ಗಾಂಜಾ ಮಾರಾಟಕ್ಕೆ ಕಡಿವಾಣ ಹಾಕಿ

ಯಳಂದೂರು ಪಟ್ಟಣ ಪೊಲೀಸ್ ಠಾಣೆಯಲ್ಲಿ ಶನಿವಾರ ಪರಿಶಿಷ್ಟ ಜಾತಿ-ಪಂಗಡದ ಕುಂದು ಕೊರತೆ ಸಭೆ ಆಯೋಜಿಸಲಾಗಿತ್ತು.
ಯಳಂದೂರು ಪಟ್ಟಣ ಪೊಲೀಸ್ ಠಾಣೆಯಲ್ಲಿ ಶನಿವಾರ ಪರಿಶಿಷ್ಟ ಜಾತಿ-ಪಂಗಡದ ಕುಂದು ಕೊರತೆ ಸಭೆ ಆಯೋಜಿಸಲಾಗಿತ್ತು.
Published on

ಪ್ರಮುಖ ಮುಖ್ಯಾಂಶಗಳು

  • ಪರಿಶಿಷ್ಟ ಜಾತಿ-ಪಂಗಡ ಮುಖಂಡರ ಆಗ್ರಹ
  • ಯಳಂದೂರು ಠಾಣೆಯಲ್ಲಿ ಸಭೆ
ಯಳಂದೂರು: ಪಟ್ಟಣ ಪೊಲೀಸ್ ಠಾಣೆ ಮುಂಭಾಗ ಶನಿವಾರ ಪರಿಶಿಷ್ಟ ಜಾತಿ-ಪಂಗಡದ ಕುಂದುಕೊರತೆ ಸಭೆ ಆಯೋಜಿಸಲಾಗಿತ್ತು.
ಪಟ್ಟಣ ಪ್ರದೇಶದ ನಾಡಮೇಗಲಮ್ಮ ರಸ್ತೆ, ಸಂತೆಮೈದಾನ, ಹೆದ್ದಾರಿ ಬದಿಗಳು, ಕಾರುಪುರ ವಿರಕ್ತ ಮಠ ರಸ್ತೆ, ಹೊನ್ನೂರು, ದುಗ್ಗಹಟ್ಟಿ, ಕೆಸ್ತೂರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಚಾನಲ್‌ನ ರಸ್ತೆ ಬದಿಗಳಲ್ಲಿ ನಿತ್ಯ ಕುಡುಕರ ಕಾಟ ಹೆಚ್ಚಾಗುತ್ತಿದೆ. ಇದರಿಂದ ಈ ಮಾರ್ಗದಲ್ಲಿ ರಾತ್ರಿ ವೇಳೆ ಮಹಿಳೆಯರು, ಮಕ್ಕಳು, ಹಿರಿಯ ನಾಗರಿಕರು ಸಂಚರಿಸಲು ಸಾಧ್ಯವಾಗದ ಸ್ಥಿತಿ ಇದೆ. ಅಲ್ಲದೆ ಪೊಲೀಸ್ ಸಿಬ್ಬಂದಿ ಸರಿಯಾದ ರೀತಿಯಲ್ಲಿ ಗಸ್ತು ಮಾಡುತ್ತಿಲ್ಲ. ಪರಿಣಾಮ ಪುಂಡರ ಹಾವಳಿಯಿಂದ ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗುತ್ತಿದೆ. ಪಟ್ಟಣಕ್ಕೆ ಕೆಲವು ಮದ್ಯವ್ಯಸನಿಗಳಿಂದ ಗಾಂಜಾ ಹಾಗೂ ಇತರ ವಸ್ತುಗಳು ಬರುತ್ತಿದ್ದು, ವಿದ್ಯಾರ್ಥಿಗಳು ಹಾಗೂ ಯುವಕರು ಇದನ್ನು ಸೇವಿಸುವ ಮೂಲಕ ಹಾಳಾಗುತ್ತಿದ್ದಾರೆ. ಮಕ್ಕಳ ಭವಿಷ್ಯದ ದೃಷ್ಟಿಯಿಂದ ಸಂಬಂಧಪಟ್ಟವರು ಈ ಬಗ್ಗೆ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಭೆಯಲ್ಲಿದ್ದವರು ಒತ್ತಾಯಿಸಿದರು.
ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಯರಿಯೂರು ಸಿ.ರಾಜಣ್ಣ ಮಾತನಾಡಿ, ಯರಿಯೂರು ಗ್ರಾಮದಲ್ಲಿ ಅಂಬೇಡ್ಕರ್ ಹೆಬ್ಬಾಗಿಲು ನಿರ್ಮಾಣ ವಿಚಾರಕ್ಕೆ ಸಂಬಂಧಿಸಿದಂತೆ ಪೊಲೀಸರು ಗ್ರಾಮದಲ್ಲಿ ಬೀಡುಬಿಟ್ಟಿದ್ದು, ಸಿಬ್ಬಂದಿಯನ್ನು ಅಲ್ಲಿಂದ ಕರೆಸಿಕೊಳ್ಳಬೇಕು. ಪೊಲೀಸರು ಸ್ಥಳದಲ್ಲಿ ಇರುವುದರಿಂದ ಸಮುದಾಯಗಳಲ್ಲಿ ವೈಮನಸ್ಸು ಉಂಟಾಗುತ್ತಿದೆ. ನಮ್ಮ ಗ್ರಾಮಕ್ಕೆ ಪೊಲೀಸ್ ಅವಶ್ಯಕತೆ ಇದೆ ಎಂದು ಯಾರೂ ಸಹ ದೂರು ನೀಡಿಲ್ಲ. ಹೆಬ್ಬಾಗಿಲು ನಿರ್ಮಾಣ ವಿಚಾರದಲ್ಲಿ ಯುವಕರು ಬಂದೋಬಸ್ತ್ ಕೇಳಿಲ್ಲ. ಎರಡೂ ಸಮುದಾಯ ಕಡೆಯಿಂದ ಅರ್ಜಿ ಬಂದಿಲ್ಲವಾದರೂ ಕಾನೂನು ಸುವ್ಯಸ್ಥೆ ಕಾಪಾಡುವ ದೃಷ್ಟಿಯಿಂದ ಪೊಲೀಸರನ್ನು ನಿಯೋಜಿಸಿರುವ ಬಗ್ಗೆ ನಮಗೆ ಅರಿವಿದೆ. ಎಲ್ಲರ ಹಿತದೃಷ್ಟಿಯಿಂದ ಪೊಲೀಸ್ ಸಿಬ್ಬಂದಿಯನ್ನು ವಾಪಸ್ ಕರೆಸಿಕೊಳ್ಳಬೇಕು ಎಂದು ತಿಳಿಸಿದರು.
ಇನ್ನು ಪಟ್ಟಣದ ಬಸ್ ನಿಲ್ದಾಣದಲ್ಲಿ ವಾಹನಗಳು ಅಡ್ಡಾದಿಡ್ಡಿ ಸಂಚರಿಸುವ ಮೂಲಕ ಸಾರ್ವಜನಿಕರಲ್ಲಿ ಭಯ ಉಂಟು ಮಾಡುತ್ತಿವೆ. ಬಹುತೇಕ ಅಂಗಡಿಗಳು ಪಾದಚಾರಿ ಮಾರ್ಗವನ್ನು ಅತಿಕ್ರಮಿಸಿವೆ. ಇದರಿಂದ ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗಿದೆ. ಪಟ್ಟಣದಲ್ಲಿ ರಸ್ತೆ ಬದಿ ಒತ್ತುವರಿಯನ್ನು ತೆಗೆಸಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು.
ಹೆದ್ದಾರಿಯಲ್ಲಿ ಹಂಪ್ಸ್ ಹಾಕಿ: ತಾಲೂಕಿನಲ್ಲಿ ಮೆಲ್ಲಹಳ್ಳಿ ಗೇಟ್, ಅರಣ್ಯ ಇಲಾಖೆ ಸಮೀಪ, ಮದ್ದೂರು ಗ್ರಾಮ ಪಂಚಾಯಿತಿ ಮುಂಭಾಗದ ವೃತ್ತ ಸೇರಿದಂತೆ ಬಹುತೇಕ ಕಡೆ ಹಂಪ್ಸ್ ಅಳವಡಿಸಿಲ್ಲ. ಇದರಿಂದ ಅಪಘಾತ ಸಂಭವಿಸುತ್ತಿವೆ. ತಳ್ಳುಗಾಡಿ ವ್ಯಾಪಾರಿಗಳು, ಆಟೋಗಳು ಎಲ್ಲೆಂದರಲ್ಲಿ ನಿಂತುಕೊಳ್ಳುವ ಮೂಲಕ ಪ್ರಯಾಣಿಕರ ಸಂಚಾರಕ್ಕೆ ತೊಂದರೆ ನೀಡುತ್ತಿದ್ದಾರೆ. ಬಸ್‌ಗಳು ನಿಲ್ದಾಣದಲ್ಲಿ ಸಮರ್ಪಕವಾಗಿ ನಿಲ್ಲುವುದಿಲ್ಲ. ಇದರಿಂದ ಜನರು ಊರುಗಳಿಗೆ ತೆರಳಲು ಆಗುತ್ತಿಲ್ಲ. ಕಿರಿದಾದ ರಸ್ತೆ ದಾಟಲು ವೃದ್ಧರು ಮತ್ತು ಗ್ರಾಮೀಣ ಜನರು ಪರದಾಡುವಂತಾಗಿದೆ. ಇಂತಹ ಕಡೆ ಪೊಲೀಸರನ್ನು ನಿಯೋಜಿಸುವ ಮೂಲಕ ವಾಹನಗಳು ಸುಲಭವಾಗಿ ಸಂಚರಿಸಲು ಅನುವು ಮಾಡಿಕೊಡಬೇಕು. ಜತೆಗೆ ಪಾದಚಾರಿ ರಸ್ತೆಗಳಲ್ಲಿ ಜನರು ಸಂಚರಿಸಲು ವ್ಯವಸ್ಥೆ ಮಾಡಬೇಕು ಎಂದು ಸಭೆಯ ಗಮನ ಸೆಳೆದರು.
ಈ ಕುರಿತು ಪ್ರತಿಕ್ರಿಯಿಸಿದ ಯಳಂದೂರು ಸರ್ಕಲ್ ಇನ್‌ಸ್ಪೆಕ್ಟರ್ ಜಿ.ಕೆ.ಸುಬ್ರಮಣ್ಯ, ಸಭೆಯಲ್ಲಿ ಮಾಹಿತಿ ನೀಡಿರುವ ಸ್ಥಳಗಳಲ್ಲಿ ಸಿಬ್ಬಂದಿಯನ್ನು ನಿಯೋಜಿಸಲಾಗುವುದು. ಜತೆಗೆ ಯರಿಯೂರು ಗ್ರಾಮದಲ್ಲಿ ಪೊಲೀಸ್ ಸಿಬ್ಬಂದಿ ಬೀಡು ಬಿಟ್ಟಿರುವ ಬಗ್ಗೆ ಮೇಲಧಿಕಾರಿಗಳಿಗೆ ಗಮನಕ್ಕೆ ತಂದು ನಂತರ ಅವರ ಸೂಚನೆಯನ್ನು ಪಾಲಿಸಲಾಗುವುದು ಎಂದು ತಿಳಿಸಿದರು.
ಸಬ್ ಇನ್‌ಸ್ಪೆಕ್ಟರ್ ಆಕಾಶ್, ಕರಿಬಸಪ್ಪ, ಮುಖಂಡರಾದ ಗಂಗವಾಡಿ ವಸಂತ್ ಕುಮಾರ್, ವೈ.ಕೆ.ಮೋಳೆ ನಂಜುಂಡಸ್ವಾಮಿ, ಅಂಬೇಡ್ಕರ್ ಸೇವಾ ಸಮಿತಿ ಅಧ್ಯಕ್ಷ ಸಿದ್ದರಾಜು, ನಟರಾಜು, ಅಂಬಳೆ ಮಹದೇವ್, ಕಂದಹಳ್ಳಿ ನಾರಾಯಣ್, ಮಹೇಶ್, ಸುರೇಶ್, ಶ್ರೀನಿವಾಸ್ ಇತರರಿದ್ದರು.
ಗ್ರಾಮೀಣ ಪ್ರದೇಶದಲ್ಲಿ ಮದ್ಯ ಮಾರಟ: ಪಟ್ಟಣ ಸೇರಿದಂತೆ ತಾಲೂಕಿನ ಗ್ರಾಮೀಣ ಪ್ರದೇಶಗಳಾದ ದುಗ್ಗಹಟ್ಟಿ, ಮೆಲ್ಲಹಳ್ಳಿ, ಹೊನ್ನೂರು, ಕಂದಹಳ್ಳಿ, ಕೆಸ್ತೂರು, ಅಂಬಳೆ, ಯರಿಯೂರು, ಮದ್ದೂರು, ಗೌಡಹಳ್ಳಿ , ಬಿಳಿಗಿರಿರಂಗನಬೆಟ್ಟ, ಯರಗಂಬಳ್ಳಿ ಸೇರಿದಂತೆ ಸುತ್ತಮುತ್ತಲ್ಲಿನ ಪ್ರದೇಶದ ಚಿಲ್ಲರೆ ಅಂಗಡಿ, ಹೋಟೆಲ್, ಮನೆಗಳು ಸೇರಿದಂತೆ ಇತರ ಸ್ಥಳಗಳಲ್ಲಿ ಮದ್ಯ ಮಾರಾಟ ರಾಜಾರೋಷವಾಗಿ ನಡೆಯುತ್ತಿದೆ. ಇದರಿಂದ ಕೆಲಸಕ್ಕೆ ಹೋಗುವ ಯುವ ಸಮುದಾಯ ಮದ್ಯ ಚಟಕ್ಕೆ ಬಿದ್ದು ವೈಯಕ್ತಿಕ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದೆ. ಯುವ ಸಮೂಹದ ಹಿತದೃಷ್ಟಿಯಿಂದ ಸಂಬಂಧಪಟ್ಟ ಅಬಕಾರಿ ಹಾಗೂ ಪೊಲೀಸ್ ಇಲಾಖೆ ಗ್ರಾಮೀಣ ಪ್ರದೇಶದಲ್ಲಿ ಈ ದಂಧೆಗೆ ಕಡಿವಾಣ ಹಾಕಬೇಕೆಂಬ ಒತ್ತಾಯ ಕೇಳಿ ಬಂತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net