ಪ್ರತಿಭಟನಾನಿರತ ರೈತರ ಮನವೊಲಿಕೆಗೆ ಡಿಸಿ ಯತ್ನ

ವಡಕೆಹಳ್ಳದಲ್ಲಿ ರೈತರು ನಡೆಸುತ್ತಿರುವ ಅಹೋರಾತ್ರಿ ಧರಣಿ ಸ್ಥಳಕ್ಕೆ ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್ ಅವರು ತೆರಳಿ ಸಮಸ್ಯೆ ಆಲಿಸಿದರು. ಕೆ.ಎನ್ ಚೈತ್ರಾ, ಅರ್ಪುದರಾಜ್, ಪೀಟರ್, ಸಗಾಯಮೇರಿ, ಸಂದನಾಮೇರಿ ಇತರರು ಇದ್ದರು.
ವಡಕೆಹಳ್ಳದಲ್ಲಿ ರೈತರು ನಡೆಸುತ್ತಿರುವ ಅಹೋರಾತ್ರಿ ಧರಣಿ ಸ್ಥಳಕ್ಕೆ ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್ ಅವರು ತೆರಳಿ ಸಮಸ್ಯೆ ಆಲಿಸಿದರು. ಕೆ.ಎನ್ ಚೈತ್ರಾ, ಅರ್ಪುದರಾಜ್, ಪೀಟರ್, ಸಗಾಯಮೇರಿ, ಸಂದನಾಮೇರಿ ಇತರರು ಇದ್ದರು.
Published on
ಹನೂರು: ಏತ ನೀರಾವರಿ ಯೋಜನೆಯನ್ನು ರೂಪಿಸುವಂತೆ ಆಗ್ರಹಿಸಿ ತಾಲೂಕಿನ ವಡಕೆಹಳ್ಳದಲ್ಲಿ ಕಳೆದ 39 ದಿನಗಳಿಂದ ರೈತರು ಅಹೋರಾತ್ರಿ ಧರಣಿ ಕೈಗೊಂಡಿರುವ ಸ್ಥಳಕ್ಕೆ ಗುರುವಾರ ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್ ಅವರು ಭೇಟಿ ನೀಡಿ ಸಮಸ್ಯೆ ಆಲಿಸಿ ಅಗತ್ಯ ಭರವಸೆ ನೀಡಿದರೂ ಧರಣಿ ನಿರತರು ಪಟ್ಟುಬಿಡದೆ ಪ್ರತಿಭಟನೆ ಮುಂದುವರಿಸಿದ್ದಾರೆ.
ರೈತ ಸಂಘ ಹಾಗೂ ದಂಟಳ್ಳಿ ಏತ ನೀರಾವರಿ ಹೋರಾಟ ಸಮಿತಿ ವತಿಯಿಂದ ರೈತರು ಕಳೆದ 39 ದಿನಗಳಿಂದ ಅಹೋರಾತ್ರಿ ಧರಣಿಯನ್ನು ನಡೆಸುತ್ತಿದ್ದು, ಇದಕ್ಕೆ ಮಹಿಳೆಯರು, ಯುವಕರು, ಮಹಿಳೆಯರು ಹಾಗೂ ಚರ್ಚ್ ಪಾದ್ರಿಗಳು ಹೆಚ್ಚಿನ ರೀತಿಯಲ್ಲಿ ಬೆಂಬಲ ವ್ಯಕ್ತಪಡಿಸಿದ್ದಾರೆ. ಆರಂಭದಲ್ಲಿ ಸ್ಥಳಕ್ಕೆ ಶಾಸಕ ಎಂ.ಆರ್.ಮಂಜುನಾಥ್ ಅವರು ಭೇಟಿ ನೀಡಿ ಅಗತ್ಯ ಭರವಸೆ ನೀಡಿದ್ದರು. ತಹಸೀಲ್ದಾರ್ ಕೆ.ಎನ್.ಚೈತ್ರಾ ಅವರು 2 ಬಾರಿ ಭೇಟಿ ನೀಡಿ ಸಮಸ್ಯೆ ಆಲಿಸಿದರು. ಆದರೆ ಬೇಡಿಕೆ ಬಗೆಹರಿಯದ ಹಿನ್ನೆಲೆಯಲ್ಲಿ ರೈತರು ಧರಣಿ ಮುಂದುವರಿಸಿದ್ದರು.
ಗುರುವಾರ ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್ ಅವರು ಸ್ಥಳಕ್ಕೆ ತೆರಳಿ ರೈತರಿಂದ ಸಮಸ್ಯೆಯನ್ನು ಆಲಿಸಿದರು. ಈ ವೇಳೆ ನೀರಾವರಿ ಯೋಜನೆಗಾಗಿ ಡಿಪಿಆರ್ ಸಿದ್ಧವಾಗುತ್ತಿದೆ. ಇದು ದೊಡ್ಡ ಮಟ್ಟದಲ್ಲಿ ಆಗಬೇಕಿರುವ ಕೆಲಸವಾದ್ದರಿಂದ ಜ.15ರೊಳಗೆ ಕಾಲಾವಕಾಶ ಅಗತ್ಯವಿದೆ. ಆದ್ದರಿಂದ ಈ ಬಗ್ಗೆ ಎಲ್ಲರೂ ಮನದಟ್ಟು ಮಾಡಿಕೊಂಡು ಧರಣಿ ಕೈ ಬಿಡುವಂತೆ ಮನವಿ ಮಾಡಿದರು. ಈ ವೇಳೆ ರೈತ ಸಂಘದ ಮಾರ್ಟಳ್ಳಿ ಗ್ರಾಮ ಘಟಕದ ಅಧ್ಯಕ್ಷ ಅರ್ಪುದರಾಜ್ ಮಾತನಾಡಿ, ಈಗಾಗಲೇ ಕಳೆದ 39 ದಿನಗಳಿಂದ ಧರಣಿ ನಡೆಸುತ್ತಿದ್ದೇವೆ. ಆದ್ದರಿಂದ ಡಿಪಿಆರ್ ಆಗುವವರೆಗೂ ಪ್ರತಿಭಟನೆ ಕೈ ಬಿಡುವುದಿಲ್ಲ. ಸದ್ಯ ಡಿಪಿಆರ್ ಯಾವ ಹಂತದಲ್ಲಿದೆ ಎಂಬುದರ ಬಗ್ಗೆ ಮಾಹಿತಿ ತಿಳಿಸುವಂತೆ ಮನವಿ ಮಾಡಿದರು. ಜಿಲ್ಲಾಧಿಕಾರಿ ಅವರು ಈ ಬಗ್ಗೆ ಶುಕ್ರವಾರ ಸಭೆ ಕರೆದು ಮಾಹಿತಿ ತಿಳಿಸುವುದಾಗಿ ಹೇಳಿದರು. ಧರಣಿ ಮುಂದುವರಿದಿದೆ.
ತಹಸೀಲ್ದಾರ್ ಕೆ.ಎನ್.ಚೈತ್ರಾ, ರೈತ ಮುಖಂಡರಾದ ಮೋಳೆ ರಾಜು, ಲೂರ್ದುಸ್ವಾಮಿ, ಪುಟ್ಟಸ್ವಾಮಿ, ಪೀಟರ್, ಸೂಸೈ ಮಾಣಿಕ್ಯಂ, ಪೌಲ್ ಧರ್ಮರಾಜ್, ಸಗಾಯಮೇರಿ, ಸಂದನಮೇರಿ ಹಾಗೂ ಇನ್ನಿತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net