ಮುಂದುವರಿದ ಕಾಡಾನೆ ದಾಂಧಲೆ

ಮಲ್ಲಯ್ಯಪುರ ಗ್ರಾಮದ ಕಾಡಂಚಿನ ಜಮೀನಿಗೆ ಎಸಿಎಫ್ ಮರಿಸ್ವಾಮಿ, ಆರ್‌ಎಫ್‌ಒ ನಿರಂಜನ್ ಅವರು ಭೇಟಿ ನೀಡಿ ಪರಿಶೀಲಿಸಿದರು. ಚಿಕ್ಕರಾಜು, ಮುನಿಯಪ್ಪ, ಮಾದೇಶ್ ಇತರರು ಇದ್ದರು.
ಮಲ್ಲಯ್ಯಪುರ ಗ್ರಾಮದ ಕಾಡಂಚಿನ ಜಮೀನಿಗೆ ಎಸಿಎಫ್ ಮರಿಸ್ವಾಮಿ, ಆರ್‌ಎಫ್‌ಒ ನಿರಂಜನ್ ಅವರು ಭೇಟಿ ನೀಡಿ ಪರಿಶೀಲಿಸಿದರು. ಚಿಕ್ಕರಾಜು, ಮುನಿಯಪ್ಪ, ಮಾದೇಶ್ ಇತರರು ಇದ್ದರು.
Published on

ಕಡಿವಾಣ ಹಾಕಲು ರೈತರು ಅಧಿಕಾರಿಗಳ ವಿರುದ್ಧ ಆಕ್ರೋಶ

ಹನೂರು: ತಾಲೂಕಿನ ಮಲ್ಲಯ್ಯನಪುರ ಗ್ರಾಮದ ಜಮೀನುಗಳಿಗೆ ಸೋಮವಾರ ರಾತ್ರಿ ಲಗ್ಗೆ ಇಟ್ಟು ಸತಾಯಿಸುತ್ತಿದ್ದ ಕಾಡಾನೆಯೊಂದನ್ನು ರೈತರು ನಿದ್ರೆಗೆಟ್ಟು ಓಡಿಸಿದ್ದು, ಕಾಡಾನೆಗೆ ಕಡಿವಾಣ ಹಾಕುವಲ್ಲಿ ನಿರ್ಲಕ್ಷ್ಯ ವಹಿಸಿರುವ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಭಾಗದಲ್ಲಿ ಕಳೆದ ಐದಾರು ತಿಂಗಳಿನಿಂದ ಕಾಡಾನೆಯೊಂದು ಜಮೀನಿಗೆ ಲಗ್ಗೆ ಇಟ್ಟು ಬೆಳೆದಿರುವ ಫಸಲು ಹಾಗೂ ನೀರಾವರಿ ಪರಿಕರವನ್ನು ನಾಶ ಪಡಿಸುತ್ತಲೇ ಇದ್ದು, ರೈತರು ರೋಸಿ ಹೋಗಿದ್ದಾರೆ. ಜಮೀನಿಗೆ ಲಗ್ಗೆ ಇಡದಂತೆ ಕಾಡಾನೆಗೆ ಕಡಿವಾಣ ಹಾಕುವಂತೆ ರೈತರು ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಒತ್ತಾಯಿಸುತ್ತಲೇ ಇದ್ದಾರೆ. ಆದರೆ ಯಾವುದೇ ಕ್ರಮವಾಗಿಲ್ಲ. ಪರಿಣಾಮ ರಾತ್ರಿ 8ರ ವೇಳೆಯಲ್ಲಿ ಮಲ್ಲಯ್ಯನಪುರದ ಮುನಿಯಪ್ಪ, ಗೋವಿಂದಯ್ಯ ಹಾಗೂ ಚಿಕ್ಕರಾಜು ಎಂಬುವರ ಜಮೀನಿಗೆ ಕಾಡಾನೆ ಲಗ್ಗೆ ಇಟ್ಟು ಕಟಾವು ಮಾಡಿ ರಾಶಿ ಹಾಕಲಾಗಿದ್ದ ಮುಸುಕಿನ ಜೋಳವನ್ನು ತಿನ್ನುತ್ತಿತ್ತು. ಈ ಬಗ್ಗೆ ತಿಳಿದ ಸ್ಥಳೀಯ ರೈತರು ಚೀರಾಟದ ಮೂಲಕ ಆನೆಯನ್ನು ಓಡಿಸಲು ಮುಂದಾದರು. ಆದರೆ ಮೊಂಡುತನದಿಂದ ವರ್ತಿಸುತ್ತಿದ್ದ ಆನೆ ಅಕ್ಕಪಕ್ಕದ ಜಮೀನುಗಳಿಗೆ ಅಡ್ಡಾಡುತ್ತಾ ದಾಂಧಲೆ ನಡೆಸುತ್ತಲೇ ಇತ್ತು. ಸುಮಾರು 4 ಗಂಟೆಗಳ ಕಾಲ ರೈತರು ನಿದ್ರೆಗೆಟ್ಟು ಬ್ಯಾಟರಿ ಬೆಳಕಿನಲ್ಲಿ ಶಬ್ದ ಮಾಡುತ್ತಾ ಪಟಾಕಿ ಸಿಡಿಸುವುದರ ಮೂಲಕ ಕೊನೆಗೂ ಆನೆಯನ್ನು ಕಾಡಿಗಟ್ಟಿದರು. ಇದರಿಂದ ರೈತರು ಹರಸಾಹಸ ಪಡಬೇಕಾಯಿತು.
ಅಧಿಕಾರಿಗಳು ಭೇಟಿ: ಈ ಬಗ್ಗೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ತಿಳಿಸಿದಾಗ ಮಂಗಳವಾರ ಸ್ಥಳಕ್ಕಾಗಮಿಸಿದ ಎಸಿಎಫ್ ಮರಿಸ್ವಾಮಿ ಹಾಗೂ ಆರ್‌ಎಫ್‌ಒ ನಿರಂಜನ್ ಅವರು ಸಿಬ್ಬಂದಿಯೊಂದಿಗೆ ಆಗಮಿಸಿ ಪರಿಶೀಲನೆ ನಡೆಸಿದರು. ಈ ವೇಳೆ ಕಾಡಾನೆಗೆ ಕಡಿವಾಣ ಹಾಕುವಲ್ಲಿ ನಿರ್ಲಕ್ಷ್ಯ ವಹಿಸಿರುವ ಬಗ್ಗೆ ರೈತರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಈ ಭಾಗದ ಅರಣ್ಯದಂಚಿನಲ್ಲಿ ರೈಲ್ವೆ ಬ್ಯಾರಿಕೇಡ್ ಅಳವಡಿಸುವುದರ ಮೂಲಕ ಕಾಡು ಪ್ರಾಣಿಗಳ ಹಾವಳಿಯನ್ನು ತಡೆಗಟ್ಟುವಂತೆ ಒತ್ತಾಯಿಸಿದರು.
ಇದಕ್ಕೆ ಮರಿಸ್ವಾಮಿ ಅವರು ಪ್ರತಿಕ್ರಿಯಿಸಿ, ರೈಲ್ವೆ ಬ್ಯಾರಿಕೇಡ್ ಅಳವಡಿಸುವ ಸಂಬಂಧ ಪ್ರಕ್ರಿಯೆ ಟೆಂಡರ್ ಹಂತದಲ್ಲಿದೆ. ಈ ಬಗ್ಗೆ ಮುತುವರ್ಜಿ ವಹಿಸಿ ಮಾರ್ಚ್‌ನೊಳಗೆ ರೈಲ್ವೆ ಬ್ಯಾರಿಕೇಡ್ ಅಳವಡಿಸಲಾಗುವುದು ಎಂದು ಭರವಸೆ ನೀಡಿದರು. ಈ ವೇಳೆ ರೈತರು ಈ ಕಾರ್ಯ ತಪ್ಪಿದ್ದಲ್ಲಿ ರೈತ ಸಂಘಟನೆಯ ಮೂಲಕ ಪ್ರತಿಭಟನೆ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ರೈತ ಸಂಘದ ತಾಲೂಕು ಅಧ್ಯಕ್ಷ ಚಿಕ್ಕರಾಜು, ರೈತ ಮುಖಂಡರಾದ ಮಾದೇಶ್, ಶಿವರಾಜು, ಮುನಿಯಪ್ಪ, ಕನಕರಾಜು, ಮುಕುಂದ ಹಾಗೂ ಇನ್ನಿತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net