ಪಟ್ಟಣದ ಪ್ರವಾಸಿ ಮಂದಿರದಲ್ಲಿ ಇತ್ತೀಚೆಗೆ ಸಂಸದರನ್ನು ಭೇಟಿ ಮಾಡಿದ ರೈತರು, ರಾಮಾಪುರ ಹೋಬಳಿಯ ಮಾರ್ಟಳ್ಳಿ ಪಂಚಾಯಿತಿ, ಹೊಸೂರು, ಮಲೆ ಮಾದೇಶ್ವರ ಬೆಟ್ಟ, ರಾಮಪುರ ಪಂಚಾಯಿತಿ ವ್ಯಾಪ್ತಿಗಳಲ್ಲಿ 22 ವರ್ಷಗಳಿಂದ ಸರಿಯಾದ ಮಳೆ ಬೀಳದೆ ಅಂತರ್ಜಲ ಕುಸಿದಿದೆ. ಪರಿಣಾಮ ಸಾವಿರಾರು ರೈತರು ವ್ಯವಸಾಯ ಬಿಟ್ಟು ಗುಳೆಹೋಗಿದ್ದಾರೆ. ಗ್ರಾಮದಲ್ಲಿರುವ ನಾಗರಿಕರಿಗೆ ಶುದ್ಧ ಕುಡಿಯುವ ನೀರು ಸಿಗದೇ ಅನೇಕ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಸರ್ಕಾರ ರೈತರಿಗೆ ಸಾಗುವಳಿ ನೀಡಿ 55 ವರ್ಷ ಕಳೆದರೂ ಇನ್ನೂ ರೈತರಿಗೆ ಪೋಡಿ ಮಾಡಿ ಕೊಟ್ಟಿಲ್ಲ, ಕಾವೇರಿ ನದಿಯಿಂದ ದಂಟಳ್ಳಿ ಮಾರ್ಗವಾಗಿ ದಂಟಲ್ಲಿ ಏತ ನೀರಾವರಿ ಯೋಜನೆ ಕಲ್ಪಿಸುವಂತೆ ಹಾಗೂ ಇನ್ನಿತರ ಸಮಸ್ಯೆಗಳನ್ನು ಬಗೆಹರಿಸುವಂತೆ ಅನೇಕ ಬಾರಿ ಮುಖ್ಯ ಮಂತ್ರಿಗಳು, ಉಸ್ತುವಾರಿ ಸಚಿವರು, ಜಿಲ್ಲಾಡಳಿತ, ಶಾಸಕರ ಗಮನಕ್ಕೆ ತಂದರು ಸಮಸ್ಯೆ ಬಗೆಹರಿಸಲು ಕ್ರಮ ವಹಿಸಲಿಲ್ಲ.