ಎಸ್.ಐ.ಆರ್. ಪ್ರಕ್ರಿಯೆ ಪರಿಶೀಲಿಸಿದ ಡಿಸಿ

ಗುಂಡ್ಲುಪೇಟೆಗೆ ಬುಧವಾರ ಶ್ರೀರೂಪಾ ಭೇಟಿ ನೀಡಿ ಎಸ್‌ಐಆರ್ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು. ಅಧಿಕಾರಿಗಳು ಹಾಜರಿದ್ದರು.
ಗುಂಡ್ಲುಪೇಟೆಗೆ ಬುಧವಾರ ಶ್ರೀರೂಪಾ ಭೇಟಿ ನೀಡಿ ಎಸ್‌ಐಆರ್ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು. ಅಧಿಕಾರಿಗಳು ಹಾಜರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜಿಲ್ಲೆಯ ವಿವಿಧ ಕಡೆಗಳಿಗೆ ಭೇಟಿ ನೀಡಿದ ಶ್ರೀರೂಪಾ
  • ಸಾರ್ವಜನಿಕರಿಗೆ ಗೊಂದಲಗಳಿದ್ದರೆ ಪರಿಹರಿಸಿಕೊಳ್ಳಲು ಸಲಹೆ
ಚಾಮರಾಜನಗರ: ಭಾರತ ಚುನಾವಣಾ ಆಯೋಗದ ನಿರ್ದೇಶಾನುಸಾರ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್.ಐ.ಆರ್) ಪ್ರಕ್ರಿಯೆಯನ್ನು ಜಿಲ್ಲಾಧಿಕಾರಿ ಶ್ರೀರೂಪಾ ಬುಧವಾರ ಜಿಲ್ಲೆಯ ವಿವಿಧೆಡೆ ಭೇಟಿ ನೀಡಿ ಪರಿಶೀಲಿಸಿದರು.
ಚಾಮರಾಜನಗರ ತಾಲೂಕಿನ ಉಡಿಗಾಲ, ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ, ತ್ರಿಯಂಭಕಪುರ, ಕಗ್ಗಳ, ಗುಂಡ್ಲುಪೇಟೆ ಪಟ್ಟಣದ ವಿವಿಧ ವಾರ್ಡ್‌ಗಳಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿಯವರು ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣಾ ಪ್ರಕ್ರಿಯೆ ಕಾರ್ಯವನ್ನು ಖುದ್ದು ವೀಕ್ಷಿಸಿದರು.
ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆ ಕಾರ್ಯದಲ್ಲಿ ನಿರತರಾಗಿರುವ ಬಿಎಲ್‌ಒಗಳಿಂದ (ಬೂತ್ ಮಟ್ಟದ ಅಧಿಕಾರಿ) ವಿವರ ಮಾಹಿತಿ ಪಡೆದುಕೊಂಡರು. ಬೂತ್ ಮಟ್ಟದ ಅಧಿಕಾರಿಗಳೊಂದಿಗೆ ಮತದಾರರ ಮನೆ ಮನೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಶ್ರೀರೂಪಾ ಗಣತಿ ನಮೂನೆ (ಎನ್ಯೂಮರೇಷನ್ ಫಾರಂ) ಅನ್ನು ವಿತರಿಸಿದರು. ಫಾರಂ ಅನ್ನು ಭರ್ತಿ ಮಾಡಿ ಸಹಿ ಹಾಕಿದ ಬಳಿಕ ಮನೆಗೆ ಭೇಟಿ ನೀಡುವ ಬೂತ್ ಮಟ್ಟದ ಅಧಿಕಾರಿಗಳಿಗೆ ನೀಡಬೇಕು ಎಂದು ತಿಳಿಸಿದರು.
ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯವು ಅತ್ಯಂತ ಮಹತ್ವದ್ದಾಗಿದೆ. ಮತದಾನದಿಂದ ಯಾರೂ ವಂಚಿತರಾಗಬಾರದು. ಈ ನಿಟ್ಟಿನಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಗೆ ಎಲ್ಲರೂ ಸಹಕರಿಸಬೇಕು. ಪರಿಷ್ಕರಣೆ ಸಂಬಂಧ ಯಾವುದೇ ಗೊಂದಲಗಳಿದ್ದರೂ ಮತಗಟ್ಟೆ ಮಟ್ಟದ ಅಧಿಕಾರಿಗಳು, ಮೇಲ್ವಿಚಾರಕರು, ಮತದಾರರ ನೋಂದಣಾಧಿಕಾರಿ, ಸಹಾಯಕ ನೋಂದಣಾಧಿಕಾರಿಗಳನ್ನು ಸಂಪರ್ಕಿಸಿ ಪರಿಹರಿಸಿಕೊಳ್ಳಬೇಕು ಎಂದು ಮತದಾರರಿಗೆ ಮನವರಿಕೆ ಮಾಡಿಕೊಟ್ಟರು.
ಮತಗಟ್ಟೆ ಮಟ್ಟದ ಅಧಿಕಾರಿಗಳಿಗೆ ಪರಿಷ್ಕರಣೆ ಕಾರ್ಯ ಸಂಬಂಧ ವಿವರ ಪಡೆದುಕೊಳ್ಳುವ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಶ್ರೀರೂಪಾ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯನ್ನು ಅತ್ಯಂತ ಜವಾಬ್ದಾರಿಯುತವಾಗಿ ನಿರ್ವಹಿಸಬೇಕು. ಮತದಾರರಿಂದ ಗಣತಿ ನಮೂನೆ (ಎನ್ಯೂಮರೇಷನ್ ಫಾರಂ) ಯನ್ನು ಸ್ವೀಕರಿಸಿದ ಬಳಿಕ ಡಿಜಟಲೀಕರಣ ಮಾಡಬೇಕೆಂದು ಸೂಚಿಸಿದರು. ಮತದಾರರ ನೋಂದಣಾಧಿಕಾರಿಗಳು ಹಾಗೂ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳಾದ ವಿಶ್ವನಾಥ್, ಸಹಾಯಕ ಮತದಾರರ ನೋಂದಣಾಧಿಕಾರಿಗಳು ಹಾಗೂ ತಹಶೀಲ್ದಾರರಾದ ಗಿರಿಜಾ, ತನ್ಮಯ್, ಇತರೆ ಅಧಿಕಾರಿಗಳು ಈ ಸಂದರ್ಭದಲ್ಲಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net