ಯರಿಯೂರು ಘಟನೆ ತನಿಖೆಗೆ ಒತ್ತಾಯ

ಎಂ.ಕೃಷ್ಣಮೂರ್ತಿ
ಎಂ.ಕೃಷ್ಣಮೂರ್ತಿ
Published on

ಪ್ರಮುಖ ಮುಖ್ಯಾಂಶಗಳು

  • ಸುದ್ದಿಗೋಷ್ಠಿಯಲ್ಲಿ ಬಿಎಸ್ಪಿ ರಾಜ್ಯಾಧ್ಯಕ್ಷ ಎಂ.ಕೃಷ್ಣಮೂರ್ತಿ ಆಗ್ರಹ
  • ಯರಿಯೂರು ಗ್ರಾಮದಲ್ಲಿ ಉಂಟಾಗಿದ್ದ ವಿವಾದ
ಚಾಮರಾಜನಗರ: ಯಳಂದೂರು ತಾಲೂಕಿನ ಯರಿಯೂರು ಗ್ರಾಮದಲ್ಲಿ ಉಂಟಾಗಿದ್ದ ವಿವಾದವನ್ನು ಸಮಗ್ರ ತನಿಖೆ ಮಾಡಬೇಕೆಂದು ಬಹುಜನ ಸಮಾಜ ಪಕ್ಷದ ಅಧ್ಯಕ್ಷ ಎಂ.ಕೃಷ್ಣಮೂರ್ತಿ ಆಗ್ರಹಿಸಿದರು.
ಯರಿಯೂರು ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಹೆಬ್ಬಾಗಿಲು ಅಳವಡಿಕೆಗೆ ಗ್ರಾಮ ಪಂಚಾಯಿತಿ ವತಿಯಿಂದ ಏ.16ರಂದು ಅಂಬೇಡ್ಕರ್ ಯುವಕರ ಸಂಘವು ಅನುಮತಿ ಪಡೆದು ಏ.19ರಂದು ಕಮಾನು ಅಳವಡಿಸಿದೆ. ಈ ವೇಳೆ ಪೊಲೀಸರು ಏಕಾಏಕಿ ಆಗಮಿಸಿ ಅನುಮತಿ ರದ್ದಾಗಿದೆ ಎಂದು ತಿಳಿಸಿ ಕಮಾನು ಅಳವಡಿಸಲು ತಡೆದಿದ್ದಾರೆ. ಇದರಿಂದ ಪೊಲೀಸರು ಮತ್ತು ಗ್ರಾಮಸ್ಥರ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ನಂತರ ಪೊಲೀಸರ ಸಮ್ಮುಖದಲ್ಲಿ ಕಮಾನು ಅಳವಡಿಕೆ ಕಾರ್ಯ ನಡೆದಿದ್ದು, ಈ ಘಟನೆ ಕುರಿತು ಸೂಕ್ತ ತನಿಖೆ ನಡೆಸಬೇಕೆಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಅಂಬೇಡ್ಕರ್ ಅವರ ಕಮಾನು ಅಳವಡಿಸುವ ಕುರಿತು ಗ್ರಾಮ ಪಂಚಾಯಿತಿ ಪಿಡಿಒ ರದ್ದು ಮಾಡಿರುವ ಆದೇಶವನ್ನು ಯುವಕರ ಸಂಘಕ್ಕೆ ತಿಳಿಸಿಲ್ಲ. ಏಕಾಏಕಿ ರದ್ದು ಮಾಡಿರುವ ಪತ್ರವನ್ನು ಪೊಲೀಸರು ತೆಗೆದುಕೊಂಡುಬಂದು ಕಮಾನು ಅಳವಡಿಸುವುದನ್ನು ತಡೆಯಲು ಯತ್ನಿಸಿರುವುದು ಸರಿಯಲ್ಲ. ಘಟನೆ ಸಂಬಂಧ ಪೊಲೀಸರು ಮತ್ತು ಪಿಡಿಒ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಹೇಳಿದರು.
ಗೋಷ್ಠಿಯಲ್ಲಿ ಬಿಎಸ್ಪಿ ರಾಜ್ಯ ಕಾರ್ಯದರ್ಶಿ ಎನ್.ನಾಗಯ್ಯ, ರಾಜ್ಯ ಕಾರ್ಯಕಾರಣಿ ಸಮಿತಿ ಸದಸ್ಯ ಬ್ಯಾಡಮೂಡ್ಲು ಬಸವಣ್ಣ, ಜಿಲ್ಲಾಧ್ಯಕ್ಷ ಬ.ಮ.ಕೃಷ್ಣಮೂರ್ತಿ, ಜಿಲ್ಲಾ ಉಸ್ತುವಾರಿ ಪುಟ್ಟಸ್ವಾಮಿ, ಮುಖಂಡ ರವಿಮೌರ್ಯ, ಚಂದ್ರಕಾಂತ್, ಮಲ್ಲಿಕ್ ಬಹುಜನ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net