ಕೆಂಪೇಗೌಡ ಜಯಂತಿ ವಿಜೃಂಭಣೆ ಆಚರಣೆಗೆ ಸಹಕಾರ

ಹನೂರಿನಲ್ಲಿ ಕೆಂಪೇಗೌಡ ಜಯಂತಿ ಆಚರಣೆ ಸಂಬಂಧ ಶಾಸಕ ಎಂ.ಆರ್. ಮಂಜುನಾಥ್ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ಆಯೋಜಿಸಲಾಗಿತ್ತು. ರಾಚಯ್ಯ, ಚೈತ್ರಾ, ಪ್ರತಿಭಾ, ನಾಗೇಂದ್ರ, ಮಂಜೇಶ್, ರಾಜುಗೌಡ ಇತರರಿದ್ದರು.
ಹನೂರಿನಲ್ಲಿ ಕೆಂಪೇಗೌಡ ಜಯಂತಿ ಆಚರಣೆ ಸಂಬಂಧ ಶಾಸಕ ಎಂ.ಆರ್. ಮಂಜುನಾಥ್ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ಆಯೋಜಿಸಲಾಗಿತ್ತು. ರಾಚಯ್ಯ, ಚೈತ್ರಾ, ಪ್ರತಿಭಾ, ನಾಗೇಂದ್ರ, ಮಂಜೇಶ್, ರಾಜುಗೌಡ ಇತರರಿದ್ದರು.
Published on
ಹನೂರು: ನಾಡಪ್ರಭು ಕೆಂಪೇಗೌಡ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲು ಸಹಕಾರ ನೀಡುವುದಾಗಿ ಶಾಸಕ ಎಂ.ಆರ್.ಮಂಜುನಾಥ್ ಭರವಸೆ ನೀಡಿದರು.
ಪಟ್ಟಣದ ಲೋಕೋಪಯೋಗಿ ಇಲಾಖೆಯ ಅತಿಥಿ ಗೃಹದ ಸಭಾಂಗಣದಲ್ಲಿ ಶುಕ್ರವಾರ ಕೆಂಪೇಗೌಡ ಜಯಂತಿ ಆಚರಣೆ ಸಂಬಂಧ ಆಯೋಜಿಸಿದ್ದ ಸಮುದಾಯದ ಮುಖಂಡರು ಹಾಗೂ ಅಧಿಕಾರಿಗಳ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಬೆಂಗಳೂರು ನಿರ್ಮಾಣದಲ್ಲಿ ನಾಡಪ್ರಭು ಕೆಂಪೇಗೌಡರ ಕೊಡುಗೆ ಅಪಾರ. ಉತ್ತಮ ಸಮಾಜಕ್ಕೆ ಸ್ಫೂರ್ತಿಯಾಗಿದ್ದಾರೆ. ಸರ್ಕಾರದ ಸುತ್ತೋಲೆಯಂತೆ ಜೂ.27ರಂದು ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಸರಳವಾಗಿ ಆಚರಿಸಲಾಗುವುದು. ಸಮುದಾಯದ ಮುಖಂಡರು ಒಟ್ಟುಗೂಡಿ ಚರ್ಚಿಸಿ ನಿಗದಿಪಡಿಸಿದ ದಿನದಂದು ವಿಜೃಂಭಣೆಯಿಂದ ಜಯಂತಿ ಆಚರಿಸಲು ಅಗತ್ಯ ಸಹಕಾರ ನೀಡಲಾಗುವುದು. ಇದಕ್ಕೆ ಅಗತ್ಯ ಸಲಹೆ ನೀಡುವಂತೆ ತಿಳಿಸಿದರು.
ಈ ವೇಳೆ ಸಮುದಾಯದ ಮುಖಂಡರು ಮಾತನಾಡಿ, ಕೆಂಪೇಗೌಡ ಜಯಂತಿಯನ್ನು ಕೆಲ ಸರ್ಕಾರಿ ಕಚೇರಿಗಳಲ್ಲಿ ಆಚರಿಸುತ್ತಿಲ್ಲ. ಜತೆಗೆ ಅಧಿಕಾರಿಗಳು ಪೂರ್ವಭಾವಿ ಸಭೆಗೂ ಹಾಜರಾಗುತ್ತಿಲ್ಲ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಆಕ್ಷೇಪ ವ್ಯಕ್ತಪಡಿಸಲಾಗಿದೆ. ಗೈರಾದ ಅಧಿಕಾರಿಗಳಿಗೆ ನೋಟಿಸ್ ನೀಡಿ ಕ್ರಮ ಜರುಗಿಸಬೇಕು. ಪ್ರತಿ ಸರ್ಕಾರಿ ಕಚೇರಿಯಲ್ಲೂ ಜಯಂತಿ ಆಚರಿಸಬೇಕು. ಎಲ್ಲ ಇಲಾಖೆ ಅಧಿಕಾರಿಗಳು ಭಾಗವಹಿಸಬೇಕು. ಈ ಬಗ್ಗೆ ಅಗತ್ಯ ಕ್ರಮವಹಿಸಬೇಕು. ಸಮುದಾಯದ ಶ್ರೀಗಳನ್ನು ಆಹ್ವಾನಿಸಲು ನಿರ್ಧರಿಸಲಾಗಿದ್ದು ದಿನಾಂಕ ನಿಗದಿಯಾಗಬೇಕಿದೆ. ಇದಕ್ಕೆ ಸಹಕಾರ ನೀಡುವಂತೆ ಕೋರಿದರು. ಇದಕ್ಕೆ ಶಾಸಕರು ಪ್ರತಿಕ್ರಿಯಿಸಿ, ಅಗತ್ಯ ಸಹಕಾರ ನೀಡಲಾಗುವುದು. ಸಭೆಗೆ ಗೈರಾಗಿರುವ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡುವಂತೆ ತಹಸೀಲ್ದಾರ್ ಕೆ.ಎನ್ ಚೈತ್ರಾ ಅವರಿಗೆ ಸೂಚಿಸಿದರು.
ಒತ್ತುವರಿ ತೆರವುಗೊಳಿಸಿ
ಮಲೆಮಹದೇಶ್ವರ ಬೆಟ್ಟ ಎಲ್ಲೇಮಾಳಕ್ಕೆ ಸಂಪರ್ಕ ಕಲ್ಪಿಸುವ ಪಟ್ಟಣದ ವಿಭಜಕ ರಸ್ತೆಯಲ್ಲಿ ಕೆಂಪೇಗೌಡರ ವೃತ್ತ ನಿರ್ಮಾಣ ಸಂಬಂಧ ಈಗಾಗಲೇ ಚರ್ಚಿಸಲಾಗಿದ್ದು, ಸಭೆಯಲ್ಲಿ ಒಮ್ಮತದ ತೀರ್ಮಾನ ಕೈಗೊಳ್ಳಲಾಗಿದೆ. ಆದರೆ, ನಾಮಕರಣ ಮಾಡುವಲ್ಲಿ ಹಾಗೂ ಒತ್ತುವರಿಯಾಗಿರುವ ಸರ್ಕಾರಿ ಜಾಗ ತೆರವುಗೊಳಿಸಲು ವಿಳಂಬವಾಗುತ್ತಿದೆ. ಆದ್ದರಿಂದ ಈ ಬಗ್ಗೆ ಮುತುವರ್ಜಿ ವಹಿಸಿ ಅಗತ್ಯ ಕ್ರಮವಹಿಸುವಂತೆ ಮುಖಂಡರು ಒತ್ತಾಯಿಸಿದರು. ಇದಕ್ಕೆ ಶಾಸಕರು ಪ್ರತಿಕ್ರಿಯಿಸಿ, ಒತ್ತುವರಿಯಾಗಿರುವ ಜಾಗವನ್ನು ತೆರವುಗೊಳಿಸುವಂತೆ, ವೃತ್ತ ನಿರ್ಮಾಣಕ್ಕೆ ಮರು ಕ್ರಿಯಾಯೋಜನೆ ತಯಾರಿಸುವಂತೆ ಹಾಗೂ ಕೊಳ್ಳೇಗಾಲ-ಹನೂರು ಮಾರ್ಗದಲ್ಲಿ ಹೆಚ್ಚು ಅಪಘಾತ ಸಂಭವಿಸುತ್ತಿರುವ ಸ್ಥಳಗಳಲ್ಲಿ ಅಪಘಾತ ತಡೆಗೆ ಅಗತ್ಯ ಕ್ರಮವಹಿಸುವಂತೆ ಕೆ.ಶಿಪ್ ಎಇಇ ಲಕ್ಷ್ಮೀ ಅವರಿಗೆ ಸೂಚಿಸಿದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ರಾಚಯ್ಯ, ಬಿಇಒ ಪ್ರತಿಭಾ, ಮುಖ್ಯಾಧಿಕಾರಿ ರೇಖಾ, ಲೋಕೋಪಯೋಗಿ ಇಲಾಖೆ ಎಇಇ ಚಿನ್ನಣ್ಣ, ಸೆಸ್ಕ್ ಎಇಇ ರಂಗಸ್ವಾಮಿ, ಉಪ ನೋಂದಣಾಧಿಕಾರಿ ಉಷಾ, ಸಬ್ ಇನ್‌ಸ್ಪೆಕ್ಟರ್ ಸಾಹೇಬಗೌಡ, ಒಕ್ಕಲಿಗರ ಸಂಘದ ಜಿಲ್ಲಾಧ್ಯಕ್ಷ ನಾಗೇಂದ್ರ, ಮುಖಂಡರಾದ ರಾಜುಗೌಡ, ಮಂಜೇಶ್, ಆನಂದ್, ಹರೀಶ್‌ಕುಮಾರ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net