ಹನೂರು ತಾಲೂಕಿನಲ್ಲಿ ಡಿಸಿ ಗ್ರಾಮ ಸಂಚಾರ

ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ವ್ಯಾಪ್ತಿಯ ಕೀರನಹೊಳೆ ಗ್ರಾಮದಲ್ಲಿರುವ ಲಂಟಾನ ಕೈಗಾರಿಕಾ ಘಟಕಕ್ಕೆ ಡಿಸಿ ಶ್ರೀರೂಪಾ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ವ್ಯಾಪ್ತಿಯ ಕೀರನಹೊಳೆ ಗ್ರಾಮದಲ್ಲಿರುವ ಲಂಟಾನ ಕೈಗಾರಿಕಾ ಘಟಕಕ್ಕೆ ಡಿಸಿ ಶ್ರೀರೂಪಾ ಭೇಟಿ ನೀಡಿ ಪರಿಶೀಲನೆ ನಡೆಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ
ಚಾಮರಾಜನಗರ: ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ವ್ಯಾಪ್ತಿಯ ವಿವಿಧ ಗ್ರಾಮಗಳಿಗೆ ಬುಧವಾರ ಜಿಲ್ಲಾಧಿಕಾರಿ ಶ್ರೀರೂಪಾ ಭೇಟಿ ನೀಡಿ ಸ್ಥಳೀಯರ ಅಹವಾಲುಗಳನ್ನು ಆಲಿಸುವುದರ ಜತೆಗೆ ಮೂಲ ಸೌಲಭ್ಯಗಳನ್ನು ಖುದ್ದು ಪರಿಶೀಲಿಸಿದರು.
ತಾಲೂಕಿನ ತೊಕ್ಕರೆ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಕುಡಿಯುವ ನೀರು ಹಾಗೂ ಇನ್ನಿತರ ಮೂಲ ಸೌಲಭ್ಯಗಳ ಕುರಿತು ಚರ್ಚಿಸಿದರು. ಇದೇ ಗ್ರಾಮದಲ್ಲಿದ್ದ ಅಂಗನವಾಡಿ ಕೇಂದ್ರವನ್ನು ವೀಕ್ಷಣೆ ಮಾಡಿದರು. ಬಳಿಕ, ದೊಡ್ಡಾಣೆ ಗ್ರಾಮದ ಶಾಲೆಯಲ್ಲಿ ಸಭೆ ನಡೆಸಿ ಕುಡಿಯುವ ನೀರು, ರಸ್ತೆ, ವಿದ್ಯುತ್, ಇನ್ನಿತರ ಮೂಲಸೌಕರ್ಯಗಳ ಬಗ್ಗೆ ಅಧಿಕಾರಿಗಳ ಜತೆ ಚರ್ಚಿಸಿದರು. ಆರ್‌ಟಿಸಿ, ಆಧಾರ್, ಇನ್ನಿತರ ಸೌಲಭ್ಯಗಳನ್ನು ಒದಗಿಸಬೇಕು. ಸ್ಥಳೀಯ ಸಮಸ್ಯೆಗಳನ್ನು ಶೀಘ್ರ ಪರಿಹರಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ವೇಳೆ ವಿದ್ಯಾರ್ಥಿಗಳು ಶಾಲೆ ತೊರೆಯಬಾರದು. ಶಿಕ್ಷಣದ ಮಹತ್ವ ಅರಿತು ವಿದ್ಯಾಭ್ಯಾಸದ ಕಡೆ ಹೆಚ್ಚು ಗಮನ ಹರಿಸಬೇಕು ಎಂದು ಕಿವಿಮಾತು ಹೇಳಿದರು.
ನಂತರ ಮಲೆ ಮಹದೇಶ್ವರ ಬೆಟ್ಟ ಪ್ರದೇಶದಲ್ಲಿರುವ ಅಕ್ಕ ಕೆಫೆಗೆ ಭೇಟಿ ನೀಡಿ ಎನ್‌ಆರ್‌ಎಲ್‌ಎಂ ಯೋಜನೆಯಡಿ ನಡೆದಿರುವ ಕಾಮಗಾರಿ ಪರಿಶೀಲಿಸಿದರು. ಬಳಿಕ ಮಲೆ ಮಹದೇಶ್ವರ ಬೆಟ್ಟದಲ್ಲಿ ಮೈರಾಡ ವತಿಯಿಂದ ಸ್ಥಾಪಿಸಲಾಗಿರುವ ಒಣ ಕಸ ಘಟಕವನ್ನು ಉದ್ಘಾಟಿಸಿದರು. ಎಸ್‌ವಿವೈಎಂ ಸಂಸ್ಥೆಗಳು, ಗ್ರಾಮಸ್ಥರು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಸ್ಥಳೀಯ ಸಮಸ್ಯೆಗಳು ಮತ್ತು ಅಭಿವೃದ್ಧಿ ಕಾರ್ಯಗಳ ಕುರಿತು ಚರ್ಚಿಸಿದರು.
ಕೀರನಹೊಳೆ ಗ್ರಾಮದಲ್ಲಿರುವ ಲಂಟಾನ ಕೈಗಾರಿಕಾ ಘಟಕಕ್ಕೆ ಭೇಟಿ ನೀಡಿ ಅಲ್ಲಿ ತಯಾರು ಮಾಡಲಾಗಿರುವ ಕರಕುಶಲ ವಸ್ತುಗಳು, ಪೀಠೋಪಕರಣಗಳನ್ನು ವೀಕ್ಷಿಸಿದರು. ಕರಕುಶಲಗಾರರೊಂದಿಗೆ ಕಚ್ಚಾ ವಸ್ತುಗಳ ಲಭ್ಯತೆ ಹಾಗೂ ಮಾರುಕಟ್ಟೆ ವ್ಯವಸ್ಥೆ ಕುರಿತು ಸಮಾಲೋಚಿಸಿದರು. ಈ ಮೂಲಕ ಉತ್ಪನ್ನಗಳ ತಯಾರಿ ಸಂಬಂಧ ಪ್ರೋತ್ಸಾಹ ನೀಡಿದರು.
ಈ ಸಂದರ್ಭದಲ್ಲಿ ಮಲೆ ಮಹದೇಶ್ವರಸ್ವಾಮಿ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ರಘು ಇನ್ನಿತರ ಅಧಿಕಾರಿಗಳು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net