ಪನ್ನೀರು, ಎಳನೀರು, ಕುಂಕುಮ, ಗಂಧ, ಜೇನುತುಪ್ಪ, ಹಾಲು, ಮೊಸರು, ಸಕ್ಕರೆ, ಎಣ್ಣೆ ಹಾಗೂ ಗಂಧದ ಅಭಿಷೇಕ ನೆರವೇರಿಸಲಾಯಿತು. ಮೂರ್ತಿಯನ್ನು ಚಿನ್ನಾಭರಣ ಹಾಗೂ ವಿವಿಧ ಪುಷ್ಪಗಳಿಂದ ಸಿಂಗರಿಸಿದ ಅರ್ಚಕರು ವಿಶೇಷ ಪೂಜೆ ಸಲ್ಲಿಸಿದರು. ಮಹಾಮಂಗಳಾರತಿ ಬೆಳಗಿಸಿದ ನಂತರ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ನೀಡಲಾಯಿತು.
ಪಟ್ಟಣ ಸೇರಿದಂತೆ ಭೈರನತ್ತ, ಮಣಗಳ್ಳಿ, ಬಂಡಳ್ಳಿ, ಉದ್ದನೂರು, ಬೆಳತ್ತೂರು, ಮಾಲಾಪುರ, ಅಜ್ಜೀಪುರ, ಚಿಂಚಳ್ಳಿ, ಮಣಗಳ್ಳಿ, ಮಂಗಲ ಹಾಗೂ ಇತರೆಡೆಯಿಂದ ಸಾವಿರಾರು ಭಕ್ತರು ಆಗಮಿಸಿದ್ದರು. ಹಣ್ಣು ಕಾಯಿ ನೀಡಿ ಪೂಜೆ ಸಲ್ಲಿಸುವ ಮೂಲಕ ದೇವರ ದರ್ಶನ ಪಡೆದರು. ಹರಕೆ ಹೊತ್ತ ಕೆಲ ಭಕ್ತರು ಬೆಲ್ಲ ಹಾಗೂ ನಿಂಬೆಹಣ್ಣಿನ ಆರತಿ ಬೆಳಗಿಸಿದರು. ಇನ್ನು ಕೆಲವರು ದೇಗುಲದ ಮುಂಭಾಗದಲ್ಲಿ ಉಪ್ಪು ಸುರಿದು ಭಕ್ತಿಭಾವ ಮೆರೆದರು. ದೇಗುಲದ ವತಿಯಿಂದ ಅನ್ನ ಸಂತರ್ಪಣೆ ಮಾಡಲಾಯಿತು.
ಹಾಗೆಯೇ ಅಮಾವಾಸ್ಯೆ ಹಿನ್ನೆಲೆಯಲ್ಲಿ ತಾಲೂಕಿನ ವೈಶ್ಯಂಪಾಳ್ಯದ ಶಿವಲಂಕಾರೇಶ್ವರ, ಲೊಕ್ಕನಹಳ್ಳಿಯ ಸಂಪಿಗೇಶ್ವರ, ಹುಲ್ಲೇಪುರದ ದಿಂಬಾದಳೇಶ್ವರ, ಮಂಗಲದ ಕೋಣನ ಮಾರಮ್ಮ, ಆರ್.ಎಸ್.ದೊಡ್ಡಿಯ ಶ್ರೀ ಮಹದೇಶ್ವರ ಸೇರಿದಂತೆ ಇನ್ನಿತರ ದೇಗುಲದಲ್ಲೂ ವಿಶೇಷ ಪೂಜೆ ನೆರವೇರಿತು. ಆಗಮಿಸಿದ ಭಕ್ತರು ದೇವರ ದರ್ಶನ ಪಡೆದರು. ಪ್ರಸಾದ ವಿನಿಯೋಗಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net