ಬೆಂಬಲಿಸಿದ ಕಿಡಿಗೇಡಿಗಳ ವಿರುದ್ಧ ಕ್ರಮಕ್ಕೆ ಆಗ್ರಹ

ಚಾಮರಾಜನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಎಸ್ಸಿ/ಎಸ್ಟಿ ಕುಂದುಕೊರತೆ ಸಭೆಯಲ್ಲಿ ಮುಖಂಡರು ಭಾಗವಹಿಸಿದರು.
ಚಾಮರಾಜನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಎಸ್ಸಿ/ಎಸ್ಟಿ ಕುಂದುಕೊರತೆ ಸಭೆಯಲ್ಲಿ ಮುಖಂಡರು ಭಾಗವಹಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಸಾಮಾಜಿಕ ಜಾಲತಾಣದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‌ಗೆ ಅಪಮಾನ
  • ಗುಲಾಮರ ಅಪ್ಪ ಹೆಸರಿನ ಫೇಸ್‌ಬುಕ್ ಖಾತೆದಾರನ ಪೋಸ್ಟ್ ಶೇರ್ ಮಾಡಿದ್ದವರಿಗೆ ಶಿಕ್ಷೆ ವಿಧಿಸಲು ಒತ್ತಾಯ
ಚಾಮರಾಜನಗರ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಮಾಡುತ್ತಿದ್ದ ಕಿಡಿಗೇಡಿಯನ್ನು ಬೆಂಬಲಿಸುತ್ತಿದ್ದವರ ಮೇಲೂ ಕ್ರಮವಹಿಸಬೇಕೆಂಬ ಆಗ್ರಹ ಕೇಳಿಬಂತು.
ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಪರಿಶಿಷ್ಟ ಜಾತಿ ಮತ್ತು ಪಂಗಡದ ಮುಖಂಡರ ಕುಂದು-ಕೊರತೆ ಸಭೆಯಲ್ಲಿ ಮುಖಂಡ ಸಿ.ಕೆ.ಮಂಜುನಾಥ್ ಮಾತನಾಡಿ,
ಫೇಸ್‌ಬುಕ್‌ನಲ್ಲಿ ಅಂಬೇಡ್ಕರ್ ಅವರಿಗೆ ಅಪಮಾನ ಮಾಡುತ್ತಿದ್ದ ಗುಲಾಮರ ಅಪ್ಪ ಎಂಬ ಹೆಸರಿನ ಖಾತೆಯ ವಿರುದ್ಧ ಹೋರಾಟಗಾರ ಹೊಂಡರಬಾಳು ವಾಸು ರಾಜ್ಯದಲ್ಲೇ ಮೊದಲ ಬಾರಿಗೆ ಚಾಮರಾಜನಗರದಲ್ಲಿ ದೂರು ದಾಖಲಿಸಿದರು. ಆದರೆ ಆರೋಪಿಯನ್ನು ಬೇರೆ ಕಡೆ ಬಂಧಿಸಲಾಯಿತು. ಇನ್ನೂ ಜಿಲ್ಲೆಯ ಪೊಲೀಸರು ವಶಕ್ಕೆ ಪಡೆಯದೆ ಇರುವುದಕ್ಕೆ ಬೇಸರ ವ್ಯಕ್ತಪಡಿಸಿದರು. ಈ ಖಾತೆಯ ಬರಹಗಳನ್ನು ಜಿಲ್ಲೆಯಲ್ಲೂ ಕೆಲವರು ಬೆಂಬಲಿಸಿದ್ದಾರೆ. ಈ ರೀತಿ ಮಾಡುವುದರಿಂದ ಸಮಾಜದ ಸ್ವಾಸ್ಥ್ಯ ಹಾಳಾಗುತ್ತದೆ. ಇವರ ವಿರುದ್ಧ ಕ್ರಮ ಕೈಗೊಳ್ಳಲು ಒತ್ತಾಯಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಮುತ್ತುರಾಜ್ ಮಾತನಾಡಿ, ಆತನ ವಿರುದ್ಧ ರಾಜ್ಯದ ಹಲವು ಜಿಲ್ಲೆಗಳಲ್ಲಿ ದೂರು ದಾಖಲಾಗಿದೆ. ನಾವು ಸಹ ಬಾಡಿ ವಾರೆಂಟ್ ಕಳುಹಿಸಿದ್ದೇವೆ. ನಮ್ಮ ಸರದಿ ಬಂದ ಮೇಲೆ ವಶಕ್ಕೆ ಪಡೆದುಕೊಳ್ಳುತ್ತೇವೆ. ಜಿಲ್ಲೆಯಲ್ಲಿ 40 ಜನರು ಬೆಂಬಲ ವ್ಯಕ್ತಪಡಿಸಿದ್ದು, ಕಾನೂನು ಸುವ್ಯವಸ್ಥೆಗೆ ಯಾರೇ ಧಕ್ಕೆ ತಂದರೂ ಮುಲಾಜಿಲ್ಲದೆ ಕ್ರಮ ವಹಿಸಲಾಗುವುದು ಎಂದು ಹೇಳಿದರು. ಮುಖಂಡ ಉಮೇಶ್ ಕುದರ್ ಮಾತನಾಡಿ, ಸಚಿವರಾದ ಪ್ರಿಯಾಂಕ್ ಖರ್ಗೆಗೆ ಬೆದರಿಕೆ ಹಾಕಿದ ಆರೋಪಿಯನ್ನು ಬೇಗ ಬಂಧಿಸಲಾಗುತ್ತದೆ. ಆದರೆ ಅಂಬೇಡ್ಕರ್‌ಗೆ ಅವಹೇಳನ ಮಾಡಿದ ಆರೋಪಿ ಬಂಧನ ಮಾತ್ರ ತಡವಾಗಿದ್ದು ಏಕೆ ಎಂದು ಪ್ರಶ್ನಿಸಿದರು. ಮುಖಂಡ ಸಂಘಸೇನಾ ಮಾತನಾಡಿ, ಸಾಮಾಜಿಕ ಜಾಲತಾಣದಲ್ಲಿ ಅಂಬೇಡ್ಕರ್‌ಗೆ ಅಪಮಾನ ಮಾಡುವ ಕೃತ್ಯದ ಹಿಂದೆ ಮನುವಾದಿ ಸಂಘಟನೆಯ ಕೈವಾಡವಿದೆ. ಈ ಹಿನ್ನೆಲೆಯಲ್ಲಿ ಆರೋಪಿಯನ್ನು ಬಂಧಿಸಿದ ಬಳಿಕ ಮಂಪರು ಪರೀಕ್ಷೆ ಮಾಡಬೇಕೆಂದು ಒತ್ತಾಯಿಸಿದರು.
ಜ್ಯೋತಿಗೌಡನಪುರ ಪ್ರಕರಣದ ಆರೋಪಿಯೊಂದಿಗೆ ಉಳಿದವರನ್ನೂ ಬಂಧಿಸಬೇಕೆಂದು ಮುಖಂಡರು ಆಗ್ರಹಿಸಿದ ಹಿನ್ನೆಲೆಯಲ್ಲಿ ಎಸ್ಪಿ ಎಂ.ಮುತ್ತುರಾಜ್ ಪ್ರತಿಕ್ರಿಯಿಸಿ, ಎಎಸ್ಪಿ ತನಿಖೆ ಕೈಗೊಂಡಿದ್ದಾರೆ ಎಂದು ಮಾಹಿತಿ ನೀಡಿದರು. ಸಭೆಯಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳ ಎಸ್ಸಿ/ಎಸ್ಟಿ ಮುಖಂಡರು, ಎಎಸ್ಪಿ ಶಶಿಧರ್, ಡಿವೈಎಸ್ಪಿಗಳಾದ ಧಮೇಂದ್ರ, ಸ್ನೇಹರಾಜ್ ಇದ್ದರು.
ದೂರುಗಳ ಸುರಿಮಳೆ:
ನಗರದ ಹೋಟೇಲ್, ಬಟ್ಟೆ ಅಂಗಡಿ, ವಾಣಿಜ್ಯ ಮಳಿಗೆಗಳಲ್ಲಿ ಬಾಲ ಕಾರ್ಮಿಕರು ಕೆಲಸ ಮಾಡುತ್ತಿದ್ದರೆ ಪತ್ತೆ ಹಚ್ಚಬೇಕೆಂದು ಮುಖಂಡ ಜಿ.ಬಂಗಾರು ಒತ್ತಾಯಿಸಿದರು. ಸಭೆಯಲ್ಲಿ ಹಾಜರಿದ್ದ ಕಾರ್ಮಿಕ ಇಲಾಖೆಗೆ ಅಧಿಕಾರಿಗೆ ಬಾಲ ಕಾರ್ಮಿಕರ ಪತ್ತೆ ಕ್ರಮವಹಿಸಲು ಮೇಲಧಿಕಾರಿಗಳ ಗಮನಕ್ಕೆ ತನ್ನಿ ಎಂದು ಎಸ್ಪಿ ಎಂ.ಮುತ್ತುರಾಜ್ ನಿರ್ದೇಶನ ನೀಡಿದರು. ಮುಖಂಡ ಬೆಳ್ಳಿಯಪ್ಪ ಮಾತನಾಡಿ, ಹನೂರು ತಾಲೂಕಿನಲ್ಲಿ ದಲಿತ ಮಹಿಳೆಯನ್ನು ಕಂಬಕ್ಕೆ ಕಟ್ಟಿ ಹಲ್ಲೆ ನಡೆಸಿದ್ದು, ಇಂತಹ ಪ್ರಕರಣಗಳು ನಡೆಯದಂತೆ ಕಠಿಣ ಕ್ರಮವಹಿಸಬೇಕು. ಕುದೇರು ವ್ಯಾಪ್ತಿಯಲ್ಲಿ ಈಗಾಗಲೇ 03 ಮದ್ಯದಂಗಡಿಗಳು ಇದ್ದು, ಮತ್ತೊಂದು ಮದ್ಯದಂಗಡಿ ತೆರೆಯಲು ಅವಕಾಶ ನೀಡಲಾಗಿದೆ. ಇದರಿಂದ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ದಲಿತರ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಲೇ ಇದೆ ಎಂದು ಬೇಸರ ವ್ಯಕ್ತಪಡಿಸಿದರು.
ಇಲಾಖೆ ವಿರುದ್ಧ ಆಕ್ರೋಶ:
ಸಮಾಜ ಕಲ್ಯಾಣ ಇಲಾಖೆ ನಿಗದಿತವಾಗಿ ಎಸ್ಸಿ/ಎಸ್ಟಿ ಕುಂದುಕೊರತೆ ಸಭೆ ನಡೆಸುತ್ತಿಲ್ಲ ಎಂದು ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು. ಸಮಿತಿಗಳಲ್ಲಿ ಆಯ್ದ ಕೆಲವರನ್ನು ಮಾತ್ರ ಸೇರಿಸಿಕೊಂಡು ಸಭೆ ಮಾಡಲಾಗುತ್ತಿದೆ ಎಂದು ದಸಂಸ ನಾಯಕ ಶಿವಣ್ಣ ದೂರಿದರು. ಸುಳವಾಡಿ ಕಿಚ್ಚುಗುತ್ತಿ ಮಾರಮ್ಮನ ದೇವಸ್ಥಾನದ ವಿಷ ಪ್ರಸಾದ ಪ್ರಕರಣದ ಸಂತ್ರಸ್ತರಿಗೆ ನಿವೇಶನ ನೀಡದೆ ಇರುವುದಕ್ಕೆ ದೊಡ್ಡಿಂದುವಾಡಿ ಸಿದ್ದರಾಜು ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಮುನಿರಾಜು ಪ್ರತಿಕ್ರಿಯಿಸಿ, ಶೀಘ್ರದಲ್ಲೇ ಡಿಸಿ ಅಧ್ಯಕ್ಷತೆಯಲ್ಲಿ ಸಭೆ ಕರೆಯಾಗುವುದು. ಆಯ್ದ ಕೆಲವರು ಇರುವ ಸಮಿತಿ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿಯಾಗಿದೆ. ಈ ಸಮಿತಿಯಲ್ಲಿ 6 ಜನ ಎಸ್ಸಿ/ಎಸ್ಟಿ ಸದಸ್ಯರು ಇರುತ್ತಾರೆ. ಈ 6 ಜನರನ್ನು ನಾನು ವೈಯಕ್ತಿಕವಾಗಿ ಆಯ್ಕೆ ಮಾಡಿಲ್ಲ. ಸಭೆಯಲ್ಲಿ ಸದಸ್ಯರು ಸಮುದಾಯದ ಹಿತ ರಕ್ಷಣೆಗಾಗಿ ಮಾತನಾಡುತ್ತಿದ್ದಾರೆ. ಇನ್ನು ಸುಳವಾಡಿ ಸಂತ್ರಸ್ತರಲ್ಲಿ 10 ಜನ ಎಸ್ಸಿ/ಎಸ್ಟಿ ಸಮುದಾಯದವರಿದ್ದಾರೆ. ಇವರಲ್ಲಿ 6 ಜನರಿಗೆ ಉದ್ಯೋಗ ಕೊಡಿಸಲಾಗಿದೆ. ಉಳಿದ 4ರಿಗೆ ವಿವಿಧ ಕಾರಣಗಳಿಂದ ಉದ್ಯೋಗ ಸಿಕ್ಕಿರಲಿಲ್ಲ. ಈಗ ಇವರಿಗೂ ಕೆಲಸ ಕೊಡಬೇಕೆಂದು ಪತ್ರ ಬರೆದು ಕೋರಲಾಗಿದೆ. ನಿವೇಶನ ಕೊಡಿಸಲು ಕ್ರಮವಹಿಸಲಾಗಿದೆ ಎಂದು ಉತ್ತರಿಸಿದರು.
ಅನುದಾನ ಬಳಕೆ ವಿವರ ಕೊಡಿ:
ಮುಂದಿನ ಸಲ ಎಸ್ಸಿ/ಎಸ್ಟಿ ಕೊಂದು-ಕೊರತೆ ಸಭೆ ನಡೆಸಿದರೆ ಎಸ್‌ಇಪಿ/ ಟಿಎಸ್‌ಪಿ ಅನುದಾನ ಎಷ್ಟು ಬಳಕೆಯಾಗಿದೆ. ಮತ್ತು ಬಾಕಿ ಎಷ್ಟು ಉಳಿದಿದೆ ಎಂದು ವಿವರ ಕೊಡಿ ಎಂದು ಮುಖಂಡ ಹೊಂಡರಬಾಳು ವಾಸು ಒತ್ತಾಯಿಸಿದರು. ನಿಜ ಮಹಾತ್ಮ ಬಾಬಾ ಸಾಹೇಬ ನಾಟಕ ಪ್ರದರ್ಶನಕ್ಕೆ ನಾನು ಅಡ್ಡಿ ಪಡಿಸಿದ ಘಟನೆಯ ವರದಿ ತಯಾರಿಸುವಾಗ ನನ್ನಿಂದ ಮಾಹಿತಿ ಪಡೆದುಕೊಳ್ಳದೆ ಹೇಗೆ ವರದಿ ಮಾಡಿದ್ದೀರಾ ಎಂದು ಪೊಲೀಸರನ್ನು ಪ್ರಶ್ನಿಸಿದರು. ಎಸ್ಪಿ ಮುತ್ತುರಾಜ್ ಪ್ರತಿಕ್ರಿಯಿಸಿ, ಸಂಬಂಧಪಟ್ಟ ಪೊಲೀಸರು ಇವರಿಂದಲೂ ಮಾಹಿತಿ ಪಡೆದು ವರದಿ ಕೊಡಬೇಕಿತ್ತು ಎಂದು ತಿಳಿಸಿದರು. ಅಂಬೇಡ್ಕರ್ ಕುರಿತು ಅವಹೇಳಕಾರಿ ಪೋಸ್ಟ್ ಮಾಡುತ್ತಿದ್ದ ‘ಗುಲಾಮರ ಅಪ್ಪ’ ಫೇಸ್‌ಬುಕ್ ಖಾತೆ ವಿರುದ್ಧ ಪೊಲೀಸರು ಸುಮೋಟೊ ಕೇಸ್ ದಾಖಲು ಮಾಡುವ ಮೊದಲೇ ದೂರು ಕೊಟ್ಟಿದ್ದಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net