ಬೆಂಡರವಾಡಿ ಕ್ರಾಸ್‌ನಲ್ಲಿ ‘ಅಪಾಯ’

ಚಾಮರಾಜನಗರ ತಾಲೂಕಿನ ಬೆಂಡರವಾಡಿ ಗ್ರಾಮದ ಮುಖ್ಯರಸ್ತೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್-ಲಾರಿ ನಡುವೆ ಮಂಗಳವಾರ ಅಪಘಾತ ನಡೆದ ಸ್ಥಳ
ಚಾಮರಾಜನಗರ ತಾಲೂಕಿನ ಬೆಂಡರವಾಡಿ ಗ್ರಾಮದ ಮುಖ್ಯರಸ್ತೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್-ಲಾರಿ ನಡುವೆ ಮಂಗಳವಾರ ಅಪಘಾತ ನಡೆದ ಸ್ಥಳ
Published on

ಪ್ರಮುಖ ಮುಖ್ಯಾಂಶಗಳು

  • ಕೆಎಸ್‌ಆರ್‌ಟಿಸಿ ಬಸ್-ಲಾರಿ ನಡುವೆ ಅಪಘಾತ ನಡೆದ ಸ್ಥಳ
  • ಪ್ರಾಣಕ್ಕೆ ಸಂಚಕಾರ ತರುವ ಕೆರೆ ಏರಿ ಮೇಲಿನ ರಸ್ತೆಯ ತಿರುವು
ಚಾಮರಾಜನಗರ: ತಾಲೂಕಿನ ಬೆಂಡರವಾಡಿ ಗ್ರಾಮದ ಮೂಲಕ ಹಾದು ಹೋಗಿರುವ ಹೆದ್ದಾರಿ ಅಪಘಾತ ವಲಯವಾಗಿ ಮಾರ್ಪಟ್ಟು ಸ್ಥಳೀಯರು, ವಾಹನ ಸವಾರರಿಗೆ ಪ್ರಾಣಭಯ ಹುಟ್ಟಿಸಿದೆ.
ಮಂಗಳವಾರ ರಾತ್ರಿ ಕೆಎಸ್‌ಆರ್‌ಟಿಸಿ ಬಸ್-ಲಾರಿ ನಡುವೆ ನಡೆದ ಭೀಕರ ಅಪಘಾತದ ಸ್ಥಳ ಬಲಿಗಾಗಿಯೇ ಕಾದುಕುಳಿತಂತಿದೆ. ಕೆರೆ ಏರಿಯ ಮೇಲಿನ ರಸ್ತೆ ನೋಡಲು ತುಂಬಾ ಸುಂದರವಾಗಿದೆ. ಆದರೆ ಕೊಂಚ ಮೈ ಮರೆತರೂ ಅಪಘಾತ ಸಂಭವಿಸಿಬಿಡುತ್ತದೆ.
ನಂಜನಗೂಡಿನ ಕಡೆಯಿಂದ ಚಾಮರಾಜನಗರದ ಕಡೆಗೆ ಹೋಗುವಾಗ ಸಿಗುವ ತಿರುವು ಅಪಘಾತಕ್ಕೆ ಆಹ್ವಾನ ನೀಡುತ್ತಿದೆ. ಸಮತಟ್ಟಾಗಿ ವೇಗದ ಚಾಲನೆಗೆ ಉತ್ತೇಜನ ನೀಡುವಂತಿರುವ ರಸ್ತೆಯಲ್ಲಿ ಧುತ್ತನೆ ಸಿಗುವ ತಿರುವಿನಲ್ಲಿ ವಾಹನಗಳನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಸಾಧ್ಯವಾಗುವುದೇ ಇಲ್ಲ. ಆಗ ರಸ್ತೆಯ ಒಂದು ಪಥದಲ್ಲೇ(ಎಡಗಡೆ) ಸಾಗಬೇಕಾದ ವಾಹನ ಮತ್ತೊಂದು ಪಥದತ್ತ (ಬಲಗಡೆ) ನುಗ್ಗುತ್ತದೆ. ಅತಿ ವೇಗದಲ್ಲಿದ್ದಾಗ ವಾಹನ ನಿಯಂತ್ರಣಕ್ಕೆ ಬರುವುದಿಲ್ಲ. ತಕ್ಷಣ ಚಾಮರಾಜನಗರದ ಕಡೆಯಿಂದ ನಂಜನಗೂಡಿನ ಕಡೆಗೆ ಹೋಗುತ್ತಿರುವ ವಾಹನ ಎದುರು ಬಂದರೆ ಮುಖಾಮುಖಿ ಡಿಕ್ಕಿ ಹೊಡೆಯುತ್ತದೆ. ಇಲ್ಲದಿದ್ದರೆ ಕೆರೆ ಬದಿಗೆ ವಾಹನ ಪಲ್ಟಿ ಹೊಡೆಯಲೂಬಹುದು.
ಈ ರಸ್ತೆಯಲ್ಲಿ ಬೆಂಡರವಾಡಿ ಗ್ರಾಮಕ್ಕೆ ಹೋಗುವ ದಾರಿಯೂ ಸೇರಿಕೊಂಡಿದೆ. ಹಾಗಾಗಿ ಇದು ಮೂರು(ಚಾ.ನಗರ-ನಂಜನಗೂಡು-ಬೆಂಡರವಾಡಿ) ದಾರಿಗಳು ಸೇರುವ ವೃತ್ತವಾಗಿದೆ. ಜತೆಗೆ ಕೆರೆ ಏರಿಯ ರಸ್ತೆ. ಇಲ್ಲಿ ಗ್ರಾಮಸ್ಥರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಓಡಾಡುತ್ತಿರುವಾಗ ಅಪಘಾತ ಸಂಭವಿಸಿ ಬಿಟ್ಟರೆ ದೊಡ್ಡ ಅನಾಹುತವೇ ಆಗಿಬಿಡುತ್ತದೆ. ಮಂಗಳವಾರ ರಾತ್ರಿ ಸಂಭವಿಸಿದ ಕೆಎಸ್‌ಆರ್‌ಟಿಸಿ ಬಸ್ ಮತ್ತು ಲಾರಿ ನಡುವಿನ ಅಪಘಾತ ಬೆಳಗ್ಗೆ ಆಗಿದ್ದರೆ ರಸ್ತೆ ಬದಿ ಓಡಾಡುತ್ತಿದ್ದ ಗ್ರಾಮಸ್ಥರ ಜೀವಕ್ಕೂ ಕುತ್ತು ತಂದುಬಿಡುತ್ತಿತ್ತು ಎಂದು ಅಂದಾಜಿಸಬಹುದಾಗಿದೆ.
ತಕ್ಷಣ ಕ್ರಮದಿಂದ ಅಪಘಾತ ನಿಯಂತ್ರಣ: ಚಾ.ನಗರ-ನಂಜನಗೂಡು ಮಾರ್ಗದ ಬೆಂಡರವಾಡಿ ಮುಖ್ಯರಸ್ತೆಯ ತಿರುವಿನಲ್ಲಿ ಹಂಪ್ಸ್ ನಿರ್ಮಾಣ ಮಾಡಬೇಕಿದೆ. ಇದರಿಂದ ವಾಹನಗಳ ವೇಗಕ್ಕೆ ಕಡಿವಾಣ ಬೀಳುತ್ತದೆ. ಚಾ.ನಗರದ ಕಡೆಯಿಂದ ಬೆಂಡರವಾಡಿಗೆ ಬರುವ ರಸ್ತೆಯಲ್ಲಿ ಸಿಗುವ ತಿರುವಿನಲ್ಲಿ ಹಂಪ್ಸ್ ಹಾಕಲಾಗಿದೆ. ಅಪಾಯವಿರುವ ಸೂಚನಾ ಲಕವನ್ನೂ ಅಳವಡಿಸಲಾಗಿದೆ. ಇದೇ ರೀತಿ ನಂಜನಗೂಡಿನಿಂದ ಚಾ.ನಗರ ಕಡೆ ಬರುವಾಗ ಸಿಗುವ ಬೆಂಡರವಾಡಿ ರಸ್ತೆಯಲ್ಲೂ ಹಂಪ್ಸ್ ಮತ್ತು ಸೂಚನಾ ಲಕವನ್ನು ಅಳವಡಿಸಬೇಕಾಗಿದೆ. ಕೆರೆ ಪಕ್ಕದ ರಸ್ತೆ ಎನ್ನುವುದು ವಾಹನ ಸವಾರರಿಗೆ ಮನದಟ್ಟಾಗಬೇಕಾದರೆ ಮತ್ತೊಂದು ಸೂಚನಾ ಲಕವನ್ನು ಹಾಕಬೇಕು. ರಾತ್ರಿ ವೇಳೆ ಲೈಟ್ ವ್ಯವಸ್ಥೆ, ರೇಡಿಯಂ ಸ್ಟಿಕ್ಕರ್‌ಗಳನ್ನು ಅಳವಡಿಸಿದರೆ ಅಪಘಾತವನ್ನು ತಪ್ಪಿಸಬಹುದು. ಅಲ್ಲದೇ, ಬೆಂಡರವಾಡಿ ಗ್ರಾಮಕ್ಕೂ ಈ ಮಾರ್ಗದಲ್ಲೇ ಹೋಗಬೇಕಾಗಿರುವುದರಿಂದ ಬ್ಯಾರಿಗೇಟ್ ಹಾಕಿದರೆ ಸುರಕ್ಷತೆ ಒದಗಿಸಿಕೊಟ್ಟಂತಾಗುತ್ತದೆ.
ಡಬಲ್ ರೋಡ್ ಆಗಲಿ..:
ಬೆಂಡರವಾಡಿ ಮುಖ್ಯರಸ್ತೆ ಜಿಲ್ಲಾಕೇಂದ್ರ ಚಾ.ನಗರದ ಮುಖ್ಯರಸ್ತೆಯಾಗಿದೆ. ಇಲ್ಲಿಂದ ಮೈಸೂರಿಗೆ ಪ್ರತಿದಿನ ಸಾವಿರಾರು ವಾಹನಗಳು ಸಂಚರಿಸುತ್ತವೆ. ಅಲ್ಲಿಂದ ಬರುವ ವಾಹನಗಳ ಸಂಖ್ಯೆಯೂ ಅಧಿಕವಿದೆ. ಉದ್ಯೋಗ ಸೃಷ್ಟಿಯಲ್ಲಿ ಚಾ.ನಗರ ಹಿಂದುಳಿದಿದೆ. ಚಾ.ನಗರದ ಬಹುತೇಕರು ಮೈಸೂರಿನಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ಇನ್ನು ಮೈಸೂರಿನಲ್ಲಿ ಮನೆ ಮಾಡಿಕೊಂಡು ಚಾ.ನಗರದಲ್ಲಿ ಕೆಲಸಕ್ಕೆ ಬಂದು ಹೋಗುವವರ ಸಂಖ್ಯೆಯೂ ಕಡಿಮೆ ಇಲ್ಲ. ಇದರಲ್ಲಿ ಸರ್ಕಾರಿ ಅಧಿಕಾರಿಗಳೂ ಸೇರಿಕೊಂಡಿದ್ದಾರೆ. ಎರಡೂ ಜಿಲ್ಲೆಗಳಿಗೆ ದಿನನಿತ್ಯ ಓಡಾಡುವವರಿಗೆ ಸಾರಿಗೆ ಬಸ್‌ಗಳೇ ಸಾರಥಿಗಳಾಗಿವೆ. ಬೆಂಡರವಾಡಿ ರಸ್ತೆಯಲ್ಲಿರುವ ಅಪಘಾತ ವಲಯದಲ್ಲಿ ಯಾಮಾರಿದರೆ ಜೀವ ಹಾನಿ ಸಂಭವಿಸಿಬಿಡುತ್ತದೆ. ಹಾಗಾಗಿ ಚಾ.ನಗರ-ಮೈಸೂರು ಮುಖ್ಯರಸ್ತೆಯನ್ನು ದ್ವಿಪಥ ಮಾಡಲೇಬೇಕಾದ ಅಗತ್ಯವಿದೆ.
ಚಾ.ನಗರ-ಮೈಸೂರು ರಸ್ತೆಯಲ್ಲಿ ಓಡಾಡುವ ವಾಹನಗಳ ಸಂಖ್ಯೆ ಹೆಚ್ಚಾಗಿದೆ. ಬದನಗುಪ್ಪೆ-ಕೆಲ್ಲಂಬಳ್ಳಿ ಕೈಗಾರಿಕಾ ಪ್ರದೇಶದಲ್ಲಿ ್ಯಾಕ್ಟರಿಗಳಾದ ಮೇಲೆ ಇನ್ನಷ್ಟು ಅಧಿಕವಾಗಿವೆ. ಬೆಂಡರವಾಡಿ ಗ್ರಾಮದ ತಿರುವಿನಲ್ಲಿ ಪದೇ ಪದೇ ಅಪಘಾತಗಳು ನಡೆಯುತ್ತಲೇ ಇವೆ. ಸ್ವಯಂ ಅಪಘಾತಗಳೇ ಹೆಚ್ಚಾಗಿ ಆಗಿರುವುದರಿಂದ ದೂರುಗಳು ದಾಖಲಾಗಿಲ್ಲ. ನಾನ್ ಸ್ಟಾಪ್ ಬಸ್‌ಗಳು ಅತಿ ವೇಗವಾಗಿ ಸಂಚಾರ ಮಾಡುತ್ತವೆ. ರಸ್ತೆ ಸಮೀಪದಲ್ಲೇ ಶಾಲೆ ಇದೆ. ಕೆಎಸ್‌ಆರ್‌ಟಿಸಿ ಬಸ್-ಲಾರಿ ಅಪಘಾತ ನಡೆದ ಸ್ಥಳದಲ್ಲಿ ತಕ್ಷಣ ಆಕ್ಸಿಡೆಂಟ್ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು.
ಸುರೇಶ್, ಬೆಂಡರವಾಡಿ ಗ್ರಾಮಸ್ಥ
ಬೆಂಡರವಾಡಿ ಕ್ರಾಸ್‌ನಲ್ಲಿ ಕಂಪನ ಪಟ್ಟಿ(ರಂಬ್ಲರ್ ಸ್ಟ್ರಿಪ್ಸ್) ಅಳವಡಿಸಲಾಗುವುದು. ಸದ್ಯಕ್ಕೆ ಬ್ಯಾರಿಗೇಟ್ ಹಾಕಲಾಗುತ್ತದೆ. ಆಕ್ಸಿಡೆಂಟ್ ಬ್ಲಾಕ್ ಸ್ಪಾಟ್ ಆಗಿ ಪರಿಗಣಿಸಲು ಹೆಚ್ಚು ಅಪಘಾತ ಸಂಭವಿಸಿರಬೇಕಾಗುತ್ತದೆ.
ಸ್ನೇಹರಾಜ್, ಡಿವೈಎಸ್ಪಿ, ಚಾಮರಾಜನಗರ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net