ಭಕ್ತರನ್ನು ಅನುಗ್ರಹಿಸುವ ದೇವಾಳಮ್ಮ

ಯಳಂದೂರು ತಾಲೂಕಿನ ಅಂಬಳೆ ಗ್ರಾಮದಲ್ಲಿರುವ ದೇವಾಳಮ್ಮನ ಸನ್ನಿಧಿ ಹೊರನೋಟ.
ಯಳಂದೂರು ತಾಲೂಕಿನ ಅಂಬಳೆ ಗ್ರಾಮದಲ್ಲಿರುವ ದೇವಾಳಮ್ಮನ ಸನ್ನಿಧಿ ಹೊರನೋಟ.
Published on
ಯಳಂದೂರು : ತಾಲೂಕಿನ ಅಂಬಳೆ ಗ್ರಾಮವು ಸಪ್ತಮಾತೃಕೆಯರ ನೆಲೆವೀಡು ಎಂದೇ ಖ್ಯಾತವಾಗಿದೆ. ಈ ಪ್ರಾಂತ್ಯವನ್ನು ಚೋಳರಾದಿಯಾಗಿ ಹೊಯ್ಸಳರು, ವಿಜಯನಗರ ಸಂಸ್ಥಾನದವರು, ಹದಿನಾಡು ಮತ್ತು ಮೈಸೂರು ಅರಸರು ಆಳಿದ್ದಾರೆ. ಈ ಭಾಗದಲ್ಲಿ ಹತ್ತಾರು ದೇವಾಲಯಗಳಿದ್ದು, ಅದರಲ್ಲಿ ಚಂಡಿಕೇಶ್ವರಿ ದೇವಿ ಶಕ್ತಿಪೀಠವು ಪ್ರಖ್ಯಾತವಾಗಿದೆ.
ದೇವಾಳಮ್ಮನ ಸನ್ನಿಧಿ ಎಂದೇ ಹೆಸರಾದ ಈ ತಾಣವು ಅಂಬಳೆ ಗ್ರಾಮದ ಕೀರ್ತಿಯನ್ನು ಹೆಚ್ಚಿಸಿದೆ. ಗ್ರಾಮದ ಬಳಿಯ ಸುವರ್ಣಾವತಿ ನದಿ ದಂಡೆ ಮೇಲೆ ಕಾರಾಪುರ ಎಂಬ ಪ್ರದೇಶವಿದೆ. ಈ ಸ್ಥಳವು ಐತಿಹಾಸಿಕವಾಗಿ ಹಲವಾರು ಕುರುಹುಗಳನ್ನು ಹೊಂದಿದೆ. ಇದೇ ನದಿ ದಂಡೆ ಮೇಲೆ ಪುರಾತನ ಚಂಡಿಕೇಶ್ವರಿ ಗದ್ದುಗೆ ಇದೆ. ಜನಪದರ ಭಾಷೆ ಮತ್ತು ಭಾವದಲ್ಲಿ ಈಕೆ ದೇವಾಳಮ್ಮ ಎಂದೇ ಪೂಜಿತವಾಗಿದ್ದಾಳೆ. ದೇವಿಯು ಗದ್ದುಗೆ ರೂಪದಲ್ಲಿ ನೆಲೆಸಿದ್ದು, ಸಾವಿರಾರು ವರ್ಷಗಳಿಂದ ಭಕ್ತರನ್ನು ಅನುಗ್ರಹ ಮಾಡುತ್ತಿದ್ದಾಳೆ.
ಗ್ರಾಮದೇವತೆ:
ಚೋಳರ ಕಾಲದಲ್ಲಿ ನಿರ್ಮಿತವಾದ ಬಸವೇಶ್ವರ ಗದ್ದುಗೆ ಗ್ರಾಮದಲ್ಲಿದೆ. ಇದು ವಿರಕ್ತ ಮಠವಾಗಿದೆ. ಮೈಸೂರು ಪ್ರಾಂತ್ಯದ ಅತ್ಯಂತ ಹಳೆಯ ಮಠವೆಂದೇ ಇದು ಖ್ಯಾತವಾಗಿದೆ. ಮುಮ್ಮಡಿ ಕೃಷ್ಣರಾಜ ಒಡೆಯರು ಈ ಮಠಕ್ಕೆ ದಾನ ದತ್ತಿ ನೀಡಿರುವ ತಾಮ್ರ ಶಾಸನಗಳು ಮಠದಲ್ಲಿದೆ. ಇದಕ್ಕೂ ಪೂರ್ವದಲ್ಲಿ ಈ ಸ್ಥಳ ಚಂಡಿಕೇಶ್ವರಿ ಮಾತೆಯ ನೆಲೆಯಾಗಿತ್ತು ಎನ್ನುತ್ತದೆ ಇತಿಹಾಸ. ಈಕೆ ಅಂಬಳೆ ಗ್ರಾಮದ ಗ್ರಾಮದೇವತೆಯಾಗಿದ್ದು, ಸಾವಿರಾರು ವರ್ಷಗಳಿಂದ ಗ್ರಾಮದೇವತೆ ಹಬ್ಬ ಆಚರಣೆ ಮಾಡುವ ಸಂಪ್ರದಾಯವೂ ಇಲ್ಲಿದೆ.
ಪೌರಾಣಿಕ ಹಿನ್ನೆಲೆ:
ರಕ್ತಬೀಜಾಸುರನ ಸಂಹಾರ ಮಾಡಲು ದೇವಿ ಮುಂದಾದಾಗ ರಾಕ್ಷಸನೇ ಮೊದಲು ಮೇಲುಗೈ ಸಾಧಿಸುತ್ತಾನೆ. ಈ ಸಂದರ್ಭದಲ್ಲಿ ದೇವತೆಗಳು ಶಕ್ತಿರೂಪಿಣಿ ಚಂಡಿಕೇಶ್ವರಿ ಮೊರೆಹೋಗುತ್ತಾರೆ. ಚಾಮುಂಡಿಯೇ ಚಂಡಿಕೆಯಾಗಿ ರೂಪತಾಳಿ ಶತ್ರು ಸಂಹಾರ ಮಾಡುವ ಮೂಲಕ ಲೋಕ ಕಲ್ಯಾಣ ಮಾಡುತ್ತಾಳೆ. ಅವಳೇ ಇಲ್ಲಿ ನೆಲೆ ನಿಂತಿದ್ದಾಳೆ ಎಂಬ ಪೌರಾಣಿಕ ಹಿನ್ನೆಲೆ ಇದೆ.
ವಿಶಿಷ್ಟ ಪೂಜಾ ಪದ್ಧತಿ:
ಗ್ರಾಮದಲ್ಲಿ ಭಕ್ತರ ಅನುಗ್ರಹಕ್ಕೆ ನೆಲೆ ನಿಂತಿರುವ ಶ್ರೀ ಚಂಡಿಕೇಶ್ವರಿ ದೇವಿಗೆ ವರ್ಷಕ್ಕೊಮ್ಮೆ ವಿಶೇಷ ಪೂಜೆ ನೆರವೇರುತ್ತದೆ. ಆಗ ಎಳನೀರಿನ ದೀಪ ಬೆಳಗುವ ಪದ್ಧತಿ ಇದೆ. ಅನೇಕ ಭಕ್ತರು ಎಳನೀರು ಹೊತ್ತು ಸಂಕಲ್ಪ ಮಾಡಿಕೊಂಡು ಪೂಜೆ ಸಲ್ಲಿಸುವ ವಿಶೇಷ ಪದ್ಧತಿಯೂ ಇದೆ. ಹೀಗೆ ಮಾಡಿದರೆ ತಮ್ಮ ಇಷ್ಟಾರ್ಥ ಈಡೇರುತ್ತದೆ. ಪಾಪಗಳು ಪರಿಹಾರವಾಗುತ್ತವೆ. ಆರೋಗ್ಯ ಸುಧಾರಿಸುತ್ತದೆ ಎಂಬ ನಂಬಿಕೆ ಇದೆ. ಇದಕ್ಕೆ ಒಂದು ಪೌರಾಣಿಕ ಕಥೆಯೂ ಇದೆ. ಚಂಡಿಕೆಯಾಗಿ ಭಯಂಕರ ರೂಪ ತಾಳಿ ಶತ್ರು ಸಂಹಾರ ಮಾಡಿದ ದೇವಿಯು ಶಾಂತರೂಪಕ್ಕೆ ಬರಲಿ ಎಂದು ದೇವತೆಗಳು ಎಳನೀರು ದೀಪ ಬೆಳಗಿದರಂತೆ. ಆಗ ದೇವಿಯು ಶಾಂತ ರೂಪ ಪಡೆದಳಂತೆ. ಆದ್ದರಿಂದ ಭಕ್ತರು ತಮ್ಮ ಇಷ್ಟಾರ್ಥವನ್ನು ನೆರವೇರಿಸಿಕೊಳ್ಳಲಿಕ್ಕಾಗಿ ತಲೆಯ ಮೇಲೆ ಎಳನೀರು ಹೊತ್ತು ಹರಕೆ ಕಟ್ಟಿಕೊಳ್ಳುತ್ತಾರೆ. ಶತಮಾನಗಳಿಂದಲೂ ಮಹಾಸತಿ ಮತ್ತು ಮಾರಿಕಾಂಬ ಕುಲದ ಮನೆತನದವರು ದೇವಿಯನ್ನು ಪೂಜಿಸಿಕೊಂಡು ಬರುತ್ತಿದ್ದಾರೆ. ಗದ್ದುಗೆ ರೂಪದಲ್ಲಿ ಇರುವ ದೇವಿಗೆ ಮತ್ತು ವಿಗ್ರಹಕ್ಕೆ ಪ್ರತಿ ಮಂಗಳವಾರ ಮತ್ತು ಶುಕ್ರವಾರ ವಿಶೇಷ ನೈವೇದ್ಯ, ಅಭಿಷೇಕ ಸಹಿತ ಪೂಜೆ ಸಂಪನ್ನಗೊಳ್ಳುತ್ತದೆ.
ಒಂದು ತಿಂಗಳು ಒಗ್ಗರಣೆ ಮಾಡುವುದಿಲ್ಲ :
ಅಂಬಳೆ ಗ್ರಾಮದಲ್ಲಿ ದಸರಾ ಆಚರಣೆಗೂ ಮುನ್ನ ಭಾದ್ರಪದದಲ್ಲಿ ಒಂದು ತಿಂಗಳು ನಡೆಯುವ ಚಾಮುಂಡೇಶ್ವರಿ ದೇವಿಯ ಜಾತ್ರೆಯ ಸಂದರ್ಭದಲ್ಲಿ ಗ್ರಾಮದಲ್ಲಿ ವಿಶೇಷ ಆಚರಣೆ ಜಾರಿಯಲ್ಲಿ ಇರುತ್ತದೆ. ಈ ಮಂಡಲದ ಜನ ಒಂದು ತಿಂಗಳು ಕಾಲ ಮನೆಯಲ್ಲಿ ಒಗ್ಗರಣೆ ಮಾಡುವುದಿಲ್ಲ. ಇದು ಇಂದಿಗೂ ನಡೆದುಕೊಂಡು ಬರುತ್ತಿದೆ. ದೊಡ್ಡ ಹಬ್ಬದ ಆಚರಣೆ ದಿನ ನಾಗಸ್ವರ, ಛತ್ರಿ ಚಾಮರ ಸಹಿತ ದೇವಿಯ ಮೆರವಣಿಗೆ ಮಾಡಿ, ಎಳನೀರಿನ ದೀಪದ ಆರತಿ ಬೆಳಗಲಾಗುತ್ತದೆ. ಇದೇ ಸಂದರ್ಭ ಭಕ್ತರು ಎಳನೀರು ಸೇವೆಯನ್ನೂ ಮಾಡುತ್ತಾರೆ. ಇದರಿಂದ ಮನೆಯಲ್ಲಿ ಶಾಂತಿ, ನೆಮ್ಮದಿ ನೆಲೆಸುತ್ತದೆ. ಸಮೃದ್ಧ ಫಸಲು ಬರುತ್ತದೆ, ರೋಗಗಳು ಗುಣವಾಗುತ್ತವೆ. ಸಂತಾನ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ.
ಗುಡಿ ನಿರ್ಮಾಣ:
ನಂಬಿದ ಭಕ್ತರ ಹತ್ತಾರು ಸಂಕಷ್ಟಗಳನ್ನು ಪರಿಹರಿಸಿ ಅನಂತ ಅನುಗ್ರಹವನ್ನು ಮಾಡುತ್ತಿರುವ ಶ್ರೀ ಚಂಡಿಕೇಶ್ವರಿಯು ಮಾತೃಸ್ವರೂಪಿಯಾಗಿದ್ದಾಳೆ. ಪವಾಡ ಸದೃಶ್ಯವಾದ ದೇವತೆಗೆ ಹಲವು ವರ್ಷಗಳ ಕಾಲ ನೆಲೆ ಇರಲಿಲ್ಲ. ಒಂದು ಬೇವಿನ ಮರದ ಕೆಳಗಡೆ ತಗ್ಗಿನಲ್ಲಿ ದೇವಿಯು ನೆಲೆಗೊಂಡಿದ್ದಳು. ಇದನ್ನು ಮನಗಂಡ ಅಂಬಳೆ ಗ್ರಾಮದ ಜನರು ಕಾರಾಪುರ ವಿರಕ್ತ ಮಠದ ಶ್ರೀ ಬಸವರಾಜ ಸ್ವಾಮೀಜಿ ಮಾರ್ಗದರ್ಶನದಲ್ಲಿ ಗುಡಿ ನಿರ್ಮಾಣ ಮಾಡಿದರು. ಎಂದಿಗೂ ಅನುಗ್ರಹ ಮಾಡುವ ದೇವಿಯ ಆಲಯದಲ್ಲಿ ದಿನವೂ ಪೂಜಾದಿಗಳು ನೆರವೇರುತ್ತಿರುವುದು ಧನ್ಯತೆ ಸಂಕೇತವಾಗಿದೆ.
ದೇವಿಯ ಮಹಾತ್ಮೆ ಅನನ್ಯವಾಗಿದೆ. ದೇಗುಲಕ್ಕೆ ಪೌರಾಣಿಕ ಹಿನ್ನೆಲೆಯೂ ಇದೆ. ವರ್ಷಕ್ಕೊಮ್ಮೆ ಇಲ್ಲಿ ನಡೆಯುವ ಜಾತ್ರೆಗೆ ಹೊರ ಜಿಲ್ಲೆ ಮತ್ತು ಹೊರ ರಾಜ್ಯಗಳಿಂದ ಬರುವ ಸಾವಿರಾರು ಭಕ್ತರು ಎಳನೀರು ಸಮರ್ಪಿಸಿ ವಿಶೇಷ ಪೂಜೆ ಮಾಡಿಸುತ್ತಾರೆ. ಇದು ಶಕ್ತಿಶಾಲಿ ಪೀಠವಾಗಿದ್ದು, ಭಕ್ತರಿಗೆ ವಿಶೇಷ ಅನುಗ್ರಹ ಪ್ರಾಪ್ತಿಯಾಗುತ್ತಿದೆ.
ಶ್ರೀನಿವಾಸ್
ಅರ್ಚಕ, ಅಂಬಳೆ ಗ್ರಾಮ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net