ದೇಸಿಯ ಕಲೆ ಆಟಗಳು ನಮ್ಮ ಅಸ್ಮಿತೆ

ಚಾಮರಾಜನಗರದ ಜೆಎಸ್‌ಎಸ್ ಮಹಿಳಾ ಕಾಲೇಜಿನಲ್ಲಿ ಇಶಾನ- 2026ನೇ ಸಾಂಸ್ಕೃತಿಕ ಹಬ್ಬದ ಸಮಾರೋಪ ಸಮಾರಂಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.ಜಮುನಾ, ಅರುಣಾಶ್ರೀ, ಸುಷ್ಮಾ  ಇತರರಿದ್ದರು.
ಚಾಮರಾಜನಗರದ ಜೆಎಸ್‌ಎಸ್ ಮಹಿಳಾ ಕಾಲೇಜಿನಲ್ಲಿ ಇಶಾನ- 2026ನೇ ಸಾಂಸ್ಕೃತಿಕ ಹಬ್ಬದ ಸಮಾರೋಪ ಸಮಾರಂಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.ಜಮುನಾ, ಅರುಣಾಶ್ರೀ, ಸುಷ್ಮಾ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮೈಸೂರು ವಿವಿಯ ಪ್ರಸಾರರಂಗದ ನಿರ್ದೇಶಕ ಪ್ರೊ. ಎಂ. ನಂಜಯ್ಯ ಹೊಂಗನೂರು ಅಭಿಮತ
ಚಾಮರಾಜನಗರ: ಜಿಲ್ಲೆ ಜಾನಪದ, ಸಾಂಸ್ಕೃತಿಕ ಹಾಗೂ ಪ್ರಾಕೃತಿಕ ವೈಭವನ್ನು ಹೊಂದಿರುವ ಶ್ರೀಮಂತ ಜಿಲ್ಲೆ ಇಲ್ಲಿ ಸಾಂಸ್ಕೃತಿಕ ಪರಂಪರೆ ದೇಸಿಯ ಕಲೆಗಳು, ಆಟಗಳು ನಮ್ಮ ಅಸ್ಮಿತೆಯಾಗಿವೆ. ಇವುಗಳನ್ನು ಉಳಿಸಿ, ಬೆಳೆಸುವ ಅಗತ್ಯತೆ ಇದೆ ಎಂದು ಮೈಸೂರು ವಿವಿಯ ಪ್ರಸಾರರಂಗದ ನಿರ್ದೇಶಕ ಪ್ರೊ. ಎಂ. ನಂಜಯ್ಯ ಹೊಂಗನೂರು ಹೇಳಿದರು.
ನಗರದ ಜೆಎಸ್‌ಎಸ್ ಮಹಿಳಾ ಕಾಲೇಜಿನಲ್ಲಿ ಇಶಾನ- 2026ನೇ ಸಾಂಸ್ಕೃತಿಕ ಹಬ್ಬದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಎರಡು ಮಹಾ ಕಾವ್ಯಗಳನ್ನು ಹೊಂದಿದ ದ್ವಿಭಾಷ ನೀತಿಯನ್ನು ಹೊಂದಿರುವ ಜಾನಪದ ಹಾಗೂ ಸಾಂಸ್ಕೃತಿಕ ವೈಭವನ್ನು ಹೊಂದಿರುವ ಜಿಲ್ಲೆಯಲ್ಲಿ ಆಧುನಿಕ ಭರಾಟೆಯಿಂದ ನಮ್ಮ ಸಾಂಸ್ಕೃತಿಕ ಪರಂಪರೆ, ದೇಶಿಯ ಕಲೆಗಳು ಮರೆಯಾಗುತ್ತಿರುವ ಹೊತ್ತಿನಲ್ಲಿ ನಗರದ ಜೆಎಸ್‌ಎಸ್ ಮಹಿಳಾ ಕಾಲೇಜಿನಲ್ಲಿ ಇಂತಹ ಸಾಂಸ್ಕೃತಿಕ ಹಬ್ಬ ಅರ್ಥಪೂರ್ಣ ಕಾರ್ಯಕ್ರಮವಾಗಿದೆ ಎಂದರು.
ಮಹದೇಶ್ವರ, ಮಂಟೇಸ್ವಾಮಿ, ನಿಜಗುಣರು, ಸಿದ್ದಾಪ್ಪಾಜಿ ಸೇರಿದಂತೆ ಅನೇಕ ಮಹಾಪುರುಷರು ನಡೆದಾಡಿದ ಪುಣ್ಯಭೂಮಿ, ಬುಡಕಟ್ಟು ಸಂಸ್ಕೃತಿ, ಸಾಂಸ್ಕೃತಿಕ ಹಾಗೂ ಪ್ರಾಕೃತಿಕವಾಗಿ ಜಿಲ್ಲೆಯು ಶ್ರೀಮಂತವಾಗಿದೆ ಎಂದರು.
ದೇಶೀಯ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯ ವಾಗಬೇಕು. ಆ ಮೂಲಕ ಹೊಸ ತಲೆಮಾರಿನ ಯುವ ಜನತೆಗೆ ಆಲೋಚನಾ ಕ್ರಮ ತುಂಬುವ ಕೆಲಸವಾಗಬೇಕು ಎಂದರು.
ಸಾಂಪ್ರದಾಯಿಕ ಉಡುಗೆ, ಕುಲ ಕಸುಬು ಹಾಗೂ ಅನೇಕ ಗ್ರಾಮೀಣ ಪದಗಳು ಕಣ್ಮರೆಯಾಗುತ್ತಿವೆ. ಅಲ್ಲದೇ ಆಧುನೀಕರಣ ಪ್ರಭಾವದಿಂದಾಗಿ ದೇಶೀಯ ಆಹಾರ ಪದ್ಧತಿಗಳು ಇಲ್ಲದಾಗಿದ್ದು ದೇಶೀಯ ಆಹಾರ ರುಚಿ ತೋರಿಸುವ ಕೆಲಸವಾಗಬೇಕು ಎಂದು ಹೇಳಿದರು.
ಜಿಲ್ಲೆಯು ಜಾನಪದ ಕಲೆಗಳ ತವರೂರಾಗಿದ್ದು ಅನೇಕ ಕಲೆಗಳಿವೆ. ರಿಯಾಲಿಟಿ ಶೋಗಳಲ್ಲೂ ಜಾನಪದ ಕಲೆಗಳಿಗೆ ಆದ್ಯತೆ ಇದ್ದು, ಜಾನಪದ ಕಲೆಗೆ ಸಾವಿಲ್ಲ. ಆಧುನೀಕತೆ, ಜಾಗತೀಕರಣ ನಡುವೆ ಜಾನಪದ ಕಲಾವಿದರು ಜಾಗತಿಕ ಮಟ್ಟದಲ್ಲಿ ಗುರುಸಿಕೊಳ್ಳುತ್ತಿದ್ದಾರೆ ಎಂದರು,
ಚಾ.ನಗರ ವಿವಿ ಕುಲಪತಿ ಪ್ರೊ.ಎಂ.ಆರ್. ಗಂಗಾಧರ್ ಮಾತನಾಡಿ, ಸಾಂಸ್ಕೃತಿಕ ಹಬ್ಬವು ಕಲೆ, ಸಂಪ್ರದಾಯ, ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಪ್ರದರ್ಶಿಸುವ ಒಂದು ಸಂಭ್ರಮದ ಆಚರಣೆಯಾಗಿದೆ. ಇದು ಶಾಲೆ, ಕಾಲೇಜು, ಅಥವಾ ಸಮುದಾಯದ ಮಟ್ಟದಲ್ಲಿ ನೃತ್ಯ, ಸಂಗೀತ, ನಾಟಕ, ಮತ್ತು ವೇಷಭೂಷಣಗಳ ಮೂಲಕ ಜನರನ್ನು ಒಂದುಗೂಡಿಸುತ್ತದೆ ಎಂದರು.
ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಯೋಜಿಸುವುದರಿಂದ ಪ್ರತಿಭೆಗಳು ಅನಾವರಣಗೊಳ್ಳಲು ಸಹಕಾರಿ ಆಗಿದೆ. ಆದರೆ, ಇಂದಿನ ಶಿಕ್ಷಣದ ವ್ಯವಸ್ಥೆಯಲ್ಲಿ ಸಾಂಸ್ಕೃತಿಕ ಚಟುವಟಿಕೆಗಳಿಗೆ ಹೆಚ್ಚು ಪ್ರೋತ್ಸಾಹ ಸಿಗುತ್ತಿಲ್ಲ, ಇದಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದರು.
ನಮ್ಮ ದೇಶ ವಿಶಿಷ್ಠ ಸಂಸ್ಕೃತಿ, ಗ್ರಾಮೀಣ ಜಾನಪದ ಸೊಗಡು ಮುಂತಾದ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ವಿಶ್ವಕ್ಕೆ ತೋರಿಸಿಕೊಟ್ಟ ದೇಶ, ನಮ್ಮ ಸಾಂಸ್ಕೃತಿಕ ಪರಂಪರೆ, ಯೋಗ, ಆಯುರ್ವೇದ ಪದ್ಧತಿಯನ್ನು ವಿದೇಶಿಯರು ಕಲಿತು ತಮ್ಮ ದೇಶಗಳಲ್ಲಿ ಅಳವಡಿಸಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.
ಜಾಗತೀಕರಣ, ಉದಾರೀಕರಣದ ಭರಾಟೆಯಲ್ಲಿ ಎಲ್ಲ ಕ್ಷೇತ್ರಗಳು ಹರಡಿಕೊಂಡಿದ್ದು. ಹಣಕ್ಕೆ ತಕ್ಕಂತೆ ಕೆಲಸ ಮಾಡುವ ಅನಿವಾರ್ಯತೆ ಇಂದು ಬಂದೊದಗಿದೆ. ಬದಲಾದ ಕಾಲಘಟ್ಟಕ್ಕೆ ತಕ್ಕಂತೆ ಹೊಸ ಹೊಸತಂತ್ರಜ್ಞಾನಕ್ಕೆ ಹೊಂದಿಕೊಳ್ಳಬೇಕು, ಮನಸ್ಸಿಗೆ ಮುದ ನೀಡುವ ದೇಶಿ ಕ್ರೀಡೆಗಳನ್ನು ಉಳಿಸಿ, ಬೆಳೆಸುವ ವಾತಾವರಣ ನಿರ್ಮಿಸಿಕೊಳ್ಳಬೇಕು ಎಂದರು.
ಚಾ.ನಗರ ವಿವಿ ಕಲಾವಿಭಾಗದ ಡೀನ್ ಡಾ. ಕೆ.ಸಿ.ಬಸವಣ್ಣ, ಕಾಲೇಜಿನ ಪ್ರಾಂಶುಪಾಲ ಟಿ.ಎಂ.ಮರಿಸ್ವಾಮಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ವಿವಿಧ ಸ್ವರ್ಧೆಗಳಲ್ಲಿ ಭಾಗವಹಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸಾಂಸ್ಕೃತಿಕ ಸಮಿತಿಯ ಸಂಚಾಲಕಿ ಜಮುನಾ, ಪ್ರಾಧ್ಯಾಪಕರಾದ ಅರುಣಾಶ್ರೀ, ಸುಷ್ಮಾ ಸೇರಿದಂತೆ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net