ಚಿರತೆ ದಾಳಿಗೆ ತೆನೆ ಹಸು ಬಲಿ, ಗ್ರಾಮಸ್ಥರಲ್ಲಿ ಆತಂಕ

ಯಳಂದೂರು ತಾಲೂಕಿನ ಚಾಮಲಾಪುರ ಗ್ರಾಮದಲ್ಲಿ ಸೋಮವಾರ ಬೆಳಿಗ್ಗೆ ಚಿರತೆ ದಾಳಿ ನಡೆಸಿ ಭಟ್ಟನ ಸಿದ್ದಪ್ಪಸ್ವಾಮಿ ಅವರ ಹಸುವನ್ನು ಕೊಂದಿರುವುದು.
ಯಳಂದೂರು ತಾಲೂಕಿನ ಚಾಮಲಾಪುರ ಗ್ರಾಮದಲ್ಲಿ ಸೋಮವಾರ ಬೆಳಿಗ್ಗೆ ಚಿರತೆ ದಾಳಿ ನಡೆಸಿ ಭಟ್ಟನ ಸಿದ್ದಪ್ಪಸ್ವಾಮಿ ಅವರ ಹಸುವನ್ನು ಕೊಂದಿರುವುದು.
Published on
ಯಳಂದೂರು: ತಾಲೂಕಿನ ಬಿಆರ್‌ಟಿ ಹುಲಿ ರಕ್ಷಿತ ಅರಣ್ಯ ಪ್ರದೇಶದ ಕಾಂಡಚಿನ ಗ್ರಾಮವಾದ ಚಾಮಲಾಪುರ ಗ್ರಾಮದಲ್ಲಿ ಸೋಮವಾರ ಬೆಳ್ಳಂಬೆಳಗ್ಗೆ ಚಿರತೆ ದಾಳಿ ನಡೆಸಿದ್ದು ತೆನೆ ಹಸುವೊಂದನ್ನು ಅರ್ಧಂಬರ್ಧ ತಿಂದು ಅಲ್ಲಿಂದ ಕಾಲ್ತಿತ್ತಿದೆ.
ಗ್ರಾಮದ ಭಟ್ಟನ ಸಿದ್ದಪ್ಪಸ್ವಾಮಿ ಎಂಬುವರ ಮನೆಯ ಬಳಿ ಇರುವ ಕೊಟ್ಟಿಗೆಯಲ್ಲಿ ಈ ಘಟನೆ ನಡೆದಿದೆ. ಬೆಳಗ್ಗೆ 4.30ಕ್ಕೆ ಚಿರತೆ ಹಸುವಿನ ಮೇಲೆ ದಾಳಿ ನಡೆಸಿ, ಅರ್ಧಂಬರ್ಧ ಭಕ್ಷಿಸಿದ್ದು ಅಲ್ಲಿಂದ ಕಾಲ್ಕಿತ್ತಿದೆ. ಗ್ರಾಮದ ಒಳಗೆ ಬಂದು ಇದು ಹಸುವನ್ನು ತಿಂದಿರುವುದು ಇಲ್ಲಿನ ನಾಗರಿಕರಲ್ಲಿ ಭೀತಿ ಮೂಡಿಸಿದೆ. ಈ ಗ್ರಾಮದ ಸುತ್ತಮುತ್ತ ಇರುವ ಜಮೀನಿನಲ್ಲಿ ಚಿರತೆ ಕಾಣಿಸಿಕೊಂಡಿತ್ತು. ಇದರ ಹೆಜ್ಜೆ ಗುರುತುಗಳು ಸಹ ಪತ್ತೆಯಾಗಿತ್ತು. ಅನೇಕ ರೈತರು ಇದನ್ನು ತಮ್ಮ ಕಣ್ಣಿಂದಲೇ ನೋಡಿದ್ದು, ಚಿರತೆ ಹಿಡಿಯುವಂತೆ ಅರಣ್ಯ ಇಲಾಖೆಗೆ ದೂರು ಸಲ್ಲಿಸಿದ್ದರು. ಆದರೂ ಕೂಡ ಅರಣ್ಯ ಇಲಾಖೆ ಇದನ್ನು ಹಿಡಿಯುವಲ್ಲಿ ವಿಫಲವಾಗಿದೆ. ಕೂಡಲೇ ಇಲ್ಲಿ ಬೋನನ್ನು ಇರಿಸಬೇಕು ಇದನ್ನು ಸೆರೆ ಹಿಡಿದು ಕಾಡಿಗೆ ಬಿಡಬೇಕು ಎಂದು ಗ್ರಾಮದ ಮಹದೇವಸ್ವಾಮಿ, ಸಿದ್ಧಲಿಂಗಸ್ವಾಮಿ, ವಿಜಯ್ ಸೇರಿದಂತೆ ಅನೇಕರು ಆಗ್ರಹಿಸಿದ್ದಾರೆ.
ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಹಸುವಿನ ಕಳೇಬರದ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಗ್ರಾಮಸ್ಥರು ಎಚ್ಚರಿಕೆಯಿಂದ ಇರಬೇಕು ಎಂದು ಸೂಚನೆ ನೀಡಿದ್ದಾರೆ. ಅಲ್ಲದೆ ಚಿರತೆಯನ್ನು ಹಿಡಿಯಲು ಬೋನನ್ನು ಇರಿಸುವುದಾಗಿ ಗ್ರಾಮಸ್ಥರಿಗೆ ಭರವಸೆಯನ್ನು ನೀಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net