ಪಿರಿಯಾಪಟ್ಟಣದ ಡಿ.ದೇವರಾಜ ಅರಸ್ ಕಲಾ ಭವನದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ವೃತ್ತಿ ಮಾರ್ಗದರ್ಶನ ಕಾರ್ಯಾಗಾರವನ್ನು ಗಣ್ಯರು ಉದ್ಘಾಟಿಸಿದರು. ಉಪನ್ಯಾಸಕ ನಾಗರಾಜ್, ಹಿರಿಯ ಆರೋಗ್ಯ ನಿರೀಕ್ಷಕ ಕೆ.ಆರ್.ಪ್ರಕಾಶ್, ಬಿಸಿಎಂ ಅಧಿಕಾರಿ ಕೃಷ್ಣೇಗೌಡ ಇತರರು ಇದ್ದರು.
ಪಿರಿಯಾಪಟ್ಟಣ: ವಿದ್ಯಾರ್ಥಿಗಳು ನಿರ್ದಿಷ್ಟವಾದ ಗುರಿಯನ್ನು ತಲುಪಲು ನಿರಂತರ ಪರಿಶ್ರಮ ಅತ್ಯಗತ್ಯವಾಗಿದೆ ಎಂದು ವೃತ್ತಿ ಮಾರ್ಗದರ್ಶನ ಸಂಪನ್ಮೂಲ ವ್ಯಕ್ತಿ ಹಾಗೂ ಉಪನ್ಯಾಸಕ ನಾಗರಾಜ್ ತಿಳಿಸಿದರು.
ಪಟ್ಟಣದ ಡಿ.ದೇವರಾಜ ಅರಸ್ ಕಲಾ ಭವನದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಮೆಟ್ರಿಕ್ ಪೂರ್ವ ಮತ್ತು ನಂತರದ ವಿದ್ಯಾರ್ಥಿನಿಲಯದ ವಿದ್ಯಾರ್ಥಿಗಳಿಗೆ ಭಾನುವಾರ ಹಮ್ಮಿಕೊಂಡಿದ್ದ ವೃತ್ತಿ ಮಾರ್ಗದರ್ಶನ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ನಿಮ್ಮ ನಿರಂತರ ಶ್ರಮಕ್ಕೆ ಎಂದಿಗೂ ಪ್ರತಿಫಲವಿರುತ್ತದೆ. ಉತ್ತಮ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿ ನಿಮ್ಮ ಕನಸಿನ ಹುದ್ದೆಗಳನ್ನು ಪಡೆಯಲು ಪ್ರಯತ್ನಿಸಿಬೇಕು. ಜೀವನಕ್ಕೆ ವೃತ್ತಿ ಅನಿವಾರ್ಯವಾಗಿದ್ದು ನಾವು ಮಾಡುವ ವೃತ್ತಿಯನ್ನು ಶ್ರದ್ಧೆಯಿಂದ ಗೌರವಿಸಬೇಕು. ನಿಮ್ಮಲ್ಲಿರುವ ಬಡತನ, ಸಂಕಷ್ಟ ಮತ್ತು ದೌರ್ಬಲ್ಯಗಳು ಎಂದಿಗೂ ನಿಮ್ಮ ಗುರಿಗೆ ತಡೆಯಾಗಬಾರದು. ಇವುಗಳನ್ನು ಬದಿಗಿಟ್ಟ ನಿಮ್ಮ ಸಾಧನೆಯ ಕಡೆ ಮುನ್ನುಗಬೇಕು. ಅನೇಕ ಸಾಮಾನ್ಯ ವ್ಯಕ್ತಿಗಳು ಇಂದು ಸಾಧಕರಾಗಲು ಸಾಕಷ್ಟು ಕಷ್ಟಗಳನ್ನು ಮೆಟ್ಟಿ ಬಂದಿದ್ದಾರೆ ಎಂದರು.
ಆರೋಗ್ಯ ಇಲಾಖೆ ಹಿರಿಯ ಆರೋಗ್ಯ ನಿರೀಕ್ಷಕ ಕೆ.ಆರ್.ಪ್ರಕಾಶ್ ಮಾತನಾಡಿ, ವಿದ್ಯಾರ್ಥಿಗಳಿಗೆ ಕಲಿಕೆಯೇ ವೃತ್ತಿಯಾಗಿದ್ದು, ಇದಕ್ಕೆ ಮೊದಲ ಮಾನ್ಯತೆ ಕೊಡಬೇಕು. ನಾವು ಮಾಡುವ ವೃತ್ತಿಗೆ ಮೊದಲ ಆದ್ಯತೆ ಕೊಡಿ. ಶ್ರಮ ಮತ್ತು ಪ್ರಾಮಾಣಿಕವಾಗಿ ವಿದ್ಯಾಭ್ಯಾಸ ಮಾಡಿದರೆ ಜೀವನ ಅಭಿವೃದ್ಧಿ ಸಾಧ್ಯ ಎಂದರು.
ಪಿಎಸ್‌ಐ ಸುರೇಶ್ ಮಾತನಾಡಿ, ವಿದ್ಯಾರ್ಥಿಗಳು ಕನಿಷ್ಠ ಕಾನೂನಿನ ಮಾಹಿತಿ ಹೊಂದಿರಬೇಕು. ಪೋಕ್ಸೋ ಪ್ರಕರಣದ ಬಗ್ಗೆ ಎಚ್ಚರವಿರಬೇಕು, ವಾಹನ ಚಾಲನೆಗೆ ಸೂಕ್ತ ದಾಖಲೆ ಇರಬೇಕು ಎಂದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ತಾಲ್ಲೂಕು ಅಧಿಕಾರಿ ಕೃಷ್ಣೆಗೌಡ ಮಾತನಾಡಿದರು. ಕಾರ್ಯಕ್ರಮದಲ್ಲಿ ವಿವಿಧ ವಿದ್ಯಾರ್ಥಿ ನಿಲಯಗಳ ಮೇಲ್ವಿಚಾರಕರಾದ ರಶ್ಮಿ, ವೆಂಕಟಪ್ಪ, ಪ್ರತಿಭಾ, ಕೃಷ್ಣಪ್ಪ, ಸಿಬ್ಬಂದಿ ಶಂಕರ್ ಸೇರಿದಂತೆ ಇತರರಿದ್ದರು.