ಅಂಬೇಡ್ಕರ್ ಜಯಂತಿ ಅರ್ಥಪೂರ್ಣ ಆಚರಣೆಗೆ ಸಹಕರಿಸಿ

ಯಳಂದೂರಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಶಾಸಕ ಎ.ಆರ್. ಕೃಷ್ಣಮೂರ್ತಿ ಮಾತನಾಡಿದರು. ಎಸ್.ಎಲ್.ನಯನಾ, ಎ.ಬಿ ವೇಣು, ಸುಬ್ರಹ್ಮಣ್ಯ, ಕೇಶವಮೂರ್ತಿ, ಕೆಸ್ತೂರು ಸಿದ್ದರಾಜು ಇತರರಿದ್ದರು.
ಯಳಂದೂರಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಶಾಸಕ ಎ.ಆರ್. ಕೃಷ್ಣಮೂರ್ತಿ ಮಾತನಾಡಿದರು. ಎಸ್.ಎಲ್.ನಯನಾ, ಎ.ಬಿ ವೇಣು, ಸುಬ್ರಹ್ಮಣ್ಯ, ಕೇಶವಮೂರ್ತಿ, ಕೆಸ್ತೂರು ಸಿದ್ದರಾಜು ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಎ.ಆರ್.ಕೃಷ್ಣಮೂರ್ತಿ ಮನವಿ
  • ಪೂರ್ವಭಾವಿ ಸಭೆ
ಯಳಂದೂರು: ತಾಲೂಕು ಆಡಳಿತ ವತಿಯಿಂದ ಏ.14ರಂದು ನಡೆಯಲಿರುವ ಅಂಬೇಡ್ಕರ್ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲು ಪಟ್ಟಣ ಹಾಗೂ ತಾಲೂಕಿನ ಎಲ್ಲ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಸಹಕರಿಸಬೇಕು ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಮನವಿ ಮಾಡಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಬಾಗಲಕೋಟೆ, ದಾವಣಗೆರೆ ಉಪ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿದ್ದರಿಂದ ಈ ಹಿಂದೆ ನಡೆದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿರಲಿಲ್ಲ. ಜಯಂತಿಯನ್ನು ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಆಚರಣೆ ಮಾಡಲು ಆ ಸಭೆಯಲ್ಲಿ ನಿರ್ಧರಿಸಲಾಗಿದ್ದು, ಮತ್ತೊಂದು ದಿನ ಅಂಬೇಡ್ಕರ್ ಸೇವಾ ಸಮಿತಿ ಜತೆಗೂಡಿ ಜಯಂತಿ ಆಚರಿಸಲು ತೀರ್ಮಾನಿಸಲಾಗಿತ್ತು. ಆದರೆ ಈ ಬಗ್ಗೆ ನನಗೆ ಮಾಹಿತಿ ಇರಲಿಲ್ಲ. ಅಲ್ಲದೆ ತಾಪಂ ಸಭಾಂಗಣ ಕಿರಿದಾಗಿದೆ. ಇಲ್ಲಿ 100 ಜನರು ಕೂರಲು ಕಷ್ಟವಾಗುತ್ತದೆ. ಇದರ ಬದಲಿಗೆ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ವಿಶಾಲ ಸ್ಥಳವಿದ್ದು, ಅಲ್ಲಿರುವ ಅಂಬೇಡ್ಕರ್ ಪುತ್ಥಳಿಗೆ ಪುಷ್ಪ ನಮನ ಸಲ್ಲಿಸಿ ಅಲ್ಲೇ ಜಯಂತಿ ಆಚರಿಸುವುದು ಹೆಚ್ಚು ಅರ್ಥಪೂರ್ಣ ಎಂದರು.
ಅಂಬೇಡ್ಕರ್ ಭವನಕ್ಕೆ ವಿಐಪಿ ಕುರ್ಚಿಗಳು ಸೇರಿದಂತೆ ಇತರ ಪರಿಕರಗಳನ್ನು ಒದಗಿಸುವ ಸಂಬಂಧ ನಾನು ಈಗಾಗಲೇ ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದೇನೆ. ನನ್ನ ಅನುದಾನದಲ್ಲಿ ಇದನ್ನು ಕೊಡಿಸಲು ನಾನು ಬದ್ಧ. ಅಂದಾಜು 18 ಲಕ್ಷ ರೂ. ವ್ಯಯಿಸಲು ತೀರ್ಮಾನಿಸಿದ್ದು, ಇನ್ನಷ್ಟು ಹೆಚ್ಚಿದರೂ ಅದನ್ನು ನಾನು ಭರಿಸುತ್ತೇನೆ. ಭವನಕ್ಕೆ ಕನಿಷ್ಠ ಬಾಡಿಗೆ ನಿಗದಿಪಡಿಸಿ ಅದನ್ನು ಸಮಾಜ ಕಲ್ಯಾಣ ಇಲಾಖೆಯ ನಿರ್ವಹಣೆಗೆ ನೀಡಲಾಗುವುದು ಎಂದು ಮಾಹಿತಿ ನೀಡಿದರು.
ಪಟ್ಟಣದಲ್ಲಿ ಮತ್ತೊಂದು ದಿನ ಅಂಬೇಡ್ಕರ್ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲು ಅನುವು ಮಾಡಿಕೊಡಬೇಕೆಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದರಿಂದ, ಈ ಬಗ್ಗೆ ಸಭೆ ನಡೆಸಿ ತೀರ್ಮಾನಿಸಿ ಆಚರಿಸಿ ಎಂದು ಶಾಸಕರು ಸೂಚನೆ ನೀಡಿದರು.
ತಹಸೀಲ್ದಾರ್ ಎಸ್.ಎಲ್.ನಯನಾ, ತಾಪಂ ಇಒ ಎ.ಬಿ. ವೇಣು, ಸಿಪಿಐ ಸುಬ್ರಹ್ಮಣ್ಯ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಕೇಶವಮೂರ್ತಿ, ಅಂಬೇಡ್ಕರ್ ಸೇವಾ ಸಮಿತಿ ಅಧ್ಯಕ್ಷ ಕೆಸ್ತೂರು ಸಿದ್ದರಾಜು, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಕಿನಕಹಳ್ಳಿ ಪ್ರಭುಪ್ರಸಾದ್, ಬಿಳಿಗಿರಿರಂಗನಾಥಸ್ವಾಮಿ ದೇಗುಲ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜೆ.ಶ್ರೀನಿವಾಸ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net